ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಅಪ್ಪಟ ಕೃಷಿ ಮತ್ತು ದೇಸಿ ಆಹಾರ ಸಂಸ್ಕೃತಿ, ಪರಂಪರೆ, ಸ್ನೇಹ-ಸೌಹಾರ್ದತೆಯ ಎಳ್ಳು ಅಮಾವಾಸ್ಯೆ ಹಬ್ಬವು ರೈತರು ಆಚರಿಸುವ ವಿಶೇಷ ಹಬ್ಬಗಳಲ್ಲೊಂದು. ಅಂತಹ ಹಬ್ಬವನ್ನು (ಇಂದು) ಜ.11ರಂದು ಆಚರಿಸಲಾಗುತ್ತಿದೆ.ಸಸ್ಯ ಮತ್ತು ಭೂತಾಯಿಯನ್ನು ಆರಾಧಿಸುವ ಅತ್ಯಂತ ಪ್ರಾಚೀನವಾದ ಈ ಸುಗ್ಗಿ ಹಬ್ಬವು ವೈಜ್ಞಾನಿಕ, ಸಾಮಾಜಿಕ, ಸಾಂಪ್ರದಾಯಿಕ ಮೌಲ್ಯಗಳ ನೆಲೆಗಟ್ಟಿನ ಮೇಲೆ ನಿಂತಿರುವ ಹಬ್ಬವಿದು. ಈ ಹಬ್ಬವನ್ನು ಮಹಾರಾಷ್ಟ್ರ, ತೆಲಂಗಾಣಾ ಮತ್ತು ಕರ್ನಾಟಕದ ಹಲವು ಜಿಲ್ಲೆಗಳ ರೈತರು ಬಹುವಾಗಿ ಶ್ರದ್ಧೆ, ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ.
ಮಾಗಿ ಚಳಿಯು ಮೆಲ್ಲನೆ ಸರಿಯುವ ಹಬ್ಬದ ಸಂದರ್ಭದಲ್ಲಿ ಬಿಳಿಜೋಳದ ತೆನೆಗಳು ಪೊಟ್ಟರಕಿಯಲ್ಲಿರುತ್ತವೆ. ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಭೂತಾಯಿಗೆ ರೈತರು ಕುಪ್ಪಸ (ಸೀಮಂತ) ಕಾರ್ಯಕ್ರಮ ಮಾಡುವರೆಂಬ ನಂಬಿಕೆ ಈ ದಿನದ ಹಿಂದಿದೆ.ಇದಕ್ಕಾಗಿ ಹೊಲದ ಕೊಂಪಿಯಲ್ಲಿ ಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ ಪೂಜಿಸಿದ ಬಳಿಕ ಪಾಂಡವರಿಗೆ ಮತ್ತು ಲಕ್ಷ್ಮೀಗೆ ತರಹೆವಾರಿ ಭಕ್ಷ್ಯಗಳ ನೈವೇದ್ಯ ಅರ್ಪಿಸುವರು.
ಹಬ್ಬದ ಮುನ್ನಾ ದಿನವೇ ಮಹಿಳೆಯರು ಮಾಗಿ ಚಳಿಗೆ ತಕ್ಕುದಾದ ಮತ್ತು ವೈಜ್ಞಾನಿಕ ಹಿನ್ನೆಲೆಯ ಪರಂಪರಾಗತ ಹಬ್ಬದೂಟವನ್ನು ಸಿದ್ಧಪಡಿಸಿಕೊಳ್ಳುವರು. ಇದರಲ್ಲಿ ಭಜ್ಜಿಪಲ್ಲ್ಯೆ ವಿಶೇಷವಾಗಿರುತ್ತದೆ. ಸಜ್ಜೆ-ಜೋಳದ ರೊಟ್ಟಿ, ಶೇಂಗಾ-ಅಗಸಿ ಚಟ್ನಿಗಳು, ಎಣ್ಣೆಗಾಯಿ ಬದನೆಕಾಯಿ ಪಲ್ಲ್ಯೆ, ಅಂಬಲಿ, ಅಕ್ಕಿ ಹುಗ್ಗಿ, ಭರ್ತಾ, ಸಜ್ಜೆ ಮತ್ತು ಜೋಳದ ಕಡುಬು, ಶೇಂಗಾ ಮತ್ತು ಹೂರಣ ಹೋಳಿಗೆಯನ್ನೂ ಮಾಡುವರು.ಹಬ್ಬದಂದು ಎಲ್ಲ ರೈತಾಪಿವರ್ಗದವರು ಸಂತಸ ಸಡಗರದಿಂದ ಕುಟುಂಬ ಸಮೇತರಾಗಿ ಹಬ್ಬದೂಟದೊಂದಿಗೆ ಹೊಲಕ್ಕೆ ಬರುವರು. ಅಡುಗೆಯನ್ನೆಲ್ಲ ಮಿಶ್ರಣ ಮಾಡಿ “ಓಲಗ್ಯಾ-ಓಲಗ್ಯಾ ಚಲ್ಲಂ ಪೋಲಗ್ಯಾ” ಮತ್ತು “ಯಾವ ತಾಯಿ ಕೊಟ್ಟಳು, ಭೂತಾಯಿ ಕೊಟ್ಟಳು”, “ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ” ಎನ್ನುತ್ತ ಹೊಲದ ತುಂಬೆಲ್ಲ ಚರಗ ಸಿಂಪಡಿಸಿ ಫಸಲು ಹುಲುಸಾಗಿ ಬೆಳೆಯಲೆಂದು ಪ್ರಾರ್ಥಿಸುವರು. ನಂತರ ಕುಟುಂಬದವರೆಲ್ಲ ಸಾಮೂಹಿಕ ಪೂಜೆ ಮತ್ತು ಸಹಭೋಜನ ಮಾಡುವರಲ್ಲದೆ ಹೊಲಕ್ಕೆ ಬಂದವರಿಗೆಲ್ಲ ಊಟ ಮಾಡಿಸುವುದು ನಿಜಕ್ಕೂ ಅಭೂತಪೂರ್ವ.
ಸಂಜೆ ಹೊತ್ತಿನಲ್ಲಿ ರೈತರು ಕುಟುಂಬದೊಂದಿಗೆ ಊರಿನ ಹನುಮಂತನನ್ನು ನಮಸ್ಕರಿಸುವರು. ಕೆಲವು ಗ್ರಾಮಗಳಲ್ಲಿ ರಾತ್ರಿ ಬಡಿಗೆ ತಿರುಗಿಸುವ, ಕೀಲು ಕುದುರೆಯ ಬೆಂಕಿ ನೃತ್ಯ ಮಾಡುವ ಸಂಪ್ರದಾಯವಿದೆ. ಈ ಹಬ್ಬವು ನಗರ ಪ್ರದೇಶಕ್ಕೂ ವಿಸ್ತರಿಸಿರುವುದು ವಿಶೇಷವಾಗಿದೆ ಎನ್ನುತ್ತಾರೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿವೃತ್ತ ಉಪ ನಿರ್ದೆಶಕರಾದ ಜಿ.ಚಂದ್ರಕಾಂತ.ಕಾಯಿಪಲ್ಲೆ ಸೋಸುವ ಸಂಭ್ರಮ:
ಪ್ರಧಾನ ಹಬ್ಬದ ಹಿಂದಿನ ದಿನ ಹಬ್ಬಕ್ಕೆ ತಯಾರಿ ಮಾಡುಕೊಳ್ಳುವದನ್ನು ಹಬ್ಬದಂತೆ ಶ್ರದ್ಧೆಯಿಂದ ಆಚರಿಸುವ ಪದ್ಧತಿ ನಮ್ಮಲಿದೆ. ದೀಪಾವಳಿ ಹಬ್ಬಕ್ಕೆ ಮುನ್ನಾದಿನ ನೀರು ತುಂಬುವ ಹಬ್ಬ.ನಾಳಿನ ಎಳ್ಳ ಅಮಾವಾಸ್ಯೆ ಮುನ್ನಾದಿನವಾದ ಬುಧವಾರ ಕಾಯಿಪಲ್ಲೆ ಸೋಸುವ ಹಬ್ಬ ನಡೆಯಿತು.ಉತ್ತರ ಕರ್ನಾಟಕದ ರೈತರ ಬಹು ದೊಡ್ಡಹಬ್ಬ ಹಾಗೂ ಹೊಸ ವರ್ಷದ ಮೊದಲ ಹಬ್ಬವಾದ ಎಳ್ಳ ಅಮವಾಸೆ. ಇದರ ಹಿಂದಿನ ದಿನ ಅಂದರೆ ಇಂದು ಕಾಯಿ ಪಲ್ಲೆ ಬಿಡಿಸುವದು ಅಥವಾ ಕಾಯಿಪಲ್ಲೆ ಸೋಸುವ ಹಬ್ಬ ಎಂದೇ ಕರೆಯುವರು.
ಮಾಘ ಮಾಸದಲಿ ಹೇರಳವಾಗಿ ಸಿಗುವ ಕಾಯಿಪಲ್ಲೆ ಮಿರಿ ಮಿರಿ ಮಿಂಚುವ ಮೆಂತೆ , ಪುಂಡಿ ಪಲ್ಲೆ ,ಅಚ್ಚ ಹಸಿರಿನಂತೆ ಕಾಣುವ ಪಾಲಕ, ಸಬ್ಬಸಗಿ, ಉಳ್ಳಾಗಡ್ಡಿ , ಗಜ್ಜರಿ, ಎಳೆ ಮೆಣಸಿನಕಾಯಿ, ಎಣ್ಗಾಯಿಗೆ ಸಣ್ಣ ಬದನೆಕಾಯಿ ಕಾಯಿ ಆರಿಸುವದು, ಹಸಿಖಾರಕ್ಕೆ ಬಲಿತ ಮೆಣಸಿನಕಾಯಿ ಬೇರೆ ಮಾಡುವದು, ಎಣ್ಣಿಯೊಳಗೆ ಉಪ್ಪು ಹಚ್ಚಿ ಹುರಿಯಲು ಎಳಿ ಮೆಣಸಿನಕಾಯಿ ಬೇರೆ ಮಾಡುವದು, ಎಳೆ ಹುಣಸೆಕಾಯಿ ಬಿಡಿಸಿ ಇಡುವದು, ಕಾಳುಗಳನ್ನು ನೆನೆಸಿಡುವದು. ಇದಕ್ಕೆಲ್ಲ ಹಬ್ಬದ ದಿನ ಸಮಯವಿರದಿರುವುದರಿಂದ ಹಿಂದಿನ ದಿನವೇ ಎಲ್ಲ ತಯಾರಿ ಮಾಡಿಡುವರು.