ಬಸವನಬಾಗೇವಾಡಿ ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯ ಮೂರನೇ ದಿನ ಬುಧವಾರ ಬಸವೇಶ್ವರ ದೇವಸ್ಥಾನದ ಸಿಬಿಎಸ್‌ಸಿಇ ಶಾಲಾ ಆವರಣದಲ್ಲಿ ಜರುಗಿದ ಭಾರ ಎತ್ತುವ ಕಸರತ್ತಿನ ವಿವಿಧ ಸ್ಪರ್ಧೆಗಳು ಜನರ ಮೈಮನ ರೋಮಾಂಚನಗೊಳಿಸಿದವು.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ) ಜಾತ್ರೆಯ ಮೂರನೇ ದಿನ ಬುಧವಾರ ಬಸವೇಶ್ವರ ದೇವಸ್ಥಾನದ ಸಿಬಿಎಸ್‌ಸಿಇ ಶಾಲಾ ಆವರಣದಲ್ಲಿ ಜರುಗಿದ ಭಾರ ಎತ್ತುವ ಕಸರತ್ತಿನ ವಿವಿಧ ಸ್ಪರ್ಧೆಗಳು ಜನರ ಮೈಮನ ರೋಮಾಂಚನಗೊಳಿಸಿದವು. ಜಟ್ಟಿಗಳು ಭಾರ ಎತ್ತುವಾಗ ನೆರೆದ ಜನರು ಕೇ ಕೇ, ಚಪ್ಪಾಳೆ ತಟ್ಟುವ ಮೂಲಕ ಅವರಿಗೆ ಹುರಿದುಂಬಿಸುತ್ತಿದ್ದರು.೧ ಕ್ವಿಂಟಾಲ್‌ಗೂ ಹೆಚ್ಚಿನ ಭಾರದ ಗುಂಡುಕಲ್ಲು, ೮೦ ರಿಂದ ೧೪೫ ಕೆಜಿಯ ಸಂಗ್ರಾಣಿ ಕಲ್ಲು, ಮೂರು ಕ್ವಿಂಟಾಲ್ ಉಸುಕಿನ ಚೀಲ, ಹಲ್ಲಿನಿಂದ ಕಬ್ಬಿಣದ ಹಾರೆ ಒಗೆಯುವುದು, ತೆಕ್ಕಿಬಡಿದುಕೊಂಡು ಜೋಳದ ಚೀಲ ಎತ್ತುವುದು ಸೇರಿ ವಿವಿಧ ಸ್ಪರ್ಧೆಗಳಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಬಲವಾನರು ಕಸರತ್ತು ಪ್ರದರ್ಶಿಸಿ ಪ್ರೇಕ್ಷಕರಿಂದ ಭೇಷ್ ಎನಿಸಿಕೊಂಡರು.ಭಾರ ಎತ್ತುವ ಸ್ಪರ್ಧೆಯಲ್ಲಿ ವಿಜೇತರಿಗೆ ಜಾತ್ರೆ ಸಮಿತಿಯಿಂದ ಪ್ರಶಸ್ತಿ ಪತ್ರ, ಬೆಳ್ಳಿ ಕಡಗ, ನಗದು ಹಣ ನೀಡಿ ಗೌರವಿಸಲಾಯಿತು.
ಎರಡು ವರ್ಷದ ಹಿಂದೆ ಹರನಾಳ ಗ್ರಾಮದ ಆನಂದ ಗುಣಕಿ ಅವರು 2.15 ಕೆಜಿ ಗುಂಡುಕಲ್ಲು ಎತ್ತುವ ಜಟ್ಟಿಗೆ 50 ತೊಲಿಯ ಬೆಳ್ಳಿ ಗದೆಯನ್ನು ಈ ಬಾರಿಯೂ ಯಾರೂ ಗೆಲ್ಲಲಿಲ್ಲ. ಗದೆ ಜಾತ್ರಾ ಕಮಿತಿ ಬಳಿಯೇ ಉಳಿದುಕೊಂಡಿತು.ಬಾದಾಮಿ ತಾಲೂಕಿನ ಹಳ್ಳಿಗೇರಿಯ 8 ವರ್ಷದ ಬಾಲಕ ಭರತಗೌಡ ಕಲ್ಲಪ್ಪ ಕಳಸಗೌಡರ 5ಕೆಜಿಯಿಂದ 24 ಕೆಜಿ ಸಂಗ್ರಾಣಿ ಕಲ್ಲು ಸಾಗು ಎತ್ತಿದೆ, ಜೀರಲಬಾವಿಯ 10 ವರ್ಷದ ಮಂಜುನಾಥ ಬಿರಾದಾರ 18 ಕೆಜಿ ಸಂಗ್ರಾಣಿ ಕಲ್ಲು ಸಾಗು ಎತ್ತಿದ. 75 ವಯಸ್ಸಿನ ನಿಡಗುಂದಿ ತಾಲೂಕಿನ ಅರಷಣಗಿ ದುಂಡಪ್ಪ ಕುಂಬಾರ ಒಂದು ಸಾವಿರ ಉಟಬೈಸಿ ಹಾಕುವುದಾಗಿ ವೇದಿಕೆಯೇರಿ ಬಿಟ್ಟು ಬಿಡದೇ ಉಟಬೈಸಿ ಹಾಕಿ ಇಳಿವಯಸ್ಸಿನಲ್ಲಿಯೂ ತಮ್ಮ ತಾಕತ್ತು ಪ್ರದರ್ಶಿಸಿದರು.
ಹನ್ನೆರಡು ವರ್ಷದಿಂದ ಈ ಜಾತ್ರೆಗೆ ಆಗಮಿಸುತ್ತಿರುವ ಜತ್ತ ತಾಲೂಕಿನ ಆಸಂಗಿ ಗ್ರಾಮದ ಅಫಜಲ ಮುಜಾವರ ಈ ಸಲವೂ 98 ಕೆಜಿ ಸಂಗ್ರಾಣಿ ಕಲ್ಲು ಸಾಗು ಹಾಕುವ ಮೂಲಕ ಹನ್ನೆರಡನೇ ಬಾರಿಗೆ ಬೆಳ್ಳಿ ಕಡಗ ತಮ್ಮದಾಗಿಸಿಕೊಂಡರು.ಪಟ್ಟಣದ ಹಿರಿಯರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜನಪದ ಗಾಯಕ ಬಸವರಾಜ ಹಾರಿವಾಳ ಕಾರ್ಯಕ್ರಮ ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಹಣ, ಪ್ರಶಸ್ತಿ ಪತ್ರ, ಬೆಳ್ಳಿ ಕಡೆ ನೀಡಿ ಸನ್ಮಾನಿಸಲಾಯಿತು.
ವಿವಿಧ ಸ್ಪರ್ಧೆಯಲ್ಲಿ ವಿಜೇತರುಃಸಂಗ್ರಾಣಿ ಕಲ್ಲು ಸಾಗ (1 ಕ್ವಿಂಟಾಲ್)- ಜತ್ತ ತಾಲೂಕಿನ ಆಸಂಗಿಯ ಅಫಜಲ್ ಮುಜಾವರ ಪ್ರಥಮ, ಬೀಳಗಿ ತಾಲೂಕಿನ ಬಿಸನಾಳದ ರಿಯಾಜ ಜಮಾದಾರ ದ್ವಿತೀಯ, ಸಂತೋಷ ಬಿರಾದಾರ, ನಾಗೂರಿನ ಗುರುರಾಜ ಭದ್ರಗೊಂಡ ತೃತೀಯ ಸ್ಥಾನ, ಸಂಗ್ರಾಣಿ ಕಲ್ಲು (2 ಕ್ವಿಂಟಾಲ್) ವತ್ತಿ ಎತ್ತುವ ಸ್ಪರ್ಧೆಯಲ್ಲಿ ಗುಳೇದಗುಡ್ಡದ ವಿಠ್ಠಲ ಮುತ್ತಪ್ಪ ಮನಿಕಟ್ಟಿ ಪ್ರಥಮ, ಗೋಕಾಕ ತಾಲೂಕಿನ ಮಳ್ಳವಂಕಿ ಗ್ರಾಮದ ಶಿವಾನಂದ ಜಾಡನವರ ದ್ವಿತೀಯ, ನಾಗೂರ ಗ್ರಾಮದ ಮುತ್ತಪ್ಪ ಶರಣಪ್ಪ ಕಡ್ಲಿಮಟ್ಟಿ ತೃತೀಯ ಸ್ಥಾನ, ಗುಂಡು ಎತ್ತುವ (2 ಕ್ವಿಂಟಾಲ್) ಸ್ಪರ್ಧೆಯಲ್ಲಿ ಗುನ್ನಾಪೂರಿನ ಶಿವಲಿಂಗಪ್ಪ ಶಿವೂರ ಪ್ರಥಮ,ನಾಗಠಾಣದ ಬೀರಪ್ಪ ಗೂಳಪ್ಪ ಪೂಜಾರಿ ದ್ವಿತೀಯ, ಮಸಬಿನಾಳದ ಮಾಳಪ್ಪ ಬಿಸನಾಳ ತೃತೀಯ ಸ್ಥಾನ ಪಡೆದುಕೊಂಡರು.
ಕ್ವಿಂಟಾಲ್ ಉಸುಕಿನ ಚೀಲ ಎತ್ತುವ ಸ್ಪರ್ಧೆಯಲ್ಲಿ ಗೋನಾಳದ ವಿಠ್ಠಲ ಹಡಗಲಿ ಪ್ರಥಮ, ಪಾದನಕಟ್ಟಿಯ ಹಣಮಂತ ಅಡಕಿ ದ್ವಿತೀಯ, ಜಂಗಿಯ ಸಂತೋಷ ಇಟಗಿ ತೃತೀಯ ಸ್ಥಾನ ಪಡೆದುಕೊಂಡರು.ಸೈ ಎನಿಸಿಕೊಂಡ ಬಲಭೀಮರ ಹಲ್ಲಿನಿಂದ ಹಾರಿ ಒಗೆಯವ ಸ್ಪರ್ಧೆಯಲ್ಲಿ ಮಡ್ಡಿಮಣ್ಣೂರಿನ ಸದಾಂ ಬಾಡಬಾಳ ಪ್ರಥಮ, ಮುಳಸಾವಳಗಿಯ ರಮೇಶ ಪಾಟೀಲ ದ್ವಿತೀಯ, ಇಂಗಳಗಿಯ ಮಾಳಪ್ಪ ಪೂಜಾರಿ ತೃತೀಯ ಸ್ಥಾನ ಪಡೆದುಕೊಂಡರು. ಗುನ್ನಾಪುರಿನ ಭೀರಪ್ಪ ಲೋಗಾಂವಿ ಮೇಟನಾಲಿಗೆ ಮೇಲೆ ನಿಂತು ಚೀಲ ಎತ್ತಿದರು. ತೆಲಗಿಯ ಕಾಂತಪ್ಪ ಈರಗಾರ ಅವರು 86 ಕೆಜಿಯ ಕಲ್ಲನ್ನು ಹಗ್ಗದಿಂದ ಕಟ್ಟಿ ಹಲ್ಲಿನಿಂದ ಎಳೆದರು. ಮುಳಸಾವಳಗಿಯ ರಮೇಶ ಪಾಟೀಲರು ನಾಲ್ಕು ಹಾರಿ ಕಟ್ಟಿ ಮೈ ಮೇಲೆ ಎತ್ತಿ ಸೈ ಎನಿಸಿಕೊಂಡರು.
ಈ ವೇಳೆ ಸಿದ್ದಲಿಂಗ ಸ್ವಾಮೀಜಿ, ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಶ್ರೀಕಾಂತ ಕೊಟ್ರಶೆಟ್ಟಿ, ಮುಖಂಡರಾದ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಎಂ.ಜಿ.ಆದಿಗೊಂಡ, ಬಸವರಾಜ ಗೊಳಸಂಗಿ, ಜಗದೀಶ ಕೊಟ್ರಶೆಟ್ಟಿ, ಸಂಗಮೇಶ ಓಲೇಕಾರ,ಜಟ್ಟಿಂಗರಾಯ ಮಾಲಗಾರ, ಸುರೇಶಗೌಡ ಪಾಟೀಲ, ಶೇಖರ ಗೊಳಸಂಗಿ, ಸಂಗಯ್ಯ ಒಡೆಯರ, ಸಂಗಪ್ಪ ಡಂಬಳ,ಸುಭಾಸ ಗಾಯಕವಾಡ, ಮಹಾಂತೇಶ ಹಂಜಗಿ, ಅಮರ ಗಾಯಕವಾಡ, ಜಾತ್ರಾ ಉತ್ಸವ ಸಮಿತಿ ಪದಾಧಿಕಾರಿಗಳು, ವಿವಿಧ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಇತರರು ಇದ್ದರು.