ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲ
ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಮಳೆಯಿಂದ ಹಾನಿಗೊಳಗಾದ ಮೂಲಸೌಕರ್ಯಗಳ ಪುನರ್ ನಿರ್ಮಾಣವನ್ನು ಶೀಘ್ರ ಪೂರ್ಣಗೊಳಿಸಿ ಎಂದು ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್. ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಬುಧವಾರ ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ರಸ್ತೆ, ವಿದ್ಯುತ್ ಕಂಬ ಸೇರಿದಂತೆ ಮತ್ತಿತರ ಹಾನಿಗೊಳಗಾದ ಮೂಲಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲು ಈಗಾಗಲೇ ಅನುದಾನ ಬಿಡುಗಡೆಯಾಗಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪಿ.ಡಿ. ಖಾತೆಯಲ್ಲಿ 10.39 ಕೋಟಿ ರು. ಅನುದಾನ ಲಭ್ಯವಿದೆ. ತಹಸೀಲ್ದಾರರ ವಿಪತ್ತು ಪಿ.ಡಿ. ಖಾತೆಯಲ್ಲಿ 1.63 ಕೋಟಿ ರು. ಅನುದಾನ ನೀಡಲಾಗಿದೆ. ವಿಕೋಪ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ. ಆದ್ದರಿಂದ ಯಾವುದೇ ಇಲಾಖೆಗಳು ಮನೆಹಾನಿ, ಜೀವ ಹಾನಿ, ಜಾನುವಾರು ಜೀವ ಹಾನಿಯ ಪರಿಹಾರ ಬಾಕಿ ಇರಿಸಿಕೊಳ್ಳಬಾರದು ಎಂದವರು ಹೇಳಿದರು.ಪ್ರಕೃತಿ ವಿಪತ್ತು ಯಾವಾಗ ಬೇಕಾದರೂ ಸಂಭವಿಸುವ ಸಾಧ್ಯತೆ ಇರುವುದರಿಂದ ಅವುಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಬೇಕು. ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಭೂಕುಸಿತ ಪ್ರದೇಶಗಳನ್ನು ಗುರುತಿಸಿ, ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇವುಗಳ ಗುಣಮಟ್ಟವನ್ನು ತಹಸೀಲ್ದಾರರು ರಿಶೀಲಿಸಬೇಕು ಎಂದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ., ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಭುವನೇಶ್ವರಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ತಹಸೀಲ್ದಾರ್‌ಗಳು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.