ಸಾರಾಂಶ
ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಫೆ. ೨೨ರಿಂದ ೨೪ರ ವರೆಗೆ ಶಿರಸಿ ಸ್ಕ್ಯಾನ್ ಡೈಗೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಶಿರಸಿ: ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಫೆ. ೨೨ರಿಂದ ೨೪ರ ವರೆಗೆ ಶಿರಸಿ ಸ್ಕ್ಯಾನ್ ಡೈಗೋಸ್ಟಿಕ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ ಉಚಿತ ಆರೋಗ್ಯ ತಪಾಸಣೆ, ಜಾಗೃತಿ ಶಿಬಿರ ಹಾಗೂ ಗಾಲಿಕುರ್ಚಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಇವೆಂಟ್ ಚೇರ್‌ಮನ್ ಮಹೇಶ ತೇಲಂಗ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆನ್ನುಹುರಿ ತೊಂದರೆಯೊಳಗಾದವರನ್ನು ಸಮಾಜದ ಮುಖ್ಯವಾಹಿನಿಗೆ ತರುವುದೇ ಮುಖ್ಯ ಉದ್ದೇಶವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆನ್ನುಹುರಿ ಸಮಸ್ಯೆಗೆ ಒಳಗಾದವರು ಸಂಖ್ಯೆ ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಶಿಬಿರ ಹಮ್ಮಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸೇವಾಧಾಮ-ಸೇವಾಭಾರತಿ ಆಶ್ರಯದಲ್ಲಿ ಶಿರಸಿ ಸ್ಕ್ಯಾನ್ ಸೆಂಟರ್, ಶಿರಸಿ ರೋಟರಿ ಕ್ಲಬ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಸಹಕಾರದಲ್ಲಿ ಫೆ. ೨೨ರಂದು ಹಮ್ಮಿಕೊಂಡ ೩೦ನೇ ಉಚಿತ ಆರೋಗ್ಯ ತಪಾಸಣೆ ಮತ್ತು ಶಿಬಿರವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಲಿದ್ದು, ಸೇವಾಧಾಮದ ಸಂಸ್ಥಾಪಕ ಕೆ. ವಿನಾಯಕ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಸುಮನ್ ಹೆಗಡೆ, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕೃಷ್ಣಮೂರ್ತಿ ಹೆಗಡೆ, ಸ್ಕ್ಯಾನ್ ಸೆಂಟರ್ ನಿರ್ದೇಶಕ ಡಾ. ದಿನೇಶ ಹೆಗಡೆ, ರೋಟರಿ ಕ್ಲಬ್ ಚೇರ್‌ಮನ್ ಮಹೇಶ ತೇಲಂಗ, ಕಾರ್ಯದರ್ಶಿ ಸರಸ್ವತಿ ಎನ್. ರವಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.ಆನಂತರ ವೈದ್ಯಕೀಯ ತಪಾಸಣೆ, ಮೆಡಿಕಲ್ ಕಿಟ್, ಸೆಲ್ಫ್ ಕೇರ್ ಕಿಟ್ ಮತ್ತು ಜಾಗೃತಿ ಕಾರ್ಯಾಗಾರ ನಡೆಯಲಿದೆ ಎಂದರು.
ಫೆ. ೨೪ರಂದು ಬೆಳಗ್ಗೆ ೯.೩೦ ರಿಂದ ಗಾಲಿಕುರ್ಚಿ ಜಾಥಾ ಏರ್ಪಡಿಸಲಾಗಿದ್ದು, ಜಾಥಾಕ್ಕೆ ಡಿಎಸ್‌ಪಿ ಗಣೇಶ ಕೆ.ಎಲ್. ಚಾಲನೆ ನೀಡಲಿದ್ದಾರೆ. ಮಾರಿಕಾಂಬಾ ದೇವಸ್ಥಾನದಿಂದ ಪ್ರಾರಂಭಿಸಿ, ಹಳೆಯ ಬಸ್ ನಿಲ್ದಾಣ ಮೂಲಕ ಸಿಪಿ ಬಜಾರ್, ದೇವಿಕೆರೆ ಮಾರ್ಗವಾಗಿ ಶಿರಸಿ ಸ್ಕ್ಯಾನ್ ಸೆಂಟರ್ ತಲುಪಲಿದೆ ಎಂದರು.ಫೆ. ೨೪ರಂದು ಮಧ್ಯಾಹ್ನ ೧೨ ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಅತಿಥಿಗಳಾಗಿ ಶಾಸಕ ಶಿವರಾಮ ಹೆಬ್ಬಾರ್, ರೋಟರಿ ಕ್ಲಬ್ ಖಜಾಂಚಿ ವಿನಾಯಕ ಜೋಶಿ, ಬೆನ್ನುಹುರಿ ಅಪಘಾತಗೊಂಡ ವಿಶೇಷಚೇತನ ಹಾಗೂ ಸೇವಾಭಾರತಿ ಸ್ವಯಂ ಸೇವಕ ಕೃಷ್ಣ ಪೂಜಾರಿ ಉಪಸ್ಥಿತರಿರಲಿದ್ದಾರೆ ಎಂದರು.
ಸೇವಾ ಭಾರತಿ ಕಾರ್ಯದರ್ಶಿ ಬಾಲಕೃಷ್ಣ ಮಾತನಾಡಿ, ಸೇವಾ ಭಾರತಿ ಸಂಸ್ಥೆಯು ಅಪಘಾತಕ್ಕೊಳಗಾಗಿ ಚಲನಶೀಲತೆ, ಆತ್ಮವಿಶ್ವಾಸ ಕಳೆದುಕೊಂಡು ಮಾನಸಿಕ ಖಿನ್ನತೆಗೊಳಗಾಗಿ ಆರ್ಥಿಕ ಸಂಕಷ್ಟದಲ್ಲಿರುವ ದಿವ್ಯಾಂಗರಿಗೆ ಪುನಶ್ಚೇತನವನ್ನು ಒದಗಿಸುತ್ತಿದೆ. ಈಗಾಗಲೇ ಸುಮಾರು ೨೨೭ ಜನರು ಪುನಶ್ಚೇತನ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಉತ್ತರಕನ್ನಡ, ಕೊಡಗು, ಹಾಸನ ಜಿಲ್ಲೆಗಳಲ್ಲಿ ೭೧೭ ಬೆನ್ನುಹುರಿ ಅಪಘಾತಕ್ಕೊಳಗಾದವರನ್ನು ಗುರುತಿಸಿ, ಅವರನ್ನು ಪುನಶ್ಚೇತನ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ೬ ಜಿಲ್ಲೆಯಲ್ಲಿ ಸುಮಾರು ೨೯ ಶಿಬಿರವನ್ನು ಇಲ್ಲಿಯವರೆಗೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಚರಣಕುಮಾರ ಎಂ (೯೬೦೬೦೪೪೮೯೨) ಎಂದರು.ಸುದ್ದಿಗೋಷ್ಠಿಯಲ್ಲಿ ರೋಟರಿ ಕಾರ್ಯದರ್ಶಿ ಸರಸ್ವತಿ ಎನ್. ರವಿ, ಸಹಾಯಕ ಕಾರ್ಯದರ್ಶಿ ವಿನಯಕುಮಾರ ಹಿರೇಮಠ ಮತ್ತಿತರರು ಇದ್ದರು.