ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ನ.28 ರಿಂದ ಡಿ. 6ರವರಗೆ 9 ದಿನಗಳ ಕಾಲ ರೋಣ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಲಿದೆ.

ಕನ್ನಡಪ್ರಭ ವಾರ್ತೆ ರೋಣ

ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಂದ ನ.28 ರಿಂದ ಡಿ. 6ರವರಗೆ 9 ದಿನಗಳ ಕಾಲ ರೋಣ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಆಧ್ಯಾತ್ಮಿಕ ಪ್ರವಚನ ಜರುಗಲಿದೆ ಎಂದು ಹಿರೇಮಠದ ಜಗದೀಶಯ್ಯ ಹಿರೇಮಠ ತಿಳಿಸಿದರು.

ಈ ಕುರಿತು ಮಂಗಳವಾರ ಸಂಜೆ ಪಟ್ಟಣದ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ನ.28ರಿಂದ ಡಿ.6ರವರೆಗೆ ಪ್ರತಿದಿನ ಸಂಜೆ 6 ಗಂಟೆಯಿಂದ 7 ಗಂಟೆವರೆಗೆ ಗವಿಶ್ರೀಗಳಿಂದ ಆದ್ಯಾತ್ಮಿಕ ಪ್ರವಚನ ಜರುಗಲಿದೆ. ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ ಸದ್ಬಾವನಾ ಪಾದಯಾತ್ರೆ ಜರುಗಲಿದೆ. ನ. 28ರಿಂದ ನ.30ರವರೆಗೆ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 8 ಗಂಟೆವರೆಗೆ 3 ದಿನ ರೋಣದಲ್ಲಿ ಹಾಗೂ ಡಿ. 1ರಂದು ಮಲ್ಲಾಪೂರ, ಡಿ. 2ರಂದು ಹಿರೇಹಾಳ, ಡಿ. 3ರಂದು ಅಬ್ಬಿಗೇರಿ, ಡಿ. 4ರಂದು ಅರಹುಣಸಿ, ಡಿ. 5ರಂದು ಹುನಗುಂಡಿ ಹಾಗೂ ಡಿ. 6ರಂದು ಸೂಡಿ ಗ್ರಾಮದಲ್ಲಿ ಪ್ರವಚನ ಪ್ರಯುಕ್ತ ಸಧ್ಭಾವನಾ ಪಾದಯಾತ್ರೆ ಜರುಗಲಿದೆ ಎಂದರು.

ಹೂವಿನ ಹಡಗಲಿಯ ಗವಿಮಠದ ಹಿರೇ ಶಾಂತವೀರ ಶ್ರೀಗಳು ಮಾತನಾಡಿ, ಪ್ರವಚನ ವೇಳೆಯಲ್ಲಿ ಶಿಸ್ತು, ಸಂಯಮ ಹಾಗೂ ಸಮಯಕ್ಕೆ ಮಹತ್ವ ನೀಡಿದರೆ ಶ್ರೀಗಳಿಗೆ ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ ಎಂದರು.

ಕೊತಬಾಳದ ಅಂಕಲಗಿ ಮಠದ ಗಂಗಾಧರ ಶ್ರೀಗಳು ಮಾತನಾಡಿ, ಪ್ರವಚನ ಆಲಿಸುವವರು ನಾನು, ನನ್ನಿಂದ ಎನ್ನುವುದನ್ನು ದೂರವಿಟ್ಟರೆ ಪ್ರವಚನಕ್ಕೆ ಸ್ವಾರ್ಥಕತೆ ಬರುತ್ತದೆ. ಶ್ರೀ ಹಿತನುಡಿಗಳನ್ನು ಆಲಿಸಿ ಜೀವನದಲ್ಲಿ ಅಳವಡಿಸಿಕೊಂಡು ಬದುಕನ್ನು ಪಾವನಗೊಳಿಸಿಕೊಳ್ಳಬೇಕು. ಗುರುವಿನ ಮಾತನ್ನು ಪರಿಪಾಲಿಸಿದರೆ ಮಾನವನಾಗಲು ಸಾಧ್ಯ ಎಂದರು.

ಸಭೆಯಲ್ಲಿ ಬೂದೀಶ್ವರ ಮಠದ ವಿಶ್ವನಾಥದೇವರು, ಕೊಪ್ಪಳ ಗವಿಮಠದ ವ್ಯವಸ್ಥಾಪಕ ಸಂಗಣ್ಣ ಗಡಗಿ ಸೇರಿದಂತೆ ರೋಣ ಹಾಗೂ ಸುತ್ತಲಿನ ಗ್ರಾಮದ ಅನೇಕ ಭಕ್ತರು ಉಪಸ್ಥಿತರಿದ್ದರು.