ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ದಾಸರಾಗಬೇಕು: ಶಂಕರ ದೇವನೂರು

| Published : Feb 24 2024, 02:33 AM IST / Updated: Feb 24 2024, 02:34 AM IST

ಸಾರಾಂಶ

ತಮ್ಮ ಬದುಕು ಎಂಬ ಅಭ್ಯುದಯದ ಬೇರಿಗೆ ಬಿಸಿ ನೀರನ್ನು ಎರೆಯಬಾರದು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಜ್ಞಾನ, ದೇಹದ ಸಾಮರ್ಥ್ಯ, ಕೌಶಲ್ಯ, ಪರಿಶ್ರಮ ಮತ್ತು ಏಕಾಗ್ರತೆ, ಸಮಯ ಪ್ರಜ್ಞೆ ರೂಢಿಸಿಕೊಂಡು ವಿವೇಕವನ್ನು ಬೆಳೆಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ದಾಸರಾಗಬೇಕು. ವಿದ್ಯಾರ್ಥಿಯ ಕಾಲ ಎಂದರೆ ಜ್ಞಾನ ಸಂಗ್ರಹಣೆಯ ಕಾಲ. ಆದ್ದರಿಂದ ಬುದ್ಧಿಯನ್ನು ಮಸೆದು ಭಾವವನ್ನು ಕಡೆದು ತತ್ವಜ್ಞರ ಬದುಕನು ಅರಿಯಬೇಕು ಎಂದು ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ತಿಳಿಸಿದರು.

ನಗರದ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಬದುಕು ಎಂಬ ಅಭ್ಯುದಯದ ಬೇರಿಗೆ ಬಿಸಿ ನೀರನ್ನು ಎರೆಯಬಾರದು. ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಜ್ಞಾನ, ದೇಹದ ಸಾಮರ್ಥ್ಯ, ಕೌಶಲ್ಯ, ಪರಿಶ್ರಮ ಮತ್ತು ಏಕಾಗ್ರತೆ, ಸಮಯ ಪ್ರಜ್ಞೆ ರೂಢಿಸಿಕೊಂಡು ವಿವೇಕವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಈ ನೆಲದ ಸಾಮರ್ಥ್ಯವನ್ನು ಅರಿತು ಪ್ರಕೃತಿಯೊಂದಿಗೆ ಅನುಸಂಧಾನ ಮಾಡಿಕೊಂಡಾಗ ಮಾತ್ರ ಅವರು ತಮ್ಮ ಗುರಿಯನ್ನು ತಲುಪಲು ಸಾಧ್ಯ. ಹೀಗಾಗಿ, ವಿದ್ಯಾರ್ಥಿಗಳ ಗುರಿ ಅಚಲವಾಗಿರಬೇಕು. ಯಾವುದನ್ನು ನೋಡಬೇಕು, ಯಾವುದನ್ನು ನೋಡಬಾರದು ಎಂಬ ವಿವೇಕ ಇರಬೇಕು ಎಂದರು.

ಉನ್ನತ ಶಿಕ್ಷಣವೆಂದರೆ ಕೇವಲ ಮಾಹಿತಿ ಸಂಗ್ರಹಿಸುವುದಷ್ಟೇ ಅಲ್ಲ, ಅದು ಜೀವನದಲ್ಲಿ ಸಾಮರಸ್ಯದಿಂದ ಬದುಕುವುದನ್ನು ತಿಳಿಸುತ್ತದೆ. ಶಿಕ್ಷಣದ ಮಹತ್ವ ಬೇರ್ಪಡಿಸುವುದಲ್ಲ ಸೇರ್ಪಡಿಸುವುದು. ವಿದ್ಯಾರ್ಥಿಗಳಲ್ಲಿರುವ ಅಜ್ಞಾನವನ್ನು ದೂರ ಮಾಡಿ, ಅವರಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿ, ನೈಪುಣ್ಯ ವರ್ಧನೆಗೆ ಅವಕಾಶ ಮಾಡಿಕೊಡುವಂತಹದು ಗುರುಗಳ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.

ಮೊಬೈಲ್‌ ಅನ್ನು ಸದ್ಬಳಕೆ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಸದಾ ಬೇರೆಯವರಿಗೆ ಅವಲಂಬಿತರಾಗಿ ಬದುಕಬಾರದು.

ವಿದ್ಯಾರ್ಥಿಗಳ ಸಾಧನೆಯ ಗುರಿ ಸತತವಾಗಿರಬೇಕು, ಕಂಡಂತಹ ಕನಸುಗಳನ್ನು ನನಸಾಗಿಸಿಕೊಳ್ಳಬೇಕು. ಗುರಿ ಗುಪ್ತವಾಗಿರಲಿ, ಸಾಧನೆ ಸತತವಾಗಿರಲಿ ಎಂದರು.

ಇದೇ ವೇಳೆ ಶಂಕರ್‌ ದೇವನೂರು ಮತ್ತು ಅನಸೂಯ ದಂಪತಿಯನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲೆ ಡಾ.ಬಿ.ಆರ್. ಜಯಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಆರ್. ತಿಮ್ಮೇಗೌಡ, ಸಹ ಪ್ರಾಧ್ಯಾಪಕಿ ಡಾ. ವಿನೋದಮ್ಮ, ಸಹಾಯಕ ಪ್ರಾಧ್ಯಾಪಕರಾದ ಎಂ. ನಾಗೇಶ, ಸಿ.ಎಂ. ಕಿರಣ್‌ ಕುಮಾರ್, ಜೆ. ಮನೋಜ್‌ ಕುಮಾರ್‌, ನಾಗಶ್ರೀ ಮೊದಲಾದವರು ಇದ್ದರು.