ಯಶಸ್ವಿ ಜೀವನ ನಡೆಸಲು ಆಧ್ಯಾತ್ಮಿಕತೆ ಅವಶ್ಯಕ: ಬಿ.ಕೆ.ಶೈಲಕ್ಕ

| Published : Mar 22 2025, 02:02 AM IST

ಯಶಸ್ವಿ ಜೀವನ ನಡೆಸಲು ಆಧ್ಯಾತ್ಮಿಕತೆ ಅವಶ್ಯಕ: ಬಿ.ಕೆ.ಶೈಲಕ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಕುಟುಂಬದ ನಿರ್ವಹಣೆ ಬದ್ಧತೆ ಇರುವುರು ಹೆಣ್ಣಿಗೆ ಮಾತ್ರ. ಯಾವುದೇ ಸಮಸ್ಯೆಗಳು ಬಂದರೆ ಅವುಗಳನ್ನು ತಾಳ್ಮೆ, ಸಹನೆ ಮತ್ತು ಸಂಯಮದಿಂದ ನಿಭಾಯಿಸುವ ವಿಶೇಷ ಕೌಶಲ್ಯ ಮಹಿಳೆಯರಲ್ಲಿರುತ್ತದೆ. ನಮ್ಮ ಮನೆ ಹೆಣ್ಣು ಮಕ್ಕಳಿಗೆ ಗೌರವ ಕೊಡುವಂತೆ ಇತರೆ ಹೆಣ್ಣು ಮಕ್ಕಳನ್ನೂ ಕೂಡ ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಜೀವನದಲ್ಲಿ ಎದುರಾಗುವ ಹಲವು ಕುಂದುಕೊರತೆ ಮತ್ತು ನಿಂದನೆಗಳಿಗೆ ಹೊಂದಾಣಿಕೆ ಮಾಡಿಕೊಂಡು ಯಶಸ್ವಿ ಜೀವನ ನಡೆಸಲು ಆಧ್ಯಾತ್ಮಿಕತೆ ಅವಶ್ಯಕತೆ ಇದೆ ಎಂದು ಪಟ್ಟಣದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ.ಶೈಲಕ್ಕ ಅಭಿಪ್ರಾಯಪಟ್ಟರು.

ತಾಲೂಕಿನ ಎಂ.ಹೊಸೂರು ಗೇಟ್ ಬಳಿಯ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಮಹರ್ಷಿ ಪತಂಜಲಿ ಮೂರ್ತಿಗೆ ಹಾರ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ, ಮನುಷ್ಯನ ಸಂಪೂರ್ಣ ಸಫಲ ಜೀವನಕ್ಕೆ ಭಾರತೀಯ ಸಂಸ್ಕೃತಿ ಆಧಾರವಾಗಿದೆ. ಇದರ ಏಳ್ಗೆಗೆ ಮಹಿಳೆ ದಾರಿ ದೀಪವಾಗಿದ್ದಾಳೆ ಎಂದರು.

ಕುಟುಂಬದ ನಿರ್ವಹಣೆ ಬದ್ಧತೆ ಇರುವುರು ಹೆಣ್ಣಿಗೆ ಮಾತ್ರ. ಯಾವುದೇ ಸಮಸ್ಯೆಗಳು ಬಂದರೆ ಅವುಗಳನ್ನು ತಾಳ್ಮೆ, ಸಹನೆ ಮತ್ತು ಸಂಯಮದಿಂದ ನಿಭಾಯಿಸುವ ವಿಶೇಷ ಕೌಶಲ್ಯ ಮಹಿಳೆಯರಲ್ಲಿರುತ್ತದೆ. ನಮ್ಮ ಮನೆ ಹೆಣ್ಣು ಮಕ್ಕಳಿಗೆ ಗೌರವ ಕೊಡುವಂತೆ ಇತರೆ ಹೆಣ್ಣು ಮಕ್ಕಳನ್ನೂ ಕೂಡ ಗೌರವಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎಂದರು.

ಅನುಸಂಧಾನ ಸಂಸ್ಥಾನದ ವೈದ್ಯೆ ಡಾ.ಸಿಂಧುಶ್ರೀ ಮಾತನಾಡಿ, ಮಹಿಳಾ ದಿನಾಚರಣೆ ಆಚರಿಸಿದ ಮಾತ್ರಕ್ಕೆ ಮಹಿಳೆಯರಿಗೆ ಶಕ್ತಿ ತುಂಬಿದಂತಾಗುವುದಿಲ್ಲ. ಎಷ್ಟೇ ಕೆಲಸದ ಒತ್ತಡವಿದ್ದರೂ ಎಲ್ಲವನ್ನೂ ನಿಭಾಯಿಸುವ ಶಕ್ತಿ ಸ್ತ್ರೀಯರಲ್ಲಿರುತ್ತದೆ. ಆದ್ದರಿಂದ ಮಹಿಳೆಯರ ಸ್ಥಾನಮಾನಕ್ಕೆ ಯಾವುದೇ ಕಳಂಕ ಬಾರದಂತೆ ಪ್ರತಿಯೊಬ್ಬರೂ ಹೆಣ್ಣುಮಕ್ಕಳನ್ನು ಗೌರವದಿಂದ ಕಾಣಬೇಕು ಎಂದರು.

ಮಹಿಳೆಯರ ಬಾಲ್ಯಾವಸ್ಥೆಯಿಂದ ವೃದ್ಧಾಪ್ಯದ ವರೆಗೆ ಹಂತ ಹಂತವಾಗಿ ಬರುವ ಸರ್ವವ್ಯಾದಿ ಕುರಿತು ರಮ್ಯಾ ವಿವರಿಸಿದರು. ಇದೇ ವೇಳೆ ಕಳೆದ 40 ವರ್ಷದಿಂದ ರಾಜಯೋಗದ ಅಭ್ಯಾಸ ಮಾಡುತ್ತಿರುವ ಲಿಂಗಮ್ಮ ಅವರನ್ನು ಸನ್ಮಾನಿಸಲಾಯಿತು. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳ ವಿಜೇತ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

ಅನುಸಂಧಾನ ಸಂಸ್ಥಾನದ ನೋಡಲ್ ಅಧಿಕಾರಿ ಡಾ.ಎಚ್.ಎಸ್.ವಾದಿರಾಜ್, ಡಾ.ನುಜಾತ್, ಕಚೇರಿ ಸಿಬ್ಬಂದಿ ಚೈತ್ರ ಸೇರಿದಂತೆ ಸ್ಥಳೀಯ ನೂರಾರು ಮಹಿಳೆಯರು ಇದ್ದರು.