ದೇವರು, ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ- ವಿಚಾರ, ಮಾನವೀಯ ಮೌಲ್ಯಗಳಿಂದ ಕೂಡಿದ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಪುರಾಣ- ಪುಣ್ಯಕಥೆ, ಧರ್ಮ ಜಾಗೃತಿ, ಸತ್ಸಂಗದಂಥ ಕಾರ್ಯಕ್ರಮಗಳು ಅವಶ್ಯ.

ಲಕ್ಷ್ಮೇಶ್ವರ: ತಾಲೂಕಿನ ಬಾಲೆಹೊಸೂರಿನ ದಿಂಗಾಲೇಶ್ವರ ಮಠದಲ್ಲಿ ಏ. ೭ ಮತ್ತು ೮ರಂದು ನಡೆಯುತ್ತಿರುವ ಜಾತ್ರಾ ಮಹೋತ್ಸವ ಹಿನ್ನೆಲೆ ಶನಿವಾರದಿಂದ ನಿತ್ಯ ಸಂಜೆ ಶ್ರೀಮಠದಲ್ಲಿ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರಾರಂಭಗೊಂಡಿತು.

ಪುರಾಣ ಪ್ರಾರಂಭೋತ್ಸವ ನೆರವೇರಿಸಿದ ಆಂಧ್ರಪ್ರದೇಶ ಉರವಕೊಂಡ ಉರಗಾದ್ರಿ ಸಂಸ್ಥಾನ ಗವಿಮಠದ ಡಾ. ಕರಿಬಸವ ರಾಜೇಂದ್ರ ಶ್ರೀಗಳು ಆಶೀರ್ವಚನ ನೀಡಿದರು.

ದೇವರು, ಧರ್ಮ, ಸಂಸ್ಕೃತಿ, ಸಂಪ್ರದಾಯ, ಆಚಾರ- ವಿಚಾರ, ಮಾನವೀಯ ಮೌಲ್ಯಗಳಿಂದ ಕೂಡಿದ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಪುರಾಣ- ಪುಣ್ಯಕಥೆ, ಧರ್ಮ ಜಾಗೃತಿ, ಸತ್ಸಂಗದಂಥ ಕಾರ್ಯಕ್ರಮಗಳು ಅವಶ್ಯ ಎಂದರು. ಮಾನವ ತನ್ನ ಬದುಕಿನ ಜಂಜಾಟದ ಮಧ್ಯೆಯೂ ಬದುಕು ಪವಿತ್ರಗೊಳಿಸಲು ಜೀವನದಲ್ಲಿ ಧರ್ಮ, ಅಧ್ಯಾತ್ಮ, ಪುರಾಣ ಸತ್ಸಂಗವನ್ನು ಅಳವಡಿಸಿಕೊಳ್ಳಬೇಕು. ಶರಣರು, ಮಹಾತ್ಮರ ಚರಿತ್ರೆಗಳನ್ನು ಆಲಿಸುವ ಮೂಲಕ ಸನ್ಮಾರ್ಗದತ್ತ ಸಾಗಬೇಕು ಎಂದರು.

ಫಕೀರ ದಿಂಗಾಲೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಶಾಂತಿ, ನೆಮ್ಮದಿಯ ಜೀವನಕ್ಕೆ ಪುರಾಣ ಪುಣ್ಯಕಥೆಗಳು ರಹದಾರಿಯಾಗಿವೆ. ತಾಂತ್ರಿಕ ಯುಗದಲ್ಲಿ ಮೊಬೈಲ್, ಟಿವಿ, ಕಂಪ್ಯೂಟರ್ ಮಾಧ್ಯಮಗಳ ಪ್ರಭಾವಕ್ಕೊಳಗಾದ ಮನುಷ್ಯ ಖಿನ್ನತೆಯಿಂದ ಬಳಲುತ್ತಾ, ನಮ್ಮ ಸಂಸ್ಕೃತಿ, ಆಚಾರ- ವಿಚಾರ, ಧರ್ಮಾಚರಣೆಗಳನ್ನು ಮರೆಯುತ್ತಿರುವುದು ವಿಷಾದದ ಸಂಗತಿ. ಈ ಕಾಲಘಟ್ಟದಲ್ಲಿ ಶರಣರ ಬದುಕಿನ ಮೌಲ್ಯಗಳು, ಆಚಾರ-ವಿಚಾರಗಳನ್ನು ಪುರಾಣ ಪ್ರವಚನದ ಮೂಲಕ ತಿಳಿಸುವುದು ಅಗತ್ಯವಾಗಿದೆ ಎಂದರು.

ಜಮಖಂಡಿಯ ಜ್ಞಾನಯೋಗಿನಿ, ಶ್ರೀದೇವಿ ಮಾತಾಜಿ ಗುಡ್ಡಾಪುರ ದಾನಮ್ಮದೇವಿ ಪುರಾಣ ಪ್ರವಚನ ಮಾಡಿ, ಗುಡ್ಡಾಪುರದ ದಾನಮ್ಮದೇವಿ ನಂಬಿದ ಭಕ್ತರ ಪಾಲಿನ ಭಾಗ್ಯದೇವತೆಯಾಗಿದ್ದಾಳೆ. ಶಿವಯೋಗ ಸಾಧನೆ, ದಾಸೋಹಸೇವೆ, ಕಾಯಕನಿಷ್ಠೆ, ಸತ್ಯ, ಧರ್ಮ, ನ್ಯಾಯ, ನಿಷ್ಠೆ ಅಷ್ಟಗುಣಗಳನ್ನು ಹೊಂದಿದ್ದ ದಾನಮ್ಮದೇವಿ ನುಡಿದದ್ದೆಲ್ಲ ಶಿವತತ್ವ- ನಡೆದದ್ದೆಲ್ಲ ಶಿವಪಥವಾಗಿದೆ ಎಂದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ರೋಣ, ರುದ್ರೇಶ ಕರಡಕಲ್ಲ ಸಂಗೀತ ಸೇವೆಗೈದರು. ಹೊನ್ನಿಗನೂರಿನ ವಿರುಪಾಕ್ಷಶಾಸ್ತ್ರಿಗಳು, ಈಶ್ವರಯ್ಯ ಮಾದಾಪುರಮಠ, ಅಶೋಕ ಮಾಗಿ, ರೇಣುಕಸ್ವಾಮಿ ವೆಂಕಟಾಪುರಮಠ ಸೇರಿ ಗ್ರಾಮದ ಹಿರಿಯರು, ಜಾತ್ರಾ ಸಮಿತಿಯವರು ಉಪಸ್ಥಿತರಿದ್ದರು. ಹುಬ್ಬಳ್ಳಿಯ ಪ್ರಭಾವತಿ ಹಿರೇಮಠ ನಿರೂಪಿಸಿದರು.