ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರುತುಮಕೂರು ದಸರಾ ಉತ್ಸವ ಕೇವಲ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗೆ ಮಾತ್ರವಲ್ಲದೆ, ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಕ್ರೀಡೆಗಳಿಗೂ ಮಹತ್ವ ನೀಡಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಕ್ರೀಡಾ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾದ ತುಮಕೂರು ಕ್ರೀಡಾ ದಸರಾ ಉತ್ಸವದ ಅಂಗವಾಗಿ ಕಬಡ್ಡಿ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ದಸರಾ ಉತ್ಸವವು ಕೇವಲ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆ ಮಾತ್ರವಲ್ಲದೆ, ಕ್ರೀಡೆಗಳ ಮೂಲಕ ಸಮಾಜದಲ್ಲಿ ಆರೋಗ್ಯ, ಸಹಕಾರ, ಬಾಂಧವ್ಯ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಮಹೋತ್ಸವ ಆಗಿದೆ ಎಂದು ಹೇಳಿದರು.ತುಮಕೂರು ದಸರಾ ಉತ್ಸವದ ಅಂಗವಾಗಿ ಜಿಲ್ಲೆಯ ಕ್ರೀಡಾಭಿಮಾನಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಟೆನ್ನಿಸ್, ಕಬಡ್ಡಿ, ಜಿಮ್ನಾಸ್ಟಿಕ್ಸ್, ನಾಡ ಕುಸ್ತಿ, ಖೋ-ಖೋ, ವಾಲಿಬಾಲ್, ಮ್ಯಾರಥಾನ್, ಚೇಸ್, ರೈಫಲ್ ಶೂಟಿಂಗ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇಂತಹ ಕ್ರೀಡೆಗಳನ್ನು ವಿಶೇಷವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಕರಲ್ಲಿ ಕ್ರೀಡೆಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಕ್ರೀಡಾ ಪ್ರತಿಭೆಗಳನ್ನು ಹೊರತರಲು ಜಿಲ್ಲಾ ಮಟ್ಟದ ಪಂದ್ಯಗಳು ವೇದಿಕೆಯಾಗಲಿವೆ ಎಂದು ಹೇಳಿದರು.ಕ್ರೀಡೆಗಳು ಯುವಕರಲ್ಲಿ ದೈಹಿಕ ಹಾಗೂ ಮಾನಸಿಕ ಶಕ್ತಿಯನ್ನು ವೃದ್ಧಿಸುವುದರೊಂದಿಗೆ ಶಿಸ್ತು ಹಾಗೂ ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಎಂದು ತಿಳಿಸಿದರು.ಕಬ್ಬಡ್ಡಿ ಪಂದ್ಯವಳಿಯಲ್ಲಿ ಒಟ್ಟು 10 ಮಹಿಳಾ ತಂಡ ಹಾಗೂ 21 ಪುರುಷರ ತಂಡ ಭಾಗವಹಿಸಲಿದ್ದು ಎಲ್ಲಾ ತಂಡದ ಆಟಗಾರರಿಗೆ ಅವರು ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರ ಡಿವೈಎಸ್ಪಿ ಚಂದ್ರಶೇಖರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರಮೇಶ್, ಜಿಲ್ಲಾ ಸರಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಜಿಲ್ಲಾ ಅರಣ್ಯಾಧಿಕಾರಿ ದೇವರಾಜು ಉಪಸ್ಥಿತರಿದ್ದರು.