ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಮಡಿಕೇರಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಪೆರಾಜೆಯ ಜ್ಯೋತಿ ಪ್ರೌಢಶಾಲೆ ಆಶ್ರಯದಲ್ಲಿ, ಜ್ಯೋತಿ ವಿದ್ಯಾಸಂಘ ಹಾಗೂ ಬೆಂಗಳೂರಿನ ಪ್ರಣವ್ ಫೌಂಡೇಶನ್ ಸಹಯೋಗದಲ್ಲಿ 14ರಿಂದ 17 ವರ್ಷದೊಳಗಿನ ವಿದ್ಯಾರ್ಥಿಗಳ ಮಡಿಕೇರಿ ತಾಲೂಕು ಮಟ್ಟದ ಕ್ರೀಡಾಕೂಟ ಪೆರಾಜೆಯ ಜ್ಯೋತಿ ಪ್ರೌಢಶಾಲೆಯ ಮೈದಾನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದಿಂದ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಮೈದಾನಕ್ಕೆ ತಂದರು. ಜ್ಯೋತಿ ವಿದ್ಯಾಸಂಘದ ಹಿರಿಯ ನಿರ್ದೇಶಕ ಎನ್.ಎ. ರಾಮಚಂದ್ರ ದೀಪ ಪ್ರಜ್ವಲಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಸಂಘದ ನಿರ್ದೇಶಕ ಹಾಗೂ ಶಾಲಾ ಸಂಚಾಲಕ ಮಹೇಶ್ ಕುಮಾರ್ ಮೇನಾಲ ಕ್ರೀಡಾಧ್ವಜಾರೋಹಣ ನೆರವೇರಿಸಿದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಯಪ್ರಜ್ಞೆ, ಪರಸ್ಪರ ಸಹಕಾರ ಹಾಗೂ ಕ್ರೀಡಾಸ್ಫೂರ್ತಿ ಬೆಳೆಯುತ್ತದೆ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಜ್ಯೋತಿ ವಿದ್ಯಾಸಂಘದ ಅಧ್ಯಕ್ಷ ರಾಕೇಶ್ ರೈ, ಕಾರ್ಯದರ್ಶಿ ರಕ್ಷಿತ್ ಕೆ.ಪಿ., ನಿರ್ದೇಶಕರಾದ ದೀಪಕ್ ನಾಗರಾಜ್, ಜ್ಞಾನೇಶ್, ಅನುಷ್ ಹಾಗೂ ಎನ್.ಎ. ರಾಮಚಂದ್ರ, ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪಿ.ವಿ., ಕೊಡಗು ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್ ಎಚ್.ಜಿ., ಜ್ಯೋತಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಿ.ಆರ್. ನಾಗರಾಜ್, ಶಾಲೆಯ ಮಾಜಿ ನಿರ್ದೇಶಕ ಹಾಗೂ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಿ.ಪಿ. ಪೂವಪ್ಪ ಉಪಸ್ಥಿತರಿದ್ದರು.

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕ ಜಿ.ಆರ್. ನಾಗರಾಜ್ ಸ್ವಾಗತಿಸಿದರು. ಶಿಕ್ಷಕರಾದ ಅರ್ಚನಕುಮಾರಿ ಹಾಗೂ ಚಂದ್ರಮತಿ ನಿರೂಪಿಸಿ, ವಂದಿಸಿದರು.