ಕನ್ನಡಪ್ರಭ ವಾರ್ತೆ ಹುಕ್ಕೇರಿ

ಕುಟುಂಬದ ಜಂಟಾಟ ಮತ್ತು ಕಚೇರಿ ಕೆಲಸಗಳ ಒತ್ತಡದದಿಂದ ಸರ್ಕಾರಿ ನೌಕರರು ಸಾಕಷ್ಟು ಒತ್ತಡಕ್ಕೆ ಒಳಗಾಗುವುದು ಸಹಜ. ಹಾಗಾಗಿ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಕ್ರೀಡೆ ಸೇರಿದಂತೆ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಹಾಗೂ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ರಾಮನಗೌಡ ಕನ್ನೋಳಿ ಅಭಿಪ್ರಾಯಪಟ್ಟರು.ಪಟ್ಟಣದ ಹೊರವಲಯದ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಎರಡು ದಿನಗಳ ಕಾಲ ನಡೆಯಲಿರುವ ಸಮಾಜ ಕಲ್ಯಾಣ ಇಲಾಖೆಯ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದ ಅವರು, ದೈಹಿಕ ಚಟುವಟಿಕೆಯ ಮುಂದುವರಿದ ಭಾಗವೇ ಕ್ರೀಡೆಯಾಗಿದೆ. ಆದ್ದರಿಂದ ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಪ್ರತಿಯೊಬ್ಬರೂ ಸ್ಪರ್ಧಾ ಮನೋಭಾವದಿಂದ ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಸಲಹೆಗಳನ್ನು ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ನೌಕರರಲ್ಲಿ ಹೊಸ ಹುರುಪು ಮತ್ತು ನವಚೈತನ್ಯ ತುಂಬಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸರಕಾರಿ ಸೇವೆ ನಿಭಾಯಿಸಿ ಸುಸ್ತಾಗಿರುವ ನೌಕರರು ಮಾನಸಿಕ ಸ್ಥಿಮಿತ ಕಾಯ್ದುಕೊಳ್ಳುವುದರ ಜೊತೆಗೆ ತಮ್ಮಲ್ಲಿರುವ ವಿವಿಧ ರೀತಿಯ ಕ್ರೀಡೆ ಹಾಗೂ ಸಾಂಸ್ಕೃತಿಕ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ. ಇದರಿಂದ ಒತ್ತಡ ನಿವಾರಣೆ ಹಾಗೂ ಮಾನಸಿಕವಾಗಿ ಸದೃಢಗೊಳ್ಳಲು ಈ ಕಾರ್ಯಕ್ರಮ ಮತ್ತಷ್ಟು ಪೂರಕವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ, ಮ್ಯಾನೇಜರ್ ಅವಿನಾಶ ಹೊಳೆಪ್ಪಗೋಳ, ಸಮಾಜ ಕಲ್ಯಾಣ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಮಲ್ಲಿಕಾರ್ಜುನ ಹೊಸಮನಿ, ವಿಸ್ತರಣಾಧಿಕಾರಿ ಎನ್.ಆರ್.ಪಾಟೀಲ, ಕಚೇರಿ ಅಧೀಕ್ಷಕರಾದ ವಿನಾಯಕ ಕಲ್ಲೇಕನವರ, ಹಣಮಂತ ಪೂಜಾರ, ಪ್ರವೀಣ ಮೇತ್ರಿ, ಸಹಾಯಕ ನಿರ್ದೇಶಕರಾದ ಬಸವರಾಜ ಚನ್ನಯ್ಯನವರ, ಗುರುಶಾಂತ ಪಾವಟೆ, ವಿಠ್ಠಲ ಚಂದರಗಿ, ಪರಶುರಾಮ ಪತ್ತಾರ, ಮಲ್ಲಿಕಾರ್ಜುನ ಉಳ್ಳಾಗಡ್ಡಿ, ಆರ್.ಆರ್.ಕುಲಕರ್ಣಿ, ಅರ್ಚನಾ ಸಾನೆ, ಹಣಮಂತ ವಕ್ಕುಂದ, ವಸತಿ ನಿಲಯದ ಮೇಲ್ವಿಚಾರಕರಾದ ರಾಜಶೇಖರ ಲಟ್ಟಿ, ಎಲ್.ಬಿ.ಮಾಲದಾರ, ಶಿವಾನಂದ ಶೆಟ್ಟಣ್ಣವರ, ಶ್ರೀಧರ ನಡುಮನಿ, ನಾಗವೇಣಿ ಹೊಳೆಯಾಚೆ, ಹೇಮಲತಾ ಬಸಲಿಂಗೋಳ, ರಾಜಶ್ರೀ ಪಾಟೀಲ, ಸಿಬ್ಬಂದಿಗಳಾದ ಶೆಟ್ಟೆಪ್ಪಾ ಹರಿಜನ, ರಾಘವೇಂದ್ರ ಜಕಬಾಳ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲೆಯ ಹದಿನೈದು ತಾಲೂಕುಗಳ ಪುರುಷ ಮತ್ತು ಮಹಿಳಾ ನೌಕರರಿಗೆ ಪ್ರತ್ಯೇಕವಾಗಿ ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಪುರುಷರಿಗಾಗಿ ಕ್ರಿಕೆಟ್, ವಾಲಿಬಾಲ್, ಕೇರಂ, ಶಟಲ್, ಡಬಲ್ ಶಟಲ್, ಭಾವಗೀತೆ, ನೃತ್ಯ, ಕಿರುನಾಟಕಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಮಹಿಳೆಯರಿಗೆ ಥ್ರೋಬಾಲ್, ಶಟಲ್, ಡಬಲ್ ಶಟಲ್, ಕೇರಂ, ಭಾವಗೀತೆ, ನೃತ್ಯ, ಕಿರುನಾಟಕ ಆಯೋಜಿಸಲಾಗಿದೆ.