ಕ್ರೀಡಾ ಚಟುವಟಿಕೆಗಳು ಕೇವಲ ದೈಹಿಕ ಕಸರತ್ತಲ್ಲ. ಅವು ಸಮಾಜದಲ್ಲಿ ಪ್ರೀತಿ, ಬಾಂಧವ್ಯ ಮತ್ತು ಸೌಹಾರ್ದತೆಯನ್ನು ಮೂಡಿಸುವಲ್ಲಿ ಪ್ರಮುಖ ಶಕ್ತಿಯಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಕುಮಾರ್ ಎಸ್. ಪಾಟೀಲ್ ಹೇಳಿದರು.
ಕನ್ನಡಪ್ರಭ ವಾರ್ತೆ ಸೊರಬ
ಕ್ರೀಡಾ ಚಟುವಟಿಕೆಗಳು ಕೇವಲ ದೈಹಿಕ ಕಸರತ್ತಲ್ಲ. ಅವು ಸಮಾಜದಲ್ಲಿ ಪ್ರೀತಿ, ಬಾಂಧವ್ಯ ಮತ್ತು ಸೌಹಾರ್ದತೆಯನ್ನು ಮೂಡಿಸುವಲ್ಲಿ ಪ್ರಮುಖ ಶಕ್ತಿಯಾಗಿವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಕುಮಾರ್ ಎಸ್. ಪಾಟೀಲ್ ಹೇಳಿದರು.ತಾಲೂಕಿನ ಶಿವಪುರ ಗ್ರಾಮದ ಜಂಬೂರ ಸಾಬ್ ಕ್ರೀಡಾಂಗಣದಲ್ಲಿ ಶಿವಪುರ ಮತ್ತು ಕತವಾಯಿ ಗ್ರಾಮಗಳ ಜಂಟಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಎಸ್‌ಕೆಪಿಎಲ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಯುವಕರಲ್ಲಿ ಅಡಗಿರುವ ಅದ್ಭುತ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಯುವ ಸಂಘಟನೆಗಳು ಮುಂದಾಗುತ್ತಿರುವುದು ಶ್ಲಾಘನೀಯ ಎಂದರು.ಶಿಕ್ಷಕ ಈರಪ್ಪ ದ್ಯಾವಾನಾಯ್ಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆಗಳು ಯುವ ಜನತೆಯನ್ನು ಒಗ್ಗೂಡಿಸುವುದಲ್ಲದೆ ಅವರಲ್ಲಿ ಶಿಸ್ತು ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಅತ್ಯಂತ ಸಹಕಾರಿಯಾಗಿವೆ. ಕ್ರೀಡಾಪಟುಗಳು ಕ್ರೀಡೆಯ ಮಹತ್ವವನ್ನು ಅರಿತು ಕ್ರೀಡೆಯಲ್ಲಿ ಭಾಗವಹಿಸಿದಾಗ ಮಾತ್ರ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಗ್ರಾಪಂ ಸದಸ್ಯ ಸಲೀಂ ಜಂಬೂರ್ ಸಾಬ್ ಅಂಕಣ ಉದ್ಘಾಟಿಸಿ ಮಾತನಾಡಿ, ಶಿವಪುರ ಮತ್ತು ಕತವಾಯಿ ಗ್ರಾಮದ ಯುವಕರು ಮತ್ತು ಕ್ರೀಡಾ ಪ್ರೇಮಿಗಳು ಒಗ್ಗೂಡಿ ಎಸ್.ಕೆ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದೇವೆ. ಇದು ನಮ್ಮ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಕ್ರೀಡೆಗಳು ಮನಸ್ಸುಗಳನ್ನು ಬೆಸೆಯುವ ಶಕ್ತಿಯನ್ನು ಹೊಂದಿದೆ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಪ್ಪ ಕತವಾಯಿ, ಆರಕ್ಷಕರಾದ ಲೋಕೇಶ್, ರಾಘವೇಂದ್ರ, ಪ್ರಮುಖರಾದ ಅಜೀಮ್ ಜಂಬೂರ್ ಸಾಬ್, ಅಜೀಜ್ ಸಾಬ್, ಮಂಜುನಾಥ್ ಶೇಟ್, ರಫೀಕ್ ಜಂಬೂರ್ ಸಾಬ್, ಮುನೀರ್ ಸಾಬ್, ಸೇರಿದಂತೆ ಗ್ರಾಮದ ಹಿರಿಯರು, ಶಿವಪುರ ಮತ್ತು ಕತವಾಯಿ ಎಸ್.ಕೆ.ಪಿ.ಎಲ್. ಕ್ರಿಕೆಟ್ ಕಮಿಟಿಯ ಪದಾಧಿಕಾರಿಗಳು, ಕ್ರೀಡಾ ಪ್ರೋತ್ಸಾಹಕರು, ಕ್ರೀಡಾಭಿಮಾನಿಗಳು, ತಂಡದ ಮಾಲೀಕರು ಉಪಸ್ಥಿತರಿದ್ದರು.