ಸಾರಾಂಶ
ಹಳಿಯಾಳ: ಜನತೆಯ ಕೆಲಸ ಮಾಡುವ ಸರ್ಕಾರಿ ನೌಕರರು ತಮ್ಮ ಕೆಲಸದ ನಡುವೆ ಮನೋಲ್ಲಾಸ ಪಡೆಯುವ ದಿಸೆಯಲ್ಲಿ ಕ್ರೀಡಾಕೂಟವನ್ನು ನಡೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕ್ರೀಡಾಕೂಟದಲ್ಲಿ ವಿವಿಧ ಇಲಾಖೆಗಳ ನೌಕರರು ಭಾಗವಹಿಸುತ್ತಿರುವುದರಿಂದ ಇದೊಂದು ಸ್ನೇಹ ಕ್ರೀಡಾಕೂಟವಾಗಲಿ ಎಂದು ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ ಹೇಳಿದರು.
ಬುಧವಾರ ಪಟ್ಟಣದ ಸರ್ಕಾರಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ ರಾಜ್ಯ ಸರ್ಕಾರಿ ನೌಕರರ ತಾಲೂಕು ಮಟ್ಟದ ಕ್ರೀಡಾಕೂಟ 2024-25ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಾರ್ವಜನಿಕ ಸೇವೆಯಲ್ಲಿರುವವರು ಸಂಯಮದಿಂದ ಹಾಗೂ ಹೆಚ್ಚು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಣೆ ಮಾಡಲು ಮಾನಸಿಕ ಆರೋಗ್ಯ ಪ್ರಮುಖವಾಗಿದೆ. ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ದಿನನಿತ್ಯದ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆಗಳಿಗೂ ಒತ್ತು ಕೊಡಬೇಕೆಂದರು.
ಸರ್ಕಾರಿ ನೌಕರರು ದಿನನಿತ್ಯದ ಒತ್ತಡದಿಂದ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ತಮ್ಮ ಆರೋಗ್ಯ ಕಡೆ ಹೆಚ್ಚಿನ ಗಮನ ವಹಿಸಬೇಕು. ಕ್ರೀಡೆ, ಯೋಗಾ ಮೊದಲಾದವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕೆಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಪಂ ಪ್ರಭಾರಿ ಇಒ ಆರ್. ಸತೀಶ್ ಮಾತನಾಡಿ, ಮುಂಬರುವ ದಿನಗಳಲ್ಲಿ ಸರ್ಕಾರಿ ಕ್ರೀಡಾಕೂಟಗಳನ್ನು ಎರಡು ದಿನ ನಡೆಸಬೇಕು. ಒಂದು ದಿನ ಕ್ರೀಡೆ ಹಾಗೂ ಇನ್ನೊಂದು ದಿನ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ನಾವು ವಿವಿಧ ಇಲಾಖೆಗಳ ಅಧಿಕಾರಿಗಳು ನೀಡಲು ಸಿದ್ದರಿದ್ದೇವೆ ಎಂದರು.
ಹಳಿಯಾಳ ಅರಣ್ಯ ವಿಭಾಗದ ಗೆಜೆಟೆಡ್ ವ್ಯವಸ್ಥಾಪಕ ರವಿ ಪಂಡಿತ, ಹೆಸ್ಕಾಂ ಎಇಇ ರವೀಂದ್ರ ಮೆಟಗುಡ್ಡ, ಸಿಪಿಐ ಜಯಪಾಲ್ ಪಾಟೀಲ, ಪಿಎಸ್ಐ ವಿನೋದ ರೆಡ್ಡಿ, ತಾಲೂಕು ವೈದ್ಯಾಧಿಕಾರಿ ಡಾ.ಅನಿಲಕುಮಾರ ನಾಯ್ಕ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ನಾಯಕ ಭಾವಿಕೇರಿ ಇದ್ದರು.ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಸಹಕಾರ ನೀಡಿ ಪ್ರೋತ್ಸಾಹಿಸಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಪ್ರಶಾಂತ ನಾಯ್ಕ, ಮಹಾಲಿಂಗೇಶ ಓಶೀಮಠ, ರವೀಂದ್ರಬಾಬು, ರಾಮಕ್ಕಾ ಕೊರ್ವಿ, ಪ್ರೊ.ಸತೀಶ ಮಾನೆ ಇದ್ದರು.
ಗಣಪತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.