ಶಿವಾಜಿನಗರ ಮೆಟ್ರೋ ನಿಲ್ದಾಣದ ಮೇಲೆ ಕ್ರೀಡಾ, ಸಾಂಸ್ಕೃತಿಕ ಕಟ್ಟಡ

| Published : Oct 10 2024, 02:26 AM IST

ಶಿವಾಜಿನಗರ ಮೆಟ್ರೋ ನಿಲ್ದಾಣದ ಮೇಲೆ ಕ್ರೀಡಾ, ಸಾಂಸ್ಕೃತಿಕ ಕಟ್ಟಡ
Share this Article
  • FB
  • TW
  • Linkdin
  • Email

ಸಾರಾಂಶ

ವಿದೇಶದ ಮೆಟ್ರೋ ನಿಲ್ದಾಣಗಳ ಮಾದರಿಯಂತೆ ಶಿವಾಜಿನಗರ ಮೆಟ್ರೋ ಭೂಗತ ನಿಲ್ದಾಣದ ಮೇಲ್ಭಾಗದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಮುಚ್ಛಯ ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಯೋಜಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ವಿದೇಶದ ಮೆಟ್ರೋ ನಿಲ್ದಾಣಗಳ ಮಾದರಿಯಂತೆ ಶಿವಾಜಿನಗರ ಮೆಟ್ರೋ ಭೂಗತ ನಿಲ್ದಾಣದ ಮೇಲ್ಭಾಗದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಸಮುಚ್ಛಯ ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಯೋಜಿಸಿದೆ.

ನಾಗರವಾರ- ಕಾಳೇನ ಅಗ್ರಹಾರ ನಡುವಿನ 21 ಕಿ.ಮೀ. ಮೆಟ್ರೋ ಗುಲಾಬಿ ಮಾರ್ಗದಲ್ಲಿ ಬರುವ ಶಿವಾಜಿನಗರ ಮೆಟ್ರೋ ನಿಲ್ದಾಣ ಕಾಮಗಾರಿ ಬಹುತೇಕ ಮುಗಿದಿದೆ. ಇಲ್ಲಿನ ಮೇಲ್ಭಾಗದಲ್ಲಿ ಸುಮಾರು 2.5 ಎಕರೆ ಸ್ಥಳ ಲಭ್ಯವಿದೆ. ಇಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ. ಈಚೆಗೆ ಮೆಟ್ರೋ ನಿಲ್ದಾಣ ಪರಿಶೀಲನೆ ನಡೆಸಿದ ಶಾಸಕ ರಿಜ್ವಾನ್‌ ಅರ್ಷದ್ ಜೊತೆಗೂ ಈ ಬಗ್ಗೆ ಪ್ರಸ್ತಾಪಿಸಲಾಗಿದೆ.

ಇಲ್ಲಿ ಒಳಾಂಗಣ ಕ್ರೀಡೆಗಳ ಜೊತೆಗೆ ಕ್ರಿಕೆಟ್‌, ಫುಟ್‌ಬಾಲ್‌, ಬಾಸ್ಕೆಟ್‌ಬಾಲ್‌, ಸ್ವಿಮ್ಮಿಂಗ್‌ ಕ್ರೀಡೆಗೆ ಅವಕಾಶ ಕಲ್ಪಿಸಲಾಗುವುದು. ಇದರ ಜೊತೆಗೆ ಬೃಹತ್‌ ಸಭಾಂಗಣವನ್ನೂ ನಿರ್ಮಿಸುವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆಗೂ ಅನುಕೂಲ ಆಗುವಂತೆ ಕೇಂದ್ರ ರೂಪಿಸುವ ಯೋಜನೆಯಿದೆ ಎಂದು ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದರು.

ಬಿಎಂಆರ್‌ಸಿಎಲ್‌ ಜೊತೆಗೆ ಬಿಬಿಎಂಪಿ ಅನುದಾನವನ್ನೂ ಕೇಳಲಾಗುವುದು. ಯೋಜನೆ ಸದ್ಯ ಪ್ರಾಥಮಿಕ ಹಂತದಲ್ಲಿದ್ದು, ಡಿಪಿಆರ್‌ ಮಾಡಿ ಅಂದಾಜು ವೆಚ್ಚ ನಿರ್ಧರಿಸಲಿದ್ದೇವೆ. ಮುಂದಿನ ಎರಡೂವರೆ ಮೂರು ವರ್ಷದಲ್ಲಿ ಇದನ್ನು ನಿರ್ಮಿಸುವ ಗುರಿಯಿದೆ. ಇದಕ್ಕೆ ಬಿಬಿಎಂಪಿ ಒಡೆತನದಲ್ಲಿರುವ ಶಾಲಾ ಮೈದಾನದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಭೂಗತ ಮೆಟ್ರೋ ನಿಲ್ದಾಣದ ಪ್ರವೇಶ, ನಿರ್ಗಮನ ದ್ವಾರ, ಸಿವಿಲ್‌ ಕಾಮಗಾರಿ ಪೂರ್ಣಗೊಂಡಿವೆ. ಎಲೆಕ್ಟ್ರಿಕ್‌ ಹಾಗೂ ಸಿಗ್ನಲಿಂಗ್ ಕಾಮಗಾರಿ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಭೂಗತ ಮೆಟ್ರೋ ನಿಲ್ದಾಣದಿಂದಲೇ ಶಿವಾಜಿನಗರ ಬಸ್‌ ನಿಲ್ದಾಣಕ್ಕೆ ನೇರವಾಗಿ ತೆರಳುವ ಅವಕಾಶವನ್ನೂ ಕಲ್ಪಿಸಲಾಗಿದೆ.