ಸಾರಾಂಶ
ದ.ಕ. ಜಿಲ್ಲಾ ಪಂಚಾಯಿತಿ, ಕಡಬ ತಾಲೂಕು ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಅಂತರ್ ತಾಲೂಕು ಕ್ರೀಡಾಕೂಟ ಸಂಘಟನಾ ಸಮಿತಿ, ಗ್ರಾಮ ಪಂಚಾಯಿತಿ ಸವಣೂರು ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ೪೩ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಶನಿವಾರ ಸವಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟ ಆಯೋಜಿಸಲಾಯಿತು.
ಸವಣೂರಿನಲ್ಲಿ ಗ್ರಾ.ಪಂ. ಸದಸ್ಯರಿಗೆ, ಸಿಬ್ಬಂದಿಗೆ ಕ್ರೀಡಾಕೂಟ ‘ಬೊಲ್ಪು’ಕನ್ನಡಪ್ರಭ ವಾರ್ತೆ ಪುತ್ತೂರು
ಗ್ರಾಮ ಪಂಚಾಯಿತಿ ಸದಸ್ಯರಿಗೆ ನಿರಂತರವಾಗಿ ಮತದಾರರ ಸಂಪರ್ಕವಿರುವುದರಿಂದ ಒತ್ತಡಗಳೂ ಹೆಚ್ಚಾಗಿದೆ. ಅವುಗಳ ನಡುವೆಯೂ ಸಮಾಜಮುಖಿ ಚಿಂತನೆಯ ಜತೆಗೆ ಶಾರೀರಿಕವಾಗಿ, ಭೌತಿಕವಾಗಿ ಸದೃಢತೆ ಬೇಕೆಂಬ ನಿಟ್ಟಿನಲ್ಲಿ ಸವಣೂರು ಪಂಚಾಯಿತಿಯಿಂದ ಎರಡು ತಾಲೂಕುಗಳ ಗ್ರಾ.ಪಂ. ಸದಸ್ಯರ, ಸಿಬ್ಬಂದಿಯ ಕ್ರೀಡಾಕೂಟ ನಡೆಸಿರುವುದು ಅಭಿನಂದನೀಯ. ಇದು ರಾಜ್ಯದಲ್ಲೇ ಪ್ರಥಮವಾಗಿದ್ದು, ಈ ಮೂಲಕ ಗ್ರಾ.ಪಂ. ಜನಪ್ರತಿನಿಧಿ, ಸಿಬ್ಬಂದಿಗೆ ಸಂಪರ್ಕ ಸಾಧಿಸಲು ಪೂರಕ ವಾತಾವರಣ ಒದಗಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ದ.ಕ. ಜಿಲ್ಲಾ ಪಂಚಾಯಿತಿ, ಕಡಬ ತಾಲೂಕು ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಅಂತರ್ ತಾಲೂಕು ಕ್ರೀಡಾಕೂಟ ಸಂಘಟನಾ ಸಮಿತಿ, ಗ್ರಾಮ ಪಂಚಾಯಿತಿ ಸವಣೂರು ಆಶ್ರಯದಲ್ಲಿ ಪುತ್ತೂರು ಮತ್ತು ಕಡಬ ತಾಲೂಕಿನ ೪೩ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ಶನಿವಾರ ಸವಣೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಸಲಾದ ಅಂತರ್ ತಾಲೂಕು ಮಟ್ಟದ ಕ್ರೀಡಾಕೂಟ ‘ಬೊಲ್ಪು ೨೦೨೫-೨೬’ ಕ್ರೀಡಾಕೂಟದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.ಅಧಿಕಾರ ವಿಕೇಂದ್ರಿಕರಣದ ನಿಜವಾದ ಅರ್ಥ ಮತ್ತು ಅನುಸಂಧಾನ ಗ್ರಾಮ ಪಂಚಾಯಿತಿಗಳಲ್ಲಿದೆ. ಗ್ರಾ.ಪಂ.ನಲ್ಲಿ ಆಡಳಿತ ಪಕ್ಷ, ಪ್ರತಿ ಪಕ್ಷ ಎಂಬುವುದಿಲ್ಲ. ಅಲ್ಲಿ ಸದಸ್ಯರು ಪಕ್ಷದ ಚಿಹ್ನೆಯಡಿ ಆಯ್ಕೆಯಾಗುವುದಿಲ್ಲ. ಅಲ್ಲಿ ಆಯ್ಕೆಯಾಗುವುದು ಜನತೆಯ ಆಶಯದಂತೆ. ಗ್ರಾ.ಪಂ.ಗೆ ವಿಶೇಷ ಅಧಿಕಾರವಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡುವ ಅನುದಾನವನ್ನು ಅನುಷ್ಟಾನಗೊಳಿಸುವುದು ಗ್ರಾ.ಪಂ.ಗಳು. ಪ್ರಧಾನ ಮಂತ್ರಿಗಳಂತೆ ಸ್ಥಳೀಯವಾಗಿ ಗ್ರಾ.ಪಂ.ಗೆ ಮಹತ್ವವಿದೆ. ಗ್ರಾ.ಪಂ. ಸದಸ್ಯರು ಹಾಗೂ ಆಡಳಿತ ನಿರಂತರವಾಗಿ ಜನಸಂಪರ್ಕ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕ್ರೀಡಾಕೂಟ ಉದ್ಘಾಟಿಸಿ, ಈ ಹಿಂದೆ ಕೋಟದಲ್ಲಿ ಶ್ರೀನಿವಾಸ ಪೂಜಾರಿ ಅವರು ವಿಧಾನ ಪರಿಷತ್ ಸದಸ್ಯರಾಗಿದ್ದಾಗ ಉಡುಪಿ, ದ.ಕ. ಜಿಲ್ಲೆಯ ಗ್ರಾ.ಪಂ. ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಗೆ ಕ್ರೀಡಾಕೂಟ ನಡೆಸುತ್ತಿದ್ದರು. ಆ ಬಳಿಕ ಕ್ರೀಡಾಕೂಟ ನಡೆದಿಲ್ಲ. ಆದರೆ ಈ ಕೊರತೆಯನ್ನು ಸವಣೂರು ಗ್ರಾ.ಪಂ. ಆಡಳಿತ ಮಂಡಳಿ ಅಂತರ್ ತಾಲೂಕುಮಟ್ಟದ ಕ್ರೀಡಾಕೂಟ ನಡೆಸುವ ಮೂಲಕ ನೀಗಿಸಿದೆ ಎಂದರು.ವಿಧಾನ ಪರಿಷತ್ ಸದಸ್ಯ ಕಿಶೋರ್ ಪುತ್ತೂರು, ಕ್ರೀಡಾಪಟುಗಳಿಂದ ಧ್ವಜ ವಂದನೆ ಸ್ವೀಕರಿಸಿದರು. ಪುತ್ತೂರು, ಕಡಬ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಧ್ವಜಾರೋಹಣ ನೆರವೇರಿಸಿದರು. ಸವಣೂರು ಗ್ರಾ.ಪಂ. ಅಧ್ಯಕ್ಷೆ ಸುಂದರಿ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಪುತ್ತೂರಿನ ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸವಣೂರು ಪ್ರಾ.ಕೃ.ಪ.ಸ.ಸಂಘ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಚಾರ್ವಾಕ ಪ್ರಾ.ಕೃ.ಪ.ಸ.ಸಂಘ ಅಧ್ಯಕ್ಷ ಗಣೇಶ ಉದನಡ್ಕ, ಕೊಳ್ತಿಗೆ ಪ್ರಾ.ಕೃ.ಪ.ಸ.ಸಂಘ ಅಧ್ಯಕ್ಷ ತೀರ್ಥಾನಂದ ದುಗ್ಗಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುದರ್ಶನ ನಾಯಕ್ ಕಂಪ, ವಿಜಯ ಬ್ಯಾಂಕ್ ನಿವೃತ್ತ ರೀಜನಲ್ ಮ್ಯಾನೇಜರ್ ಎ.ಕೃಷ್ಣ ರೈ ಪುಣ್ಚಪ್ಪಾಡಿ ತಳಮನೆ, ಕಡಬ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ಕೆ.ಸವಣೂರು, ಕಡಬ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್ ನಿರ್ದೇಶಕ ಪುತ್ತುಬಾವ ಹಾಜಿ ಮತ್ತಿತರು ಉಪಸ್ಥಿತರಿದ್ದರು. ಹಿರಿಯ ಕ್ರೀಡಾಪಟು ವಸಂತಿ ಶಿವರಾಮ ಗೌಡ ಮೆದು, ಕ್ರೀಡಾ ಜ್ಯೋತಿಯನ್ನು ಸವಣೂರು ಬಸದಿಯಿಂದ ಭಜನೆಯೊಂದಿಗೆ ಹೊರಟು ಮುಖ್ಯರಸ್ತೆಯ ಮೂಲಕ ಮೆರವಣಿಗೆಯಲ್ಲಿ ಕ್ರೀಡಾಂಗಣಕ್ಕೆ ತಂದರು. ಸವಣೂರು ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಕ್ರೀಡಾಜ್ಯೋತಿ ಸ್ವೀಕರಿಸಿದರು. ಕ್ರೀಡಾಕೂಟದ ಸಂಚಾಲಕ, ಗ್ರಾ.ಪಂ. ಸದಸ್ಯ ಗಿರಿಶಂಕರ ಸುಲಾಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಪಿಡಿಒ ವಸಂತ ಶೆಟ್ಟಿ ವಂದಿಸಿದರು. ಶಿಕ್ಷಕ ಗಣೇಶ ನಡುವಾಳ್ ನಿರೂಪಿಸಿದರು.ಕಡಬದ ೪೨೦, ಪುತ್ತೂರಿನ ೫೦೦ ಮಂದಿ ಭಾಗಿಕಡಬ ಮತ್ತು ಪುತ್ತೂರು ತಾಲೂಕು ಜೊತೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಂಚಾಯಿತಿ ಸದಸ್ಯರು ಮತ್ತು ಸಿಬ್ಬಂದಿ ಸೇರಿ ಕಡಬದಲ್ಲಿ ೪೨೦ ಮಂದಿ, ಪುತ್ತೂರು ತಾಲೂಕಿನಲ್ಲಿ ೫೦೦ ಮಂದಿ ಸ್ಪರ್ಧಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ವಯೋಮಾನದ ಮಿತಿಯಲ್ಲಿ ಓಟ, ಉದ್ದ ಜಿಗಿತ, ಎತ್ತರ ಜಿಗಿತ, ತ್ರಿವಿಧ ಜಿಗಿತ, ಗುಂಡೆಸೆತ, ಚಕ್ರ ಎಸೆತ, ಈಟಿ ಎಸೆತ, ಹಗ್ಗಜಗ್ಗಾಟ, ರಿಲೇ ಸ್ಪರ್ಧೆ ನಡೆದು ಸುಮಾರು ಮಂದಿಗೆ ೮೦೦ ಪದಕ ಮತ್ತು ಪ್ರಶಸ್ತಿ ವಿತರಣೆ ನಡೆಯಿತು.
;Resize=(128,128))
;Resize=(128,128))
;Resize=(128,128))
;Resize=(128,128))