ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಲು ಕ್ರೀಡೆಗಳು ಅತ್ಯಂತ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡಾ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳುವುದರ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಹೇಳಿದರು.ನಗರ್ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯದ ಚರಕ ಸಭಾಂಗಣದಲ್ಲಿ ವಿಜಯಪುರ ಜಿಲ್ಲಾ ಥ್ರೋಬಾಲ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಈ ಸಾಧನೆ ನಮ್ಮ ಸಂಸ್ಥೆಗೆ ಹೆಮ್ಮೆ ತರಿಸಿದೆ. ಥ್ರೋಬಾಲ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾ ಉಪನಿರ್ದೇಶಕ ಕೈಲಾಶ ಹಿರೇಮಠ, ಕಾಲೇಜಿನ ದೈಹಿಕ ನಿರ್ದೇಶಕ ಹನಮಂತ ಪವಾರ ಪರಿಶ್ರಮ ಹಾಗೂ ಸಮರ್ಪಣೆ ಮನೋಭಾವದಿಂದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಸಂಸ್ಥೆಯ ವತಿಯಿಂದ ಕಾಲೇಜಿನ ಕ್ರೀಡಾಪಟುಗಳಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ತರಬೇತಿ ಮತ್ತು ಕ್ರೀಡಾ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ವಿಜಯಪುರ ಜಿಲ್ಲಾ ಥ್ರೋಬಾಲ್ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ದೈಹಿಕ ಹಾಗೂ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅತ್ಯವಶ್ಯಕವಾಗಿವೆ. ಬಿ.ಎಲ್.ಡಿ.ಇ ಸಂಸ್ಥೆಯ ಕ್ರೀಡಾಪಟುಗಳು ಭವಿಷ್ಯದಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಸಂಸ್ಥೆಯ ಹಾಗೂ ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಲಿ ಎಂದು ಶುಭ ಹಾರೈಸಿದರು.ಬಿ.ಎಲ್.ಡಿ.ಇ ಸಂಸ್ಥೆಯ ದೈಹಿಕ ಉಪನಿರ್ದೇಶಕ ಕೈಲಾಸ ಹಿರೇಮಠ ಮಾತನಾಡಿ, ಪ್ರತಿಯೊಬ್ಬ ವಿದಾರ್ಥಿ ಕ್ರೀಡೆಯಲ್ಲಿ ಸ್ವ ಇಚ್ಚೆಯಿಂದ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ೨೦೨೩ನೇ ತಾಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ವಿಜೇತರು, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕಲಬುರಗಿ ವಲಯಮಟ್ಟದ ವಿಜೇತರು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತ ಜಿಲ್ಲಾ ಮತ್ತು ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ವಿಜೇತರಾದ ಆಯುರ್ವೇದ ಕಾಲೇಜಿನ ವಿದ್ಯಾರ್ಥಿನಿಯರಾದ ರಶ್ಮಿ ಇಂಚಗೇರಿ, ಸೌಮ್ಯಾ ಬಡಿಗೇರ, ಪೂಜಾ ಬಿರಾದಾರ, ಪಾರ್ವತಿ ಸುಬೇದಾರ, ನೇತ್ರಾವತಿ ಬಿರಾದಾರ, ಪ್ರಿಯೇಶಾ ಕಲಕೇರಿ, ಅಶ್ವಿನಿ ಬಿರಾಜದಾರ, ಭಾಗ್ಯಶ್ರೀ ಗುಗ್ಗರಿ, ಸ್ನೇಹಾ ವಠಾರ, ರುಬೀನಾ, ವೈಷ್ಣವಿ, ಪೃಥ್ವಿ ಹಾಗೂ ಸನಾ ಕೌಸರವರನ್ನು ಸನ್ಮಾನಿಸಲಾಯಿತು.ವಿಜಯಪುರ ಜಿಲ್ಲಾ ಥ್ರೋಬಾಳ ಸಂಸ್ಥೆಯ ಸಮೀರ ಬೇನಕನಹಳ್ಳಿ, ಮೋಹಮ್ಮದ ಯಾಸಿನ್ ಮುಲ್ಲಾ, ಚೇತನ ಅವಟಿ, ವಿಜಯಪುರ ಜಿಲ್ಲಾ ಥ್ರೋಬಾಲ ಸಂಸ್ಥೆಯ ಫಯಾಜ್ ತಮದಡ್ಡಿ, ಮೋಹಮ್ಮದ್ ಜಾಫರ್, ಸಾಗರ ಗಲಗಲಿ, ರಾಜೇಶ ಸಂದಿಮನಿ, ಐಶ್ವರ್ಯ ಬಿರಾದಾರ ಮುಂತಾದವರು ಇದ್ದರು.