ದೈಹಿಕ-ಮಾನಸಿಕ ಸದೃಢತೆ ಕಾಪಾಡಿಕೊಳ್ಳಲು ಕ್ರೀಡೆ ಸಹಕಾರಿ

| Published : Oct 22 2024, 12:21 AM IST

ಸಾರಾಂಶ

ಕ್ರೀಡೆ ಸಂಘಟಿತ ಸ್ಪರ್ಧಾತ್ಮಕ ಮತ್ತು ಕುಶಲತೆಯಿಂದ ಕೂಡಿದ ದೈಹಿಕ ಚಟುವಟಿಕೆ. ಜೀವನದ ಸವಾಲುಗಳನ್ನು ಅತ್ಯಂತ ಧನಾತ್ಮಕ ಮತ್ತು ಶಾಂತ ರೀತಿಯಿಂದ ಎದುರಿಸಲು ಕ್ರೀಡೆ ನಮ್ಮನ್ನು ಸಿದ್ಧಪಡಿಸುತ್ತದೆ. ಹಾಗೂ ದೈಹಿಕ ಹಾಗೂ ಮಾನಸಿಕ ಸದೃಢತೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ರಾಜ್ಯ ಬೋವಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಹೇಳಿದ್ದಾರೆ.ನೆಹರು ಒಳ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಮಹೇಶ್ ಪದವಿಪೂರ್ವ ಕಾಲೇಜು ಆಯೋಜಿಸಿರುವ 19 ವರ್ಷ ವಯೋಮಿತಿ ಒಳಗಿನ ರಾಜ್ಯಮಟ್ಟದ ಪಪೂ ಕಾಲೇಜುಗಳ 2 ದಿನದ ಬಾಕ್ಸಿಂಗ್ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ವಿದ್ಯಾಭ್ಯಾಸದ ಜತೆಗೆ ಕ್ರೀಡೆಯೂ ಸಹ ತುಂಬಾ ಮುಖ್ಯ. ಪ್ರಥಮ ಬಾರಿಗೆ ಶಿವಮೊಗ್ಗದಲ್ಲಿ ಆಯೋಜನೆಗೊಂಡಿರುವ ಈ ಬಾಕ್ಸಿಂಗ್ ಕ್ರೀಡಾಕೂಟಕ್ಕೆ 17 ಜಿಲ್ಲೆಗಳಿಂದ ಸ್ಪರ್ಧೆಗಳು ಆಗಮಿಸಿದ್ದು ತುಂಬಾ ಸಂತೋಷವಾಗಿದೆ ಎಂದು ಹೇಳಿ ಎಲ್ಲಾ ಕ್ರೀಡಾಪಟುಗಳನ್ನೂ ಅಭಿನಂದಿಸಿದರು.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ನಾಯಕ ಮಾತನಾಡಿ, ಸುಮಾರು ₹15 ಲಕ್ಷ ವೆಚ್ಚದಲ್ಲಿ ಈ ಬಾಕ್ಸಿಂಗ್ ರೌಂಡ್ ಅನ್ನು ರಾಷ್ಟ್ರಮಟ್ಟದ ಕ್ರೀಡಾಕೂಟದ ಗುಣಮಟ್ಟದಲ್ಲಿ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮ ನಮ್ಮ ಜಿಲ್ಲೆಗೆ ಹೆಮ್ಮೆ ತಂದಿದೆ ಎಂದರು.

ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಂದ್ರಪ್ಪ ಎಸ್. ಗುಂಡಪಲ್ಲಿ ಅಧ್ಯಕ್ಷತೆ ವಹಿಸಿ, ಇಂತಹ ಕ್ರೀಡೆಗಳು ನಮ್ಮಲ್ಲಿ ಖಿನ್ನತೆ ಕಡಿಮೆ ಮಾಡುವುದರ ಜತೆಗೆ ನಾವು ಸದಾ ಸದೃಢರಾಗಿ, ಧನಾತ್ಮಕ ಚಿಂತನೆ ಮಾಡಲು ಸರಕಾರಿಯಾಗುತ್ತವೆ. ಈ ರಾಜ್ಯ ಮಟ್ಟದ ಬಾಕ್ಸಿಂಗ್ ಕ್ರೀಡೆಯಲ್ಲಿ 160 ಜನ ಸ್ಪರ್ಧಾಳುಗಳು ಭಾಗವಹಿಸಿದ್ದು ಅದರಲ್ಲಿ 120 ಯುವಕರು ಹಾಗೂ 40 ಜನ ಯುವತಿಯರು ಇದ್ದಾರೆ ಎಂದು ತಿಳಿಸಿದರು.

ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎ.ಇ. ರಾಜಶೇಖರ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕರ್ನಾಟಕ ಬಾಕ್ಸಿಂಗ್ ಅಸೋಸಿಯೇಷನ್‌ ಗೌರವಾಧ್ಯಕ್ಷ ದೇವರಾಜ್ ಮಂಡನೆಕೊಪ್ಪ, ಕರ್ನಾಟಕ ಅಮೆಚೂರ್ ಬಾಕ್ಸಿಂಗ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಸಾಯಿ ಸತೀಶ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ. ವಿಜಯಕುಮಾರ್‌ ಮತ್ತಿತರರು ಇದ್ದರು.