ವ್ಯಕ್ತಿತ್ವದ ವಿಕಸನಕ್ಕೆ ಕ್ರೀಡೆ ಸಹಕಾರಿ: ಎಡಿಸಿ ಗೀತಾ ಹುಡೇದ

| Published : Jul 15 2024, 01:53 AM IST

ವ್ಯಕ್ತಿತ್ವದ ವಿಕಸನಕ್ಕೆ ಕ್ರೀಡೆ ಸಹಕಾರಿ: ಎಡಿಸಿ ಗೀತಾ ಹುಡೇದ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಪತ್ರಕರ್ತರು ಒತ್ತಡದ ಜೀವನದಿಂದ ಮುಕ್ತರಾಗಲು ನಿತ್ಯ ಕೆಲ ಕಾಲ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸಲಹೆ ನೀಡಿದರು. ಚಾಮರಾಜನಗರದಲ್ಲಿ ಪತ್ರಕರ್ತರು ಹಾಗೂ ಕುಟುಂಬದವರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಮಾತನಾಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಬೆಳೆಸಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಪತ್ರಕರ್ತರು ಒತ್ತಡದ ಜೀವನದಿಂದ ಮುಕ್ತರಾಗಲು ನಿತ್ಯ ಕೆಲ ಕಾಲ ಆರೋಗ್ಯದ ಕಡೆಗೆ ಗಮನ ಹರಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸಲಹೆ ನೀಡಿದರು.

ಪತ್ರಕರ್ತರ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇಲ್ಲಿನ ದೀನಬಂದು ಶಾಲಾವರಣದಲ್ಲಿ ಭಾನುವಾರ ಪತ್ರಕರ್ತರು ಹಾಗೂ ಕುಟುಂಬದವರಿಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಗುಂಡು ಎಸೆಯುವ ಮೂಲಕ‌ ಚಾಲನೆ ನೀಡಿ ಮಾತನಾಡಿದರು.

ಪತ್ರಕರ್ತರ ಸಂಘದ ನಿವೇಶನಕ್ಕೆ ಜಾಗ ಗುರುತಿಸಲಾಗಿದೆ. ಜಿಲ್ಲಾಧಿಕಾರಿಗಳ ಜತೆಯಲ್ಲಿ ಚರ್ಚಿಸಿ ಸದ್ಯದಲ್ಲಿಯೇ ನಿವೇಶನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧಿಕಾರಿ ಉದೇಶ ಮಾತನಾಡಿ, ಪತ್ರಕರ್ತರು ಹಾಗೂ ಪೊಲೀಸರ ಕೆಲಸದ ರೀತಿ ಬಹುತೇಕ ಒಂದೇ ರೀತಿಯಾಗಿರುತ್ತದೆ. ಹೀಗಾಗಿ, ಇಬ್ಬರೂ ಕೂಡ ಸದಾ ಒತ್ತಡದಲ್ಲಿರುತ್ತೇವೆ. ಯಾವಾಗ ಏನಾಗುತ್ತದೆ ಎನ್ನುವುದು ಹೇಳಲಾಗುವುದಿಲ್ಲ. ಹೀಗಾಗಿ, ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಎಂಥದೇ ಘಟನೆಗಳು ನಡೆದರೂ ಪೊಲೀಸರೊಂದಿಗೆ ಪತ್ರಕರ್ತರೂ ಸ್ಥಳಕ್ಕೆ ಹೋಗಬೇಕಾಗುತ್ತದೆ. ಪೊಲೀಸರು ಏನು ಮಾಡುತ್ತಾರೆ ಎನ್ನುವುದನ್ನು ಪತ್ರಕರ್ತರು ಹಾಗೂ ಪತ್ರಕರ್ತರು ಹೇಗೆ ವರದಿ ಮಾಡುತ್ತಾರೆ ಎನ್ನುವುದನ್ನು ಪೊಲೀಸರು ಗಮನಿಸುತ್ತಿರುತ್ತೇವೆ. ಇಂಥ ಒತ್ತಡದ ಕೆಲಸಗಳ ನಡುವೆ ಸ್ವಲ್ಪ ಕಾಲ ಬಿಡುವು ಮಾಡಿಕೊಂಡು ಕ್ರೀಡೆಯಲ್ಲಿ ಭಾಗವಹಿಸಿ, ಆರೋಗ್ಯ ವೃದ್ಧಿಸಿಕೊಳ್ಳಬೇಕು ಎಲ್ಲ ಧರ್ಮಕ್ಕಿಂತ ಪತ್ರಿಕಾ ಧರ್ಮ ಮೇಲು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ಮಾತನಾಡಿ, ಜಿಲ್ಲೆಯು ಕ್ರೀಡೆಯಲ್ಲಿ ಹಿಂದುಳಿದಿದೆ. ಜಿಲ್ಲೆಯ ಜನಪ್ರತಿನಿಧಿಗಳಿಗೆ ಕ್ರೀಡೆ ಬಗ್ಗೆ ಇಚ್ಛಾಶಕ್ತಿ ಇಲ್ಲ. ಹಾಗಾಗಿ ಜಿಲ್ಲೆಯ ಮಕ್ಕಳು ಜಿಲ್ಲಾ, ರಾಜ್ಯಮಟ್ಟದ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಪತ್ರಕರ್ತರು ಹಾಗೂ ಕುಟುಂಬದವರು ವಿವಿಧ ಕ್ರೀಡಾಕೂಟದಲ್ಲಿ ಭಾಗವಹಿಸಿ ನಿತ್ಯದ ಕೆಲಸದ ಒತ್ತಡದಿಂದ ಕೊಂಚ ದೂರ ಉಳಿದರು. ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಕ್ರೀಡಾ ಸ್ಫೂರ್ತಿ ಮೆರೆದರು. 100 ಮೀಟರ್ ಓಟ, ಮಡಕೆ ಒಡೆಯುವುದು, ಬಕೆಟ್ ಇನ್ ದ ಬಾಲ್, ಗುಂಡು ಎಸೆತ, ಲೆಮೆನ್ ಇನ್ ದ ಸ್ಪೂನ್, ಮ್ಯೂಸಿಕಲ್ ಚೇರ್, ಕ್ರಿಕೆಟ್ ಇತರೆ ಆಟೋಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು.

ಡಿವೈಎಸ್ ಪಿ ಲಕ್ಷ್ಮಯ್ಯ ಮಾತನಾಡಿದರು ಹಿರಿಯ ಪತ್ರಕರ್ತ ಅಬ್ರಹಾಂ ಡಿ.ಸಿಲ್ವ ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಘದ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ಹಾಗೂ ಪತ್ರಕರ್ತರು ಭಾಗವಹಿಸಿದ್ದರು.