ಸಾರಾಂಶ
ಶಿಕಾರಿಪುರದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಕ್ರೀಡಾ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಸುಭಾಷ ಚಂದ್ರ ಸ್ಥಾನಿಕ್ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ವಿದ್ಯಾರ್ಥಿಗಳ ವ್ಯಕ್ತಿತ್ವದ ವಿಕಸನಕ್ಕೆ ಸಹಕಾರಿಯಾಗುತ್ತವೆ. ಎಂದು ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಸುಭಾಷಚಂದ್ರ ಸ್ಥಾನಿಕ್ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ,ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ, 2023 ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಪ್ರಮುಖ ಕಾಲಘಟ್ಟ. ಕೇವಲ ಪಠ್ಯ ಪುಸ್ತಕ ಅಂಕಗಳಿಗೆ ಮಾತ್ರ ಸೀಮಿತವಾಗದೇ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸರ್ವತೋಮುಖ ವ್ಯಕ್ತಿತ್ವ ರೂಪಿಸಿಕೊಳ್ಳಿ. ಕಾಲಹರಣದಿಂದ ಬದುಕನ್ನು ಕತ್ತಲಾಗಿಸಿಕೊಳ್ಳದಂತೆ ಶಿಸ್ತು, ಸಂಯಮ ರೂಢಿಸಿಕೊಂಡು ಜಾಗ್ರತೆಯಿಂದ ವರ್ತಿಸಿ ಎಂದು ತಿಳಿಸಿದರು.ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದು, ಶಿಕ್ಷಣದಿಂದ ಕಟ್ಟಕಡೆಯ ವ್ಯಕ್ತಿ ವಂಚಿತನಾಗದಂತೆ ಹಲವು ಸೌಲಭ್ಯ ಕಲ್ಪಿಸಿದೆ. ಸುಸಜ್ಜಿತ ಕಾಲೇಜು, ಹಾಸ್ಟೆಲ್, ನುರಿತ ಉಪನ್ಯಾಸಕರ ಸಹಿತ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಿದೆ. ಸೌಲಭ್ಯವನ್ನು ಸದ್ಭಳಕೆ ಮಾಡಿಕೊಂಡು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತಾಲೂಕಿಗೆ ಕೀರ್ತಿ ತರುವಂತೆ ಮಾಡಲು ಸಹಕಾರ ಸಮಿತಿ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದರು.
ಇತಿಹಾಸ ಉಪನ್ಯಾಸಕ ಎಂ.ವಿ.ಹಾಲಪ್ಪ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯದರ್ಶಿ ಬಂಗಾರಪ್ಪ, ಬಿ ಕ್ರೀಡಾ ಕಾರ್ಯದರ್ಶಿ ದಿನಕರ್, ಉಪನ್ಯಾಸಕ ಸುರಶ್ ಲಮಾಣಿ, ಜಡಿಯಪ್ಪ ಎಸ್ ಪಿ, ಮಂಜುನಾಥ್ ನಾಯಕ್, ಸುರೇಶ್ ಡಿ ಸಂತೋಷ್, ಯತೀಶ್, ಫಾಮಿದ, ನಾಗರಾಜ್, ಸೀತಾರಾಮ್ ಇದ್ದರು.