ಸಾರಾಂಶ
ಮಧುಗಿರಿ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಲ ನೀಡುತ್ತವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಮಧುಗಿರಿ: ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಬಲ ನೀಡುತ್ತವೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಶನಿವಾರ ಇಲ್ಲಿನ ರಾಜೀವ್‌ಗಾಂಧಿ ಕ್ರೀಡಾಂಗಣದಲ್ಲಿ ತಾಲೂಕು ಪದವಿ ಪೂರ್ವ ಕಾಲೇಜುಗಳ ವತಿಯಿಂದ ಏರ್ಪಡಿಸಿದ್ದ 2024-25ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.ಕ್ರೀಡೆಗಳು ಪರಸ್ಪರರಲ್ಲಿ ಸ್ನೇಹ, ಸೌಹಾರ್ದತೆ ಪ್ರೀತಿ, ವಿಸ್ವಾಸ ಸೋದರತ್ವದ ಮನೋ ಭಾವನೆಯನ್ನು ಮೂಡಿಸುತ್ತವೆ. ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಮತ್ತು ಸ್ಪರ್ಧಾ ಚಟುವಟಿಕೆಗಳಲ್ಲಿ ಭಾಗವಹಿಸುವ ಭಾವನೆ ಬೆಳಸುತ್ತವೆ ಎಂದರು.
ಕ್ರೀಡೆಗಳಲ್ಲಿ ಉಲ್ಲಾಸ, ಉತ್ಸಾಹ ಇರುತ್ತದೆ. ಕ್ರೀಡೆಗಳು ವಿದ್ಯಾರ್ಥಿ ಜೀವನದ ಒಂದು ಅವಿಭಾಜ್ಯ ಅಂಗ. ಆದ್ದರಿಂದ ಕ್ರೀಡಾಳುಗಳು ಸೋಲು -ಗೆಲುವನ್ನು ಸಮಾನಗಿ ಸ್ವೀಕರಿಸಬೇಕು. ಸೋಲೇ ಗೆಲುವಿನ ಮೆಟ್ಟಿಲು, ಆದ್ದರರಿಂದ ಕ್ರೀಡಾ ಪಟುಗಳು ಹೃದಯ ವೈಶಾಲ್ಯತೆ ಬೆಳಸಿಕೊಂಡು ಆಟಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಕ್ರೀಡಾ ಪಟುಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಅಂಕಗಳ ಮೀಸಲಾತಿ ದೊರಕುತ್ತದೆ. ಆದ್ದರಿಂದ ಗುಣ ಮಟ್ಟದ ಶಿಕ್ಷಣ ಕಲಿಯುವ ಜೊತೆಗೆ ಕ್ರೀಡೆಗೂ ಆದ್ಯತೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಜಾತಿ, ಮತ , ಧರ್ಮ ಬೇಧವಿಲ್ಲದೆ ಕ್ರೀಡೆಗಳು ಮನುಷ್ಯ ಸಂಬಂಧಗಳನ್ನು ಒಗ್ಗೂಡಿಸುತ್ತವೆ. ಆದ್ದರಿಂದ ವಿದ್ಯಾರ್ಥಿ ದಿಸೆಯಲ್ಲಿಯೇ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮುಖೇನ ತಮ್ಮ ಭವಿಷ್ಯವನ್ನು ಉಜ್ವಲ ಗೊಳಿಸಿಕೊಳ್ಳಿ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪು.ಪೂ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಡಾ.ಬಾಲಗುರುಮೂರ್ತಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಹೊಸಕೆರೆ ಕಾಲೇಜು ಪ್ರಾಂಶುಪಾಲ ರಂಗಪ್ಪ, ದಬ್ಬೇಘಟ್ಟ ಪ್ರಾಂಶುಪಾಲ ಕೃಷ್ಣಮೂರ್ತಿ ಮತ್ತಿತರರಿದ್ದರು.