ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಯು.ಟಿ.ಖಾದರ್‌

| Published : Feb 12 2024, 01:30 AM IST

ಸಾರಾಂಶ

ಉಡುಪಿ - ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಹೊಳಪು ಕ್ರೀಡೋತ್ಸವ ಸಾಂಸ್ಕೃತಿಕ ಸ್ಪರ್ಧೆ - ಹೊಳಪು 2024ಕ್ಕೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಕೋಟ

ಸ್ಥಳೀಯ ಮಟ್ಟದ ಜನಪ್ರತಿನಿಧಿಗಳು ಅತ್ಯಂತ ಒತ್ತಡದಿಂದ ಕೆಲಸ ನಿರ್ವಹಿಸಬೇಕಾದ ಅನಿರ್ವಾಯತೆ ಇದೆ. ಈ ಒತ್ತಡದಿಂದ ಹೊರಬರಲು ಕ್ರೀಡೆಯಂತಹ ಕಾರ್ಯಕ್ರಮಗಳು ಸಹಕಾರಿ ಎಂದು ರಾಜ್ಯ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಇಲ್ಲಿನ ವಿವೇಕ ಶಿಕ್ಷಣ ಸಂಸ್ಥೆಗಳ ಕ್ರೀಡಾಂಗಣದಲ್ಲಿ ಕೋಟತಟ್ಟು ಗ್ ಪಂಚಾಯಿತಿ ಮತ್ತು ಕೋಟ ಡಾ.ಶಿವರಾಮ ಕಾರಂತ ಪ್ರತಿಷ್ಠಾನದ ಆಯೋಜನೆಯಲ್ಲಿ ನಡೆದ ಉಡುಪಿ - ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಹೊಳಪು ಕ್ರೀಡೋತ್ಸವ ಸಾಂಸ್ಕೃತಿಕ ಸ್ಪರ್ಧೆ - ಹೊಳಪು 2024ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಮತ್ತು ಕಾರ್ಯಕ್ರಮದ ರೂವಾರಿ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪಂಚಾಯತ್ ರಾಜ್ ಮತ್ತುನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು.

ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಧ್ವಜಾರೋ ಹಣ ನೆರವೇರಿಸಿದರು. ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ ಶೆಟ್ಟಿ ಪ್ರತಿಜ್ಞಾವಿಧಿ ಭೋದಿಸಿದರು. ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಕ್ರೀಡಾಜ್ಯೋತಿ ಸ್ವೀಕರಿಸಿದರು. ಅದಾನಿ ಪವರ್ ಯು.ಪಿ.ಸಿ.ಎಲ್. ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಆಳ್ವ ಬಲೂನು ಹಾರಿಸಿದರು. ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಬ್ರಹ್ಮಾವರ ತಾಪಂ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ ಮತ್ತಿತರರು ಇದ್ದರು.

ಪ್ರತಿಷ್ಠಾನದ ಗೌರವಾಧ್ಯಕ್ಷ ಆನಂದ ಸಿ. ಕುಂದರ್ ಸ್ವಾಗತಿಸಿದರು. ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.

ಆಯಾ ಪಂಚಾಯಿತಿಗಳ ಸದಸ್ಯರು ಪ್ರತ್ಯೇಕ ಸಾಂಪ್ರದಾಯಿಕ ಧರಿಸು ತೊಟ್ಟು ಪಥ ಸಂಚಲನ ನಡೆಸಿದರು. ಜೊತೆಗೆ ವಿವಿಧ ಸ್ಥಬ್ದಚಿತ್ರಗಳ ಪ್ರದರ್ಶನ, ಯಕ್ಷಗಾನದ ವೇಷಗಳು, ಡೋಲು ವಾದನ, ಕಂಬಳ ಕೋಣಗಳು, ಕಹಳೆ ವಾದನ, ಕೋಳಿಪಡೆ, ಚಂದ್ರಯಾನ ಸ್ಥಬ್ದಚಿತ್ರಗಳು ಮೆರುಗು ನೀಡಿತು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ತೋರಿದ ಪಂಚಾಯತ್‌ಗಳಿಗೆ ಬಹುಮಾನ ವಿತರಿಸಲಾಯಿತು. ಪಥ ಸಂಚಲನದಲ್ಲಿ ವಿಜೇತ ತಂಡಕ್ಕೆ ಬಹುಮಾನ ನೀಡಲಾಯಿತು.