ಸಾರಾಂಶ
- ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಸಂಸದ ಚಾಲನೆ
ಕನ್ನಡಪ್ರಭ ವಾರ್ತೆ ಕೊಪ್ಪಳ
ಆರೋಗ್ಯಯುತ ಜೀವನಕ್ಕೆ ದೈಹಿಕ ಆರೋಗ್ಯ ಅಷ್ಟೇ ಮುಖ್ಯವಾಗಿರುತ್ತದೆ. ಕ್ರೀಡೆಯಿಂದ ದೈಹಿಕ ಆರೋಗ್ಯ ಸದೃಢವಾಗಿರುತ್ತದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಕೊಪ್ಪಳ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಯುವಜನತೆ ಕ್ರೀಡೆಯಲ್ಲಿ ಭಾಗಿಯಾಗಲು ಹೆಚ್ಚು ಆಸಕ್ತಿ ತೋರಬೇಕು. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿಯ ಗಮನ, ಶಿಸ್ತು, ಏಕಾಗ್ರತೆ ಹೆಚ್ಚುತ್ತದೆ ಹಾಗೂ ದೇಹವನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿಡಲು ಕ್ರೀಡೆಯು ಅತೀ ಮುಖ್ಯವಾಗಿದೆ. ಕ್ರೀಡೆಯು ಜೀವನದಲ್ಲಿ ಆತ್ಮಸ್ಥೈರ್ಯ ಮತ್ತು ಧೈರ್ಯ ಹೆಚ್ಚಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿಜೇತರಾಗಿ, ಮುಂದೆ ವಿಭಾಗ ಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ, ರಾಜ್ಯ ಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಮಾತನಾಡಿ, ಕ್ರೀಡೆಯಿಂದ ದೈಹಿಕ ಲಾಭದ ಜೊತೆಗೆ ಮಾನಸಿಕ ಕಾರ್ಯವು ಗಟ್ಟಿಗೊಳ್ಳುತ್ತದೆ. ಮಕ್ಕಳು ಪಾಠದ ಜೊತೆಗೆ ಪ್ರೀತಿ, ಸಂತೋಷದಿಂದ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಬೇಕು. ಕ್ರೀಡೆಯು ಈ ಎರಡು ದಿನಗಳಿಗೆ ಮಾತ್ರ ಸೀಮಿತವಾಗಬಾರದು, ಪ್ರತಿ ದಿನ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ಕೊಪ್ಪಳ ಜಿಲ್ಲೆಯ ಕ್ರೀಡಾಪಟುಗಳು ಈ ಬಾರಿ ಉತ್ತಮ ಪ್ರದರ್ಶನ ನೀಡಿ, ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.ಕ್ರೀಡಾಕೂಟದಲ್ಲಿ ಭಾಗವಹಿಸುವಂತಹ ಕ್ರೀಡಾಪಟುಗಳಿಗೆ ಆಟದ ಸಮಯದಲ್ಲಿ ಆರೋಗ್ಯದಲ್ಲಿ ತೊಂದರೆ ಉಂಟಾದರೆ ನಿರ್ಲಕ್ಷಿಸದೆ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ತೆಗೆದುಕೊಳ್ಳಿ. ಯಾವುದೇ ಗೊಂದಲ ಇದ್ದರೆ ಅದನ್ನು ಸಮಿತಿಯವರಿಗೆ ತಿಳಿಸಿ ಬಗೆಹರಿಸಿಕೊಳ್ಳಿ. ಜೊತೆಗೆ ಕ್ರೀಡೆಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಿ ಎಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಅಧಿಕಾರಿ ವಿಠ್ಠಲ ಜಾಬಗೌಡರ ಮಾತನಾಡಿ, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟವನ್ನು 2 ದಿನಗಳ ಕಾಲ ಆಯೋಜನೆ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಭಾಗವಹಿಸಬೇಕು. ನಿರ್ಣಯದ ಕುರಿತು ಏನೇ ಸಮಸ್ಯೆ ಕಂಡು ಬಂದರೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಎ.ಬಸವರಾಜ, ತಾಲೂಕಿನ ಕ್ರೀಡಾಧಿಕಾರಿಗಳಾದ ಶರಣಬಸಪ್ಪ ಬಂಡಿಹಾಳ, ಮಂಜುನಾಥ ಗೊಂಡಬಾಳ ಸೇರಿದಂತೆ ಮತ್ತಿತರರಿದ್ದರು.
ಕ್ರೀಡೆಯಲ್ಲಿ ಭಾಗಿಯಾದ ಸಿಇಒ:ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾದ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಗುಂಡು ಎಸೆತ ಸ್ಪರ್ಧಾಳುಗಳೊಂದಿಗೆ ಮಾತನಾಡಿ ಗುಂಡು ಎಸೆಯುವ ಮೂಲಕ ಅವರಿಗೆ ಸ್ಫೂರ್ತಿ ನೀಡಿದರು.