ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಪ್ರಚಾರದ ನೆಲೆಯಲ್ಲಿ ಸಹಕರಿಸುತ್ತಿರುವ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿವೃತ್ತ ಹಿರಿಯ ಕ್ರೀಡಾ ಸಂಪಾದಕ ಸ್ಟಾನ್ ರಾಯನ್ ವಿಶೇಷ ಉಪನ್ಯಾಸ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗೆ ಪ್ರಚಾರದ ನೆಲೆಯಲ್ಲಿ ಸಹಕರಿಸುತ್ತಿರುವ ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಉದ್ದೇಶಿಸಿ ನಿವೃತ್ತ ಹಿರಿಯ ಕ್ರೀಡಾ ಸಂಪಾದಕ ಸ್ಟಾನ್ ರಾಯನ್ ವಿಶೇಷ ಉಪನ್ಯಾಸ ನೀಡಿದರು.ವಿಶ್ವದ ಅನೇಕ ದೇಶಗಳಿಗೆ ಪ್ರವಾಸ ಮಾಡಿ ಒಲಿಂಪಿಕ್ಸ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕ್ರೀಡಾಕೂಟಗಳನ್ನು ವರದಿ ಮಾಡಿದ ಅನುಭವವನ್ನು ಹಂಚಿಕೊಂಡ ಅವರು, ಕ್ರೀಡಾ ಪತ್ರಿಕೋದ್ಯಮದಲ್ಲಿ ನೈತಿಕತೆ ಮತ್ತು ಪ್ರಾಮಾಣಿಕತೆಯೇ ವರದಿಯ ಮೂಲ ತತ್ವವಾಗಬೇಕು ಎಂದು ಹೇಳಿದರು.ಕ್ರೀಡಾ ವರದಿಗಾರರು ಸ್ಥಳೀಯ ಕ್ರೀಡಾ ಪಂದ್ಯಗಳಿಗೆ ಹಾಜರಾಗುವ ಮೂಲಕ ಕ್ರೀಡೆಯ ನೈಜ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು. ಸಮಯದ ಪರಿಧಿಯೊಳಗೆ ಕೆಲಸ ನಿರ್ವಹಿಸುವ ಕಲೆಯನ್ನು ಮೊದಲು ಅರಿಯಬೇಕು. ಸರಳ ಹಾಗೂ ಸ್ಪಷ್ಟ ಬರವಣಿಗೆಗೆ ಆದ್ಯತೆ ನೀಡಬೇಕು. ಕ್ರೀಡಾ ವರದಿಗಳು ಜನರಿಗಾಗಿಯೇ ಹೊರತು ಯಾರನ್ನೂ ಮೆಚ್ಚಿಸಲು ಅಲ್ಲ ಎಂದರು.ಈ ಸಂದರ್ಭ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಮಾದರಿಯ ರೀತಿಯಲ್ಲಿ ಆಯೋಜಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಕ್ರೀಡಾಪಟುಗಳು, ಅಧಿಕಾರಿಗಳು ಮತ್ತು ಅತಿಥಿಗಳಿಗೆ ಉಚಿತ ಊಟ ಹಾಗೂ ವಸತಿ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಒದಗಿಸಿರುವುದು ಅಪರೂಪದ ವ್ಯವಸ್ಥೆಯಾಗಿದೆ ಎಂದು ಪ್ರಶಂಸಿಸಿ, ಇಂತಹ ಆತಿಥ್ಯವೇ ರಾಷ್ಟ್ರಮಟ್ಟದ ಕ್ರೀಡಾಕೂಟಗಳ ಯಶಸ್ಸಿಗೆ ಕಾರಣವಾಗುತ್ತದೆ ಎಂದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಕಾರ‍್ಯಕ್ರಮದಲ್ಲಿ ವಿಭಾಗದ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು.ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ, ಅನಿಮೇಶನ್ ವಿಭಾಗದ ಮುಖ್ಯಸ್ಥ ರವಿ ಮೂಡುಕೊಣಾಜೆ, ಉಪನ್ಯಾಸಕರಾದ ಅಕ್ಷಯ, ಹನ, ವಿನೀತ, ಆಕಾಶ ಇದ್ದರು.