ಮಾನಸಿಕ, ದೈಹಿಕ ಸದೃಢತೆಗೆ ಕ್ರೀಡೆ ಪೂರಕ: ಜಿ.ಸುರೇಶ್

| Published : Feb 02 2024, 01:02 AM IST

ಸಾರಾಂಶ

ಕ್ರೀಡಾರಂಗದ ಬೆಳವಣಿಗೆಗೆ ಒತ್ತು ಕೊಡಬೇಕಿದೆ ಎಂದು ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದರು. ಗುರುನಾನಕ್‌ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಬೀದರ್‌

ಕ್ರೀಡೆಯಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು, ಮಾನಸಿಕ ಮತ್ತು ದೈಹಿಕ ಬೆಳವಣಿಗೆಯು ಸಾಧ್ಯವಾಗುತ್ತದೆ ಎಂದು ಜಿಲ್ಲಾ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರಾದ ಜಿ. ಸುರೇಶ ತಿಳಿಸಿದರು.

ನಗರದ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗುರುನಾನಕ್‌ ಪಬ್ಲಿಕ್ ಶಾಲೆಯ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಯುವ ಪೀಳಿಗೆ ಈ ದೇಶದ ನಿಜವಾದ ಸಂಪತ್ತಾಗಿದ್ದು, ಈ ಸಂಪತ್ತು ಬಲಿಷ್ಠವಾಗಬೇಕಾದರೆ ಮಿತ ಹಾಗೂ ಹಿತ ಆಹಾರ ವಿಶೇಷವಾಗಿ ಜಂಕ್‌ಫುಡ್ ರಹಿತ ಆಹಾರ ಸೇವನೆ ಅಗತ್ಯವಾಗಿದೆ ಎಂದರು.

ದೇಶದ ಪ್ರಗತಿಯಲ್ಲಿ ಶಿಕ್ಷಣದ ಪಾತ್ರವು ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ಕಾಳಜಿ ತೋರಬೇಕು. ತಂತ್ರಜ್ಞಾನದಲ್ಲಿ ನಾವು ಸಾಕಷ್ಟು ಮುಂದುವರಿದಿದ್ದೇವೆ. ಅದರಂತೆ ಕ್ರೀಡಾರಂಗದಲ್ಲಿ ಕೂಡ ಅಷ್ಟೇ ಪ್ರಮಾಣದಲ್ಲಿ ಮುಂದೆ ಬರೋಣ ಎಂದು ಸಲಹೆ ನೀಡಿದರು.

ಯಾವುದೇ ದೇಶದ ಅಭಿವೃದ್ಧಿಯಾಗಲು ಆ ದೇಶದ ಆರ್ಥಿಕ ಬೆಳವಣಿಗೆಯ ಮೇಲೆಯೆ ನಿರ್ಧರಿಸಲಾಗುತ್ತದೆ. ಆದರೆ, ಶೈಕ್ಷಣಿಕ, ಕ್ರೀಡಾರಂಗಗಳು ಕೂಡ ಅದಕ್ಕೆ ಪೂರಕವಾಗಿರುತ್ತವೆ ಎಂಬುದನ್ನು ಅರ್ಥೈಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರೀಡಾರಂಗದ ಬೆಳವಣಿಗೆಗೆ ಒತ್ತು ಕೊಡಬೇಕಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹೇಶಕುಮಾರ ಎಸ್.ಪಾಟೀಲ ಮಾತನಾಡಿ, ಗುರುನಾನಕ ಶಾಲೆಯು ಶಿಸ್ತುಬದ್ಧವಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸುತ್ತದೆ ಎಂಬುದಕ್ಕೆ ಇವತ್ತಿನ ಈ ಕಾರ್ಯಕ್ರಮ ಕೂಡ ಒಂದು ಸಾಕ್ಷಿಯಾಗಿದೆ. ಜಿಲ್ಲೆಯ ಕೀರ್ತಿಯು, ಶಾಲೆಯ ಕೀರ್ತಿಯು ವಿಶ್ವಮಟ್ಟದಲ್ಲಿ ಬೆಳಗುವ ದಿಶೆಯಲ್ಲಿ ತಾವೇಲ್ಲರೂ ಕ್ರೀಡೆಯಲ್ಲಿ ಆಸಕ್ತಿ ತೋರಬೇಕು. ಪ್ರತಿಯೊಬ್ಬರು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಮಕ್ಕಳಿಗೆ ಸಲಹೆ ಮಾಡಿದರು.

ಗುರುನಾನಕ್‌ ಪಬ್ಲಿಕ್ ಶಾಲೆಯ ಉಪಾಧ್ಯಕ್ಷರಾದ ಡಾ. ರೇಷ್ಮಾ ಕೌರ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಮಕ್ಕಳು ಹೆಚ್ಚಾಗಿ ಕಂಪ್ಯೂಟರ್, ಇಂಟರನೆಟ್ ಬಳಸುವತ್ತ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮನೆಯಲ್ಲಿ ಕುಳಿತು ಮೊಬೈಲ್‌ನಲ್ಲಿ ಆಟವಾಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳೆವಣಿಗೆ ಸರಿಯಾಗಿ ಆಗುವುದಿಲ್ಲ. ಇದನ್ನು ಎಲ್ಲ ಪಾಲಕರು ಅರಿತು ಮಕ್ಕಳಿಗೆ ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಅವರಿಗೆ ಪ್ರೇರೇಪಿಸಬೇಕು ಎಂದು ಸಲಹೆ ಮಾಡಿದರು.

ಪ್ರಾಂಶುಪಾಲರಾದ ಎನ್.ರಾಜು, ಅಮಜದ ಅಲಿ, ಹನುಮಾನ, ಮುಖ್ಯ ಗುರುಗಳಾದ ಆರೀಫ್ ಹಾದಿ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.