ಸಾರಾಂಶ
ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ, ಚಿಕ್ಕಮಗಳೂರಿನಲ್ಲಿ ನಡೆದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟ ಹಾಗೂ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಪ್ರಕರಣಗಳನ್ನು ಖಂಡಿಸಿ ಭಯೋತ್ಪಾಧನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಹಿಂದೂಪರ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.ಹನುಮಂತಪ್ಪ ವೃತ್ತದಿಂದ ಆಜಾದ್ ಪಾರ್ಕ್ ಸರ್ಕಲ್ ವರೆಗೆ ಕೇಸರಿ ಬಾವುಟಗಳನ್ನು ಹಿಡಿದು ಮೆರವಣಿಗೆ ನಡೆಸಿ, ಭಯೋತ್ಪಾದಕರು, ಪಾಕ್ ಪರ ಘೋಷಣೆ ಕೂಗಿದವರು ಮತ್ತು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ವಿಶ್ವಹಿಂದೂ ಪರಿಷತ್ ಹಾಸನ ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಮಾತನಾಡಿ, ರಾಜ್ಯದ ಶಕ್ತಿ ಕೇಂದ್ರ ವಿಧಾನ ಸೌಧದಲ್ಲಿ ಒಂದು ಪಕ್ಷದ ಕಾರ್ಯಕರ್ತರು ನಮ್ಮ ಶತ್ರು ರಾಷ್ಟ್ರಕ್ಕೆ ಜಿಂದಾಬಾದ್ ಹೇಳುವಂತಹ ಸ್ಥಿತಿ ನಿರ್ಮಾಣ ವಾಗಿರುವುದು ಅಪಾಯಕಾರಿ ಎಂದರು. ಇದಲ್ಲದೆ ರಾಜಾರೋಷವಾಗಿ ಸಾರ್ವಜನಿಕ ಸ್ಥಳದಲ್ಲಿ ಸ್ಫೋಟಿಸಿ ಹಲವರು ಗಾಯಗೊಳ್ಳುವಂತಾಗಿರುವುದು ಜನತೆ ಯನ್ನು ಆತಂಕಕ್ಕೆ ತಳ್ಳಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಜನರಿಗೆ ನಂಬಿಕೆ ಇಲ್ಲದ ಸ್ಥಿತಿ ಉಂಟಾಗಿದೆ. ಇದೆಲ್ಲ ವನ್ನೂ ಖಂಡಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸುತ್ತೇವೆ ಎಂದು ಹೇಳಿದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ. ನರೇಂದ್ರ ಮಾತನಾಡಿ, ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಎರಡು ಪ್ರಕರಣ ಪ್ರತ್ಯೇಕವೇ ಆದರೂ ಒಂದೊಂದಕ್ಕೊಂದು ಪೂರಕವಾಗಿವೆ. ಸಂವಿಧಾನಾತ್ಮಕವಾಗಿ ರಚನೆ ಆಗಿರುವ ಕಾಂಗ್ರೆಸ್ ಸರ್ಕಾರದ ಕಲಾಪ ನಡೆಯುವ ಸಂದರ್ಭದಲ್ಲೇ ಹಿಂದೂ, ಸಂವಿಧಾನ ವಿರೋಧಿ, ಭಾರತದ ವಿರುದ್ಧ ಮಾನಸಿಕತೆ ಹೊಂದಿದ ಮತಾಂಧರು ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎಂದು ದೂರಿದರು.ಶತ್ರು ರಾಷ್ಟ್ರ ಪಾಕಿಸ್ಥಾನ ಜಿಂದಾಬಾದ್ ಕೂಗಿದವರ ಪರವಾಗಿ ಕಾಂಗ್ರೆಸ್ ಸರ್ಕಾರ ನಿಂತು ಸಂವಿಧಾನಕ್ಕೆ ಅಪಚಾರ ವೆಸಗಿದೆ. ಪಾಕಿಸ್ತಾನ ಜಿಂದಾಬಾದ್ ಎನ್ನುವ ಹೇಳಿಕೆ ತಿರುಚಿ ಹೇಳುವ ಅಧಿಕಾರವನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಎಫ್‌ಎಸ್‌ಎಲ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿರುವುದು ದೃಢಪಟ್ಟಮೇಲೆ ಸರ್ಕಾರ ಎಚ್ಚೆತ್ತುಕೊಂಡಿದೆ. ದೇಶದಲ್ಲಿ ಅತೀ ಹೆಚ್ಚು ಫ್ಲೊರೆನ್ಸಿಕ್ ಲ್ಯಾಬ್‌ಗಳನ್ನು ಬೆಂಗಳೂರು ಹೊಂದಿದೆ. ಯಾವುದೇ ಪ್ರಕರಣದ ವರದಿಯನ್ನು ಕೇವಲ ಕೆಲವೇ ದಿನಗಳಲ್ಲಿ ಪಡೆದುಯಲು ಸಾಧ್ಯವಿದೆ. ಆದರೆ ರಾಷ್ಟ್ರವಿರೋಧಿ ಘೋಷಣೆ ಕೂಗಿದವರ ವಿರುದ್ಧ ಬೇಗನೆ ವರದಿ ತರಿಸಿ ಪ್ರಕರಣ ದಾಖಲಿಸಲು ಈ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ ಎಂದು ದೂರಿದರು. ನಮ್ಮ ರಾಜ್ಯದ ಪೊಲೀಸರಿಗೆ ಸಾಮರ್ಥ್ಯವಿಲ್ಲ ಎಂದೇನಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತಿಲ್ಲ. ಇದರ ನಡುವೆ ಎಫ್‌ಎಸ್‌ಎಲ್ ವರದಿ ಬಂದ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇಷ್ಟಾದರೆ ಸಾಲದು. ಅವರ ವಿರುದ್ಧ ಕೋಕಾ ದಂತಹ ಕಠಿಣ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಘಟನೆಯಲ್ಲೂ ದುಷ್ಕರ್ಮಿಗಳು ಹಿಂದೂಗಳನ್ನೇ ಗುರಿಯಾಗಿಸಿದ್ದಾರೆ. ಆದರೆ ಈ ದುರ್ಬಲ ಸರ್ಕಾರಕ್ಕೆ ಇದುವರೆಗೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಇದು ಇಚ್ಛಶಕ್ತಿ ಪ್ರಶ್ನೆಯಲ್ಲ. ಸರ್ಕಾರದ ಹಿಂದೂ ವಿರೋಧಿ ಧೋರಣೆ ಕಾರಣ ಎಂದು ದೂರಿದರು. ವಿಶ್ವ ಹಿಂದೂ ಪರಿಷತ್‌ನ ರಂಗನಾಥ್ ಮಾತನಾಡಿ, ಧರ್ಮದ ಹೆಸರಲ್ಲಿ ಬಾಂಬ್‌ಗಳನ್ನು ಹಾಕುತ್ತಿರುವ ಭಯೋತ್ಪಾದ ಕರನ್ನು ಪೋಷಿಸುತ್ತಿರುವುದು ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ನಾವು ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷ. ಬಾಂಬ್ ಪ್ರಕರಣವನ್ನು ಸಿಲ್ಲಿ, ಸಣ್ಣಘಟನೆ ಎಂದು ಹೇಳುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು. ಭಾರತ ಮಾತೆ, ಶ್ರೀರಾಮನಿಗೆ ಜೈಕಾರ ಕೂಗುವ ಜಾಗದಲ್ಲಿ ಪಕ್ಕದ ಭಿಕಾರಿ ಶತ್ರು ರಾಷ್ಟ್ರ ಪಾಕಿಸ್ತಾನಕ್ಕೆ ಜೈಕಾರ ಕೂಗಲಾಗಿದೆ. ಅವರ ಪರವಾಗಿ ನೇರವಾಗಿ ನಾಸಿರ್ ಖಾನ್, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ಮಾತನಾಡುತ್ತಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್.ದೇವರಾಜ್ ಶೆಟ್ಟಿ, ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಎಚ್.ಡಿ. ಕಲ್ಮರುಡಪ್ಪ, ಸೇರಿದಂಎ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ವಿವಿಧ ಮುಖಂಡರು, ಮಹಿಳಾ ಕಾರ್ಯಕರ್ತರು ಭಾಗವಹಿಸಿದ್ದರು.
6 ಕೆಸಿಕೆಎಂ 1ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟ ಹಾಗೂ ವಿಧಾನಸೌಧದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಕೂಗಿದ ಪ್ರಕರಣಗಳನ್ನು ಖಂಡಿಸಿ ಭಯೋತ್ಪಾಧನ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಹಿಂದೂಪರ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.