ಸಾರಾಂಶ
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಾರಿ ಬರದ ಮಹಿಳಾ ಮೀಸಲಾತಿಯು, ಬಿಜೆಪಿಯಿಂದ ಜಾರಿಗೊಳ್ಳುವ ಮೂಲಕ ಮಹಿಳೆಯರ ಬಹುದಿನಗಳ ಕನಸು ನನಸಾಗಿದೆ.
ಕನ್ನಡಪ್ರಭ ವಾರ್ತೆ ಹೊಸನಗರ
ಶೇ.33ರಷ್ಟು ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಯು ಮುಂದಿನ ಚುನಾವಣೆಯಲ್ಲಿ ಜಾರಿಗೆ ಬರಲಿದೆ ಎಂದು ಶಾಸಕ ಅರಗ ಜ್ಞಾನೇಂದ್ರ ಹೇಳಿದರು.ಇಲ್ಲಿನ ಗಾಯತ್ರಿ ಮಂದಿರದಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ‘ನಾರಿ ಶಕ್ತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಜಾರಿ ಬರದ ಮಹಿಳಾ ಮೀಸಲಾತಿಯು, ಬಿಜೆಪಿಯಿಂದ ಜಾರಿಗೊಳ್ಳುವ ಮೂಲಕ ಮಹಿಳೆಯರ ಬಹುದಿನಗಳ ಕನಸು ನನಸಾಗಿದೆ ಎಂದರು.ಕೇವಲ ಮನೆ, ಕೃಷಿ ಕೆಲಸಕ್ಕೆ ಮೀಸಲಾಗಿದ್ದ ಮಹಿಳೆಯರು, ಈಗ ಗಗನಯಾನ ಸೇರಿದಂತೆ ಎಲ್ಲಾ ರಂಗಗಳಲ್ಲಿಯೂ ಸಕ್ರಿಯರಾಗಿದ್ದಾರೆ ಎಂದರು.
ಮೋದಿ ಸರ್ಕಾರವು ಮಹಿಳೆಯರಿಗಾಗಿ ಅನೇಕ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಿ, ಜಾರಿಗೊಳಿಸಿದೆ. ಸುಕನ್ಯ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಶೇ. 50ರವರೆಗೂ ಸಹಾಯಧನ ನೀಡಲಾಗುತ್ತದೆ ಎಂದರು.ಸಂಜೀವಿನಿ ಒಕ್ಕೂಟ ಯೋಜನೆಯು ಕೇಂದ್ರ ಸರ್ಕಾರದ ದೂರಗಾಮಿ ಯೋಜನೆ. ಪ್ರತಿ ಒಕ್ಕೂಟಕ್ಕೆ 8.50 ಕೋಟಿ ರು. ವಿತರಿಸಿದೆ. ತಾಲೂಕು ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಈ ಒಕ್ಕೂಟ ಕಾರ್ಯನಿರ್ವಹಿಸಲಿದೆ ಎಂದು ನುಡಿದರು.
ವೇದಿಕೆಯಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ ಆಶಾ ರವೀಂದ್ರ, ಉಪಾಧ್ಯಕ್ಷೆ ಪದ್ಮಾ ಸುರೇಶ. ಪಟ್ಟಣ ಪಂಚಾಯಿತಿ ಸದಸ್ಯೆ ಕೃಷ್ಣವೇಣಿ, ಪದಾಧಿಕಾರಿಗಳಾದ ಸುಮಾ ಸುರೇಶ್, ಲಕ್ಷ್ಮೀ ಶ್ರೀನಿವಾಸ್ ಮತ್ತಿತರರು ಇದ್ದರು.