ಸಾರಾಂಶ
ಭ್ರಮರಾಂಭ ಸಹಿತ ಶ್ರೀಮಲ್ಲಿಕಾರ್ಜುನಸ್ವಾಮಿ, ಮಹಾಗಣಪತಿ, ಸುಬ್ರಹ್ಮಣ್ಯ ಮತ್ತು ಬಾಲಭೈರವೇಶ್ವರಸ್ವಾಮಿ ಧ್ಜಜಸ್ಥಂಭ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನೆ, ನೂತನ ದೇವಾಲಯದ ವಿಮಾನಗೋಪುರದ ಮಹಾ ಕುಂಬಾಭಿಷೇಕ, ಅನ್ನಪೂರ್ಣೇಶ್ವರಿ ಭವನ ಮತ್ತು ಸಮುದಾಯ ಭವನದ ಲೋಕಾರ್ಪಣೆ.
ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಹಾಲ್ತಿ ಗ್ರಾಮದ ಸ್ವರ್ಗಾಶ್ರಮದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಭ್ರಮರಾಂಭ ಸಹಿತ ಶ್ರೀ ಮಲ್ಲಿಕಾರ್ಜುನಸ್ವಾಮಿ, ಮಹಾಗಣಪತಿ, ಸುಬ್ರಹ್ಮಣ್ಯ ಮತ್ತು ಬಾಲಭೈರವೇಶ್ವರಸ್ವಾಮಿ ಧ್ಜಜಸ್ಥಂಭ ಹಾಗೂ ಪರಿವಾರ ದೇವತೆಗಳ ಪ್ರತಿಷ್ಠಾಪನೆ, ನೂತನ ದೇವಾಲಯದ ವಿಮಾನಗೋಪುರದ ಮಹಾ ಕುಂಬಾಭಿಷೇಕ, ಅನ್ನಪೂರ್ಣೇಶ್ವರಿ ಭವನ ಮತ್ತು ಸಮುದಾಯ ಭವನದ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು.ವೇದ ಪಾರಾಯಣ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ಮಹಾ ಸಂಕಲ್ಪ ಹಾಲ್ತಿ ಬೆಟ್ಟದ ಮೂಲ ದೇವತೆ ಮಲ್ಲಿಕಾರ್ಜುನಸ್ವಾಮಿ ಅವರ ಅನುಜ್ಞಾ ಪೂರ್ವಕ ವಿವಿಧ ಅಭಿಷೇಕಗಳು, ಕಲಶಸ್ಥಾಪನೆ, ವೇದಿಕಾರ್ಚಮೆ, ಗಣಪತಿ, ನವಗ್ರಹ ಹೋಮ, ಅಸ್ತ್ರ ಹೋಮ, ಧ್ರವ್ಯಾಹುತಿ, ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ, ಗ್ರಾಮ ಪ್ರದಕ್ಷಿಣೆ, ಗಂಗೆ ಪೂಜೆ ಅನುಜ್ಞೆ ಪೂಜೆ ವಾಸ್ತು ಪರ್‍ಯನ್ನಿಕರಣ ಪೂಜೆಗಳನ್ನು ಆದಿಚುಂಚನಗಿರಿ ಮೈಸೂರು ಶಾಖಾ ಮಠ ಹಾಗೂ ಸ್ವರ್ಗಾಶ್ರಮ ಹಾಲ್ತಿ ಶಾಖಾ ಮಠದ ಕಾರ್ಯದರ್ಶಿ ಸೋಮೇಶ್ವರನಾಥಸ್ವಾಮೀಜಿ ನೆರವೇರಿಸಿದರು.
ಮಹಾಲಕ್ಷ್ಮಿ ಕಳಶ ಸ್ಥಾಪನೆ, ಅಗ್ನಿಕಾರ್ಯ, ನೂತನ ವಿಗ್ರಹಗಳಿಗೆ ಜಲಾಧಿವಾಸ, ಕ್ಷೀರಾಧಿವಾಸ, ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ, ಸಂಜೆ ಮಹಾಸಂಕಲ್ಪ ಅಂಕುರಾರ್ಪಣ ರಕ್ಷಾಬಂಧನ, ಅಗ್ನಿ ಕಾರ್‍ಯ ಹೋಮ ಪೂರ್ಣಾಹುತಿ ಸೇರಿದಂತೆ ದೇವತೆಗಳ ನೂತನ ವಿಗ್ರಹಗಳಿಗೆ ಮಂತ್ರ ಪುಷ್ಪ ಅಷ್ಟಾವಧಾನ ಸೇವೆ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗದ ಜೊತೆಗೆ ವಿಮಾನಗೋಪುರ ಕಲಶ ಸ್ಥಾಪನೆ ಮತ್ತು ಪೀಠಪೂಜೆ ನವರತ್ನ ಸಹಿತ ಯಂತ್ರ ಸ್ಥಾಪನೆ, ಅಷ್ಟಬಂಧನ ಸಮರ್ಪಣೆ ಕಾರ್ಯಕ್ರಮಗಳು ನಡೆದವು.ಇಂದು ಧರ್ಮಸಭೆ:
ಮಾ.7ರ ಗುರುವಾರ ವಿವಿಧ ಬಗೆಯ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆದ ನಂತರ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಧರ್ಮಸಭೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಉದ್ಘಾಟಿಸುವರು. ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಸಿ.ಟಿ.ರವಿ, ಸಾ.ರಾ.ಮಹೇಶ್, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತು ಮಾಜಿ ಶಾಸಕ ಸುರೇಶ್‌ಗೌಡ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಪಾಲ್ಗೊಳ್ಳುವರು.