ಸಾಹಿತ್ಯದ ಪರಿಮಳವನ್ನು ಪಸರಿಸಲು ಸಂಘಟನಾತ್ಮಕವಾಗಿ ಎಲ್ಲರೂ ಒಂದಾಗಬೇಕು ಎಂದು ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಹೇಳಿದ್ದಾರೆ.
- ಚುಸಾಪ ತಾಲೂಕು ಪದಾಧಿಕಾರಿಗಳ ಪದಗ್ರಹಣ, ಕವಿಗೋಷ್ಠಿ ಉದ್ಘಾಟನೆ - - -
ಕನ್ನಡಪ್ರಭ ವಾರ್ತೆ ದಾವಣಗೆರೆಸಾಹಿತ್ಯದ ಪರಿಮಳವನ್ನು ಪಸರಿಸಲು ಸಂಘಟನಾತ್ಮಕವಾಗಿ ಎಲ್ಲರೂ ಒಂದಾಗಬೇಕು ಎಂದು ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಾಮರ್ಥ್ಯ ಸೌಧದಲ್ಲಿ ಇತ್ತೀಚೆಗೆ ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸಾಹಿತ್ಯಿಕ ಚಟುವಟಿಕೆಗೆ ಚಾಲನೆ ಹಾಗೂ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.ಚುಟುಕು ಸಾಹಿತ್ಯ ಜೀವನದಲ್ಲಿ ಕಂಡುಂಡ ಅನುಭವವನ್ನು ಅನುಭಾವಿಸಿ ಕಟ್ಟಿ ಕೊಡುವ ಅಪರೂಪದ ಸಾಹಿತ್ಯ. ಮನಸ್ಸಿನ ಭಾವನೆಗಳನ್ನು ಚುಟುಕು ರೂಪದಲ್ಲಿ ವ್ಯಕ್ತಪಡಿಸುವುದು ಬಹುಮಹತ್ವದ ಕೆಲಸ. ತಮ್ಮ ಅವಧಿಯಲ್ಲಿ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ್ದ ಸೇವೆ ಇಂದಿಗೂ ಸಾಹಿತ್ಯ ಕ್ಷೇತ್ರದವರು ಸ್ಮರಿಸುತ್ತಾರೆ. ತಾಲೂಕುಮಟ್ಟದಲ್ಲಿ ಸಾಹಿತ್ಯದ ಪರಿಮಳ ಪಸರಿಸಲು ಸಂಘಟನಾತ್ಮಕವಾಗಿ ಎಲ್ಲರೂ ಒಂದಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಂತೇಶ ನಿಟ್ಟೂರು ಮಾತನಾಡಿ, ದಾವಣಗೆರೆಯಲ್ಲಿ ಸಾಹಿತ್ಯಿಕ ಚಟುವಟಿಕೆ ನಿರಂತರ ನಡೆಯಬೇಕು. ಆ ನಿಟ್ಟಿನಲ್ಲಿ ಚುಟುಕು ಸಾಹಿತ್ಯ ಪರಿಷತ್ತು ನಗರ, ಗ್ರಾಮೀಣ ಪ್ರದೇಶದ ಸುಪ್ತ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಲಿದೆ. ಚುಸಾಪ ನೂತನ ಘಟಕ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸಾಹಿತ್ಯಿಕ ಚಟುವಟಿಕೆ ಹೆಚ್ಚಿಸಲಿ ಎಂದು ಸಲಹೆ ನೀಡಿದರು.ಚುಸಾಪ ನೂತನ ತಾಲೂಕು ಗೌರವ ಕಾರ್ಯದರ್ಶಿ ಮಾಲತೇಶ್ ಬಬ್ಬಜ್ಜಿ ಮಾತನಾಡಿ, ಚುಟುಕು ಸಾಹಿತ್ಯವು ಸಮುದ್ರವನ್ನು ಮಡಿಕೆಯಲ್ಲಿ ತುಂಬಿಸುವ ಕಲೆಯಾಗಿದೆ. ಕೇವಲ ಚುಟುಕಗಳ ಸಂಖ್ಯೆಗೆ ಮಹತ್ವ ನೀಡದೇ, ಸತ್ವಯುತ ರಚನೆಗೆ ಮಹತ್ವ ನೀಡಬೇಕು. ಗುಣಮಟ್ಟದ ಸಾಹಿತ್ಯವನ್ನು ಮನೆ ಮನೆಗೆ ತಲುಪಿಸುವುದು ನಮ್ಮ ಗುರಿ. ಯುವಪೀಳಿಗೆಯಲ್ಲಿ ಚುಟುಕು ಕವನಗಳ ಬಗ್ಗೆ ಆಸಕ್ತಿ ಮೂಡಿಸಲು ಮಾಸಿಕ ಕವಿಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಪರಿಷತ್ ನೂತನ ಅಧ್ಯಕ್ಷ ಡಾ. ಎಂ.ವಿ. ಮಂಜುನಾಥ, ಜಿಲ್ಲಾಧ್ಯಕ್ಷ ವೀರಭದ್ರಪ್ಪ ತೆಲಗಿ, ಗೌರವಾಧ್ಯಕ್ಷ ಶಿವಯೋಗಿ ಹಿರೇಮಠ, ಹರಪನಹಳ್ಳಿಯ ನಿವೃತ್ತ ಪ್ರಾಚಾರ್ಯ ಭರತಭೂಷಣ, ಮುರುಳೀಧರ, ಓಂಕಾರಯ್ಯ ತವನಿಧಿ, ನೂತನ ಉಪಾಧ್ಯಕ್ಷ ಕೆ.ಮೋಹನ, ಸಹ ಕಾರ್ಯದರ್ಶಿಗಳಾದ ಉಮೇಶ ತಾಳೀಕಟ್ಟೆ, ಎಚ್.ಎಸ್.ರವಿ, ಎಂ.ಡಿ. ಮಂಜುನಾಥ, ಸಂಘಟನಾ ಕಾರ್ಯದರ್ಶಿ ಗಾಯತ್ರಿ, ಕೋಶಾಧ್ಯಕ್ಷ ಟಿ.ಲಂಕೇಶ, ನಿರ್ದೇಶಕರಾದ ಕೆ.ಎಂ. ನಿಂಗಮ್ಮ, ಅಕ್ಕ ಮಹಾದೇವಿ, ಲಕ್ಷ್ಮಣ, ಕೆ.ಜಿ. ಸವಿತಾ, ಮಂಜುನಾಥ ಐಹೊಳೆ, ವಿವಿಧ ತಾಲೂಕು ಪದಾಧಿಕಾರಿಗಳು ಇದ್ದರು. ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.- - -
-10ಕೆಡಿವಿಜಿ7.ಜೆಪಿಜಿ:ದಾವಣಗೆರೆಯಲ್ಲಿ ಚುಸಾಪ ತಾಲೂಕು ನೂತನ ಪದಾಧಿಕಾರಿಗಳ ಪದಗ್ರಹಣ, ಕವಿಗೋಷ್ಠಿಯನ್ನು ಡಾ. ಎಚ್.ಎಸ್. ಮಂಜುನಾಥ ಕುರ್ಕಿ ಉದ್ಘಾಟಿಸಿದರು.