ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಜಿಲ್ಲೆಯ ಸಾಗರ ತಾಲೂಕಿನಲ್ಲಿ ಆರಂಭವಾಗಿ ಪಶ್ಚಿಮ ಘಟ್ಟದಲ್ಲಿ ಸುದೀರ್ಘ ಹೋರಾಟ ನಡೆಸಿರುವ ವೃಕ್ಷಲಕ್ಷ ಆಂದೋಲನ ಸಂಘಟನೆಗೆ ಜೂ.೨೩ ರಂದು ೪೦ ವರ್ಷ ತುಂಬಲಿದ್ದು, ಅಂದು ರಾಜ್ಯ ಮಟ್ಟದ ಪರಿಸರ-ಸುಸ್ಥಿರ ಅಭಿವೃದ್ಧಿ ಕುರಿತು ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್ ತಿಳಿಸಿದರು.ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪರಿಸರ ಜಾಗೃತಿ ಟ್ರಸ್ಟ್ ವತಿಯಿಂದ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನ ಉತ್ತರ ಕನ್ನಡ ಜಿಲ್ಲೆ ಶಿರಸಿಯಲ್ಲಿ ಜೂ.೨೩ರಂದು ಬೆಳಿಗ್ಗೆ ಪೂಜ್ಯ ಸ್ವರ್ಣವಲ್ಲಿ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಉದ್ಘಾಟನೆ ನೆರವೇರಲಿದೆ. ಹಿರಿಯ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಕುರಿತು ಅಭಿನಂದನಾ ಗ್ರಂಥ ವೃಕ್ಷಮಿತ್ರ ಬಿಡುಗಡೆ ಆಗಲಿದೆ. ಶಿವಮೊಗ್ಗ ಜಿಲ್ಲೆಯ ೨೫೦ಕ್ಕೂ ಹೆಚ್ಚು ಪರಿಸರ ಕಾರ್ಯಕರ್ತರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪರಿಸರ ರಕ್ಷಣೆ ಗುರಿ: ಕೆಲವು ವರ್ಷಗಳಿಂದ ಸಕ್ರಿಯವಾಗಿ ಪರಿಸರಾತ್ಮಕ ಚಟುವಟಿಗಳಲ್ಲಿ ಕ್ರಿಯಾಶೀಲವಾಗಿರುವ ಟ್ರಸ್ಟ್ ರಾಜ್ಯ ಜೀವವೈವಿಧ್ಯ ಮಂಡಳಿ, ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ, ವೃಕ್ಷಲಕ್ಷ ಆಂದೋಲನ ಕರ್ನಾಟಕ ಹಾಗೂ ವಿವಿಧ ಬೇರೆ ಬೇರೆ ಸಕ್ರಿಯ ಪರಿಸರ ಸಂಘಟನೆಗಳೊಂದಿಗೆ ಸಹಭಾಗಿತ್ವ ಹೊಂದಿದ್ದು, ಸ್ಥಳೀಯ ಪರಿಸರ ಸಂರಕ್ಷಣೆ ವಿಷಯದಲ್ಲಿ ಹೆಚ್ಚಿನ ಗಮನ ಹರಿಸಿದೆ. ಜನ ಸಹಭಾಗಿತ್ವದ ಮೂಲಕ ತಾಲೂಕಿನ ಅನೇಕ ಅರಣ್ಯ, ಸಾಮೂಹಿಕ ಭೂಮಿ ಸಂರಕ್ಷಣೆಯಲ್ಲಿ ಕೈ ಜೋಡಿಸಿ ಗ್ರಾಮದ ಸುಸ್ಥಿರ ಕೃಷಿ, ಜನಜೀವನಕ್ಕೆ ನೆರವಾಗಿದೆ ಎಂದರು.ಸಮ್ಮೇಳನದಲ್ಲಿ ಏನೇನು?:
ವೃಕ್ಷಲಕ್ಷ ಪ್ರಶಸ್ತಿಯನ್ನು ಕಡಲ ಜೀವಶಾಸ್ತ್ರಜ್ಞ ಡಾ.ಪ್ರಕಾಶ ಮೇಸ್ತ ಅವರಿಗೆ ನೀಡಲಾಗುತ್ತದೆ. ಸಂಜೆವರೆಗೆ ನಡೆಯುವ ಗೋಷ್ಠಿಗಳಲ್ಲಿ ಪಶ್ಚಿಮ ಘಟ್ಟದ ಪ್ರಚಲಿತ ವಿದ್ಯಮಾನಗಳ ಮಂಡನೆ ಆಗಲಿದೆ. ಪಶ್ಚಿಮ ಘಟ್ಟ ಉಳಿಸಿ ಆಂದೋಲನವನ್ನು ಬಲಪಡಿಸುವ ಕಾರ್ಯವಿಧಾನಗಳು, ಮುಂದಿನ ಹೋರಾಟಗಳ ಬಗ್ಗೆ ಪ್ರಸ್ತಾಪ ವಾಗಲಿದೆ.ಸಮ್ಮೇಳನದಲ್ಲಿ ಗಣ್ಯರಾದ ಡಾ.ಬಿ.ಎನ್.ಗಂಗಾಧರ, ಡಾ.ಚ.ಮಾ.ಕೃಷ್ಣಶಾಸ್ತ್ರಿ, ಡಾ.ವಾಮನ ಆಚಾರ್ಯ, ತೇಜಸ್ವಿನಿ ಅನಂತ ಕುಮಾರ್, ಡಾ.ಟಿ.ವಿ. ರಾಮಚಂದ್ರ, ಪರಿಸರ ಚಿಂತಕ ನಾಗೇಶ ಹೆಗಡೆ, ಡಾ.ವಿಜಯಲಕ್ಷ್ಮಿ ದೇಶಮಾನೆ ಭಾಗವಹಿಸುವರು. ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿಯ ಶಾಸಕ ಭೀಮಣ್ಣ ನಾಯ್ಕ ಅತಿಥಿಗಳಾಗಿ ಆಗಮಿಸುವರು ಎಂದರು. ಸುದ್ದಿಗೋಷ್ಠಿಯಲ್ಲಿ ಪರಿಸರ ಕಾರ್ಯಕರ್ತ ಶ್ರೀಪಾದ ಬಿಚ್ಚುಗತ್ತಿ, ಪತ್ರಕರ್ತ ಎಂ.ಎಲ್. ನೋಪಿ ಶಂಕರ ಇದ್ದರು.