ಏ.14ರಿಂದ ರಾಮಕೃಷ್ಣ ಆಶ್ರಮದಲ್ಲಿ ವಸಂತ ವಿಹಾರ ಶಿಬಿರ

| Published : Apr 01 2024, 12:48 AM IST

ಸಾರಾಂಶ

4ನೇ ತರಗತಿಯಿಂದ 9ನೇ ತರಗತಿವರೆಗಿನ ಕೇವಲ ವಿದ್ಯಾರ್ಥಿಗಳಿಗಾಗಿ ಮಾತ್ರ ಊಟ ಹಾಗೂ ವಸತಿಯುತ ಶಿಬಿರ ಸಂಘಟಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೀದರ್‌

ಇಲ್ಲಿನ ಶಿವನಗರದ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ವಸಂತ ವಿಹಾರ ಶಿಬಿರ-2024 ಬರುವ ಏ.14ರಿಂದ 21ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಅಧ್ಯಕ್ಷರಾದ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ್ದು, 4ನೇ ತರಗತಿಯಿಂದ 9ನೇ ತರಗತಿವರೆಗಿನ ಕೇವಲ ವಿದ್ಯಾರ್ಥಿಗಳಿಗಾಗಿ ಮಾತ್ರ ಊಟ ಹಾಗೂ ವಸತಿಯುತ ಶಿಬಿರ ಸಂಘಟಿಸಲಾಗಿದೆ. ವಿವಿಧ ವಿಷಯ ಕುರಿತು ಪರಿಣಿತರಿಂದ ತರಬೇತಿ, ತರಗತಿ ನಡೆಯಲಿವೆ. ಪಠ್ಯ ಹೊರತುಪಡಿಸಿ ಚಟುವಟಿಕೆಗಳು ನಡೆಯುವುದು ಶಿಬಿರದ ಉದ್ದೇಶವಾಗಿದೆ. ವಿಶೇಷವಾಗಿ ಮಕ್ಕಳಲ್ಲಿ ಸಂಸ್ಕಾರವನ್ನು ಬಿತ್ತಿ, ಅವರನ್ನು ದೇಶದ ಹಾಗೂ ಸಮಾಜದ ಆಸ್ತಿಯಾಗಿ ಮಾಡಲು ಪೂರಕವಾಗಿ ಜ್ಞಾನಾರ್ಜನೆ ನೀಡಲಾಗುವುದು ಎಂದು ಹೇಳಿದ್ದಾರೆ.

ನಿತ್ಯ ಬೆಳಗಿನ ಜಾವ 5ರಿಂದ ರಾತ್ರಿ 9 ರವರೆಗೆ ಕಾರ್ಯಚಟುವಟಿಕೆ ನಡೆಸಲಾಗುತ್ತದೆ. ‌ಧ್ಯಾನ, ಯೋಗ, ಪ್ರಾಣಾಯಾಮ, ಭಜನೆ, ಆಟೋಟ, ಸಾಮಾನ್ಯ ಜ್ಞಾನ, ಸಂಸ್ಕೃತಿ, ರಾಷ್ಟ್ರ ಭಕ್ತಿ ಮೂಡಿಸುವ ಕೆಲಸ ಶಿಬಿರದಲ್ಲಿ ನಡೆಯಲಿದೆ. ಗೋಶಾಲೆ ಪರಿಸರದಲ್ಲಿ ಶಿಬಿರ ನಡೆಯುವುದು ವಿಶೇಷ. ಆಶ್ರಮ ಇಲ್ಲಿ ಸ್ಥಾಪನೆಯಾಗಿ 20 ವರ್ಷಗಳಾಗಿವೆ. ಕೋವಿಡ್‌ ಅವಧಿ ಬಿಟ್ಟರೆ ಪ್ರತಿ ವರ್ಷ ಶಿಬಿರ ನಡೆಸಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಶಿಬಿರದಲ್ಲಿ ಮಕ್ಕಳಿಗೆ ಶುಚಿ, ರುಚಿಯಾದ ಊಟೋಪಹಾರದ ವ್ಯವಸ್ಥೆ ಮಾಡಲಾಗುತ್ತದೆ. ಶಿಬಿರದಲ್ಲಿ ಹೆಸರು ನೋಂದಾಯಿಸಲು ಏ.8 ಕೊನೆಯ ದಿನವಿದೆ. ಈ ಕುರಿತು ಮಾಹಿತಿಗೆ 9449274246/6361409357ಗೆ ಸಂಪರ್ಕಿಸಲು ಕೋರಿದ್ದಾರೆ.

ವಿಶೇಷ ಶಿಬಿರ:

ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಾನಂದ ಅಕಾಡೆಮಿ ಫಾರ್‌ ಎಜುಕೇಷನಲ್‌ ಎಕ್ಸಲೆನ್ಸ್‌ ಅಡಿಯಲ್ಲಿ 8, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಇಂಗ್ಲಿಷ್, ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯ ಕುರಿತು ಏ.1ರಿಂದ ಮೇ 30ರ ವರೆಗೆ (ಎರಡು ತಿಂಗಳು) ವಿಶೇಷ ಶಿಬಿರ ಆಯೋಜಿಸಲಾಗಿದೆ‌. ಆಶ್ರಮದ ಪರಿಸರದಲ್ಲೇ ಶಿಬಿರ ನಡೆಯಲಿದೆ. ಪರಿಣಿತ ಬೋಧಕರು ವಿಶೇಷ ತರಗತಿ ನೀಡಲಿದ್ದಾರೆ. ಈ ಬಗ್ಗೆಯೂ ಮಾಹಿತಿಗಾಗಿ 9742693266ಗೆ ಸಂಪರ್ಕಿಸಲು ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಕೋರಿದ್ದಾರೆ.