ಚಿಕ್ಕ ವಯಸ್ಸಲ್ಲೇ ಶ್ರಾವ್ಯ ಕಮಾಲ್‌

| Published : Nov 14 2024, 12:49 AM IST / Updated: Nov 14 2024, 12:50 AM IST

ಸಾರಾಂಶ

ಮೂರು ವರ್ಷ ಆರು ತಿಂಗಳ ಬಾಲಕಿ ಶ್ರಾವ್ಯ ಸದಾಶಿವ ಚಿಕ್ಕಟ್ಟಿ ಕನ್ನಡ, ಆಂಗ್ಲ ಮೂಲಾಕ್ಷರ, ಚಿಕ್ಕ ಹಾಡು ಹಾಡುವುದು, ವಚನ ಗಾಯನ, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ಮಹಾನ್ ವ್ಯಕ್ತಿಗಳ ಹೆಸರನ್ನು ಥಟ್ ಅಂತ ಹೇಳುವ ಪಾಂಡಿತ್ಯ ಹೊಂದಿದ್ದಾಳೆ.

ಕನ್ನಡಪ್ರಭ ವಾರ್ತೆ ಅಥಣಿ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕೇವಲ ಮೂರು ವರ್ಷ ಆರು ತಿಂಗಳ ಬಾಲಕಿ ಶ್ರಾವ್ಯ ಸದಾಶಿವ ಚಿಕ್ಕಟ್ಟಿ ಕನ್ನಡ, ಆಂಗ್ಲ ಮೂಲಾಕ್ಷರ, ಚಿಕ್ಕ ಹಾಡು ಹಾಡುವುದು, ವಚನ ಗಾಯನ, ಸ್ವಾತಂತ್ರ್ಯ ಹೋರಾಟಗಾರರ ಹೆಸರು, ಮಹಾನ್ ವ್ಯಕ್ತಿಗಳ ಹೆಸರನ್ನು ಥಟ್ ಅಂತ ಹೇಳುವ ಪಾಂಡಿತ್ಯ ಹೊಂದಿದ್ದಾಳೆ. ಅಲ್ಲದೆ ಹಾರ್ಮೋನಿಯಂ ನುಡಿಸುವುದು ಇನ್ನಿತರ ಹವ್ಯಾಸ ರೂಢಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾಳೆ.

ಶ್ರಾವ್ಯ ಸದಾಶಿವ ಚಿಕ್ಕಟ್ಟಿ ಸಾಧನೆ 2020ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾದರೆ, 2021ರಲ್ಲಿ ಕರ್ನಾಟಕ ಸಾಧಕರ ದಾಖಲೆಗಳ ಪುಸ್ತಕದಲ್ಲಿ, ಇಂಡಿಯನ್ ಎಕ್ಸಲೆನ್ಸ್ ಅವಾರ್ಡ್ ಮತ್ತು ಕಾಯಕಯೋಗಿ ಪ್ರಶಸ್ತಿ ಮತ್ತು ಗೌರವ ಸನ್ಮಾನಗಳನ್ನು ಪಡೆದಿದ್ದಾಳೆ.

ಶ್ರಾವ್ಯ ಚಿಕ್ಕಟ್ಟಿ ಸದ್ಯ ಪಟ್ಟಣದ ಶ್ರೀಮತಿ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿದ್ದಾಳೆ. ಈಕೆ ಎಲ್ಕೆಜಿ ಮತ್ತು ಯುಕೆಜಿ ಇರುವಾಗಲೇ ಶಿಕ್ಷಣ, ಪರಿಸರ ಮತ್ತು ಸಾಮಾಜಿಕ ಜಾಗೃತಿಗೆ ಸಂಬಂಧಿಸಿದ 100ಕ್ಕೂ ಅಧಿಕ ವಿಡಿಯೋ ಬಿತ್ತರಿಸಿರುವ ಅಮೋಘ ಸಾಧನೆ ಮಾಡಿದ್ದಾಳೆ. ಸ್ವಂತ ಯೂಟ್ಯೂಬ್ ಚಾನೆಲ್ ಹೊಂದಿರುವ ಶ್ರಾವ್ಯ ಹಾರ್ಮೋನ್ ನುಡಿಸುತ್ತಾ ಹಾಡು ಹಾಡುತ್ತಾಳೆ. ಈಕೆ ಹಾಡಿರುವ ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಕರು ಮೆಚ್ಚುಗೆಗೆ ಪಾತ್ರವಾಗಿವೆ.