ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೂರುಮಧ್ಯಪ್ರದೇಶದಲ್ಲಿ ವಿಷಯುಕ್ತ ರಾಸಾಯನಿಕ ಬೆರೆತಿರುವ ಕೋಲ್ಡ್ ರಿಪ್ ಕೆಮ್ಮಿನ ಸಿರಪ್ ಸೇವಿಸಿ 22 ಮಕ್ಕಳ ಸಾವಿಗೆ ಕಾರಣವಾಗಿರುವ ಸ್ರೇಸನ್ ಫಾರ್ಮ ಕಂಪನಿಯ ಮಾಲೀಕನಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ಆಗ್ರಹಿಸಿದರು.ಹೋಬಳಿ ಕೇಂದ್ರದ ಸಂತೆಕಾಳೇಶ್ವರಿ ದೇಗುಲದ ಪಕ್ಕದ ಸಮುದಾಯ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಹಾಗೂ ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾರಾಷ್ಟ್ರ ಹಾಗೂ ನಾಗಪುರದ ಆಸ್ಪತ್ರೆಗಳಲ್ಲಿ 5 ವರ್ಷದ ಒಳಗಿನ ಮಕ್ಕಳು ಸಾವಿಗೆ ತುತ್ತಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಸಣ್ಣ ಮಕ್ಕಳ ಆರೋಗ್ಯದ ವಿಚಾರದಲ್ಲಿ ಮಕ್ಕಳ ತಜ್ಞ ವೈದ್ಯರ ಭೇಟಿ ಸಲಹೆ ಸೂಚನೆ ಮೇರೆಗೆ ಔಷಧಿ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂದು ಸಲಹೆ ನೀಡಿದರು.
ಮಳೆಗಾಲದಲ್ಲಿ ನೀರನ್ನು ಕುದಿಸಿ ಆರಿಸಿ ಕುಡಿಯುವುದು ಉತ್ತಮ ಸಾವಯವ ಕೃಷಿ ಮಾಡಿ ಅದರಿಂದ ಬರುವ ಆಹಾರ ಪದಾರ್ಥಗಳನ್ನು ಉಪಯೋಗಿಸಿ ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ತರಕಾರಿ ಬೆಳೆಗಳಿಗೂ ಸಹ ಔಷಧಿ ಸಿಂಪಡಣೆ ಮಾಡುತ್ತಾರೆ. ಮೆಣಸಿನ ಕಾಯಿಗೂ ಸಹ ಔಷಧಿ ಸಿಂಪರಣೆ ಮಾಡುತ್ತಾರೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದರು. ಕೇಂದ್ರ ಸರ್ಕಾರ ಪೋಷಣ್ ಅಭಿಯಾನ ಯೋಜನೆ ಅಡಿ ಪೌಷ್ಟಿಕ ಆಹಾರದ ಕಿಟ್‌ಗಳನ್ನು ಬಾಣಂತಿಯರು ಕಿಶೋರಿಯರು 6 ವರ್ಷದ ಒಳಗಿನ ಮಕ್ಕಳಿಗೆ ಉಚಿತವಾಗಿ ವಿತರಿಸುತ್ತಿದೆ ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ತಾಲೂಕಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರಾಮಾಣಿಕ ಸೇವೆ ಮಾಡಬೇಕು ಎಂದು ಸೂಚನೆ ನೀಡಿದರು.ಸಮಾರಂಭದಲ್ಲಿ ಡಾ. ವರದರಾಜ್, ಗ್ರಾಮ ಪಂಚಾಯತಿ ಅಧ್ಯಕ್ಷ ಅಣ್ಣೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಎಚ್. ಶಿವಣ್ಣ, ಮೇಲ್ವಿಚಾರಕಿ ಜಯಲಕ್ಷ್ಮಮ್ಮ, ಮುಖಂಡರಾದ ಮಂಜುನಾಥ್, ಮನು, ಚಂದ್ರಣ್ಣ, ಲಕ್ಷ್ಮಣ್, ಹರೀಶ್, ರಘು, ಧರಣೇಂದ್ರ, ಕಾಳೇಶ್, ಸಂಪತ್ ಕುಮಾರ್, ಭಾಗ್ಯಮ್ಮ, ರಮ್ಯಾ, ರಾಧಾ, ವೃತ್ತದ ಅಂಗನವಾಡಿ ಕಾರ್ಯಕರ್ತೆಯರು ಇತರರು ಹಾಜರಿದ್ದರು.