ಕನ್ನಡಪ್ರಭ ವಾರ್ತೆ ಮೇಲುಕೋಟೆ
ವಿಶ್ವವಿಖ್ಯಾತ ಶ್ರೀ ಚೆಲುವನಾರಾಯಣಸ್ವಾಮಿಯ ವೈರಮುಡಿ ಕಿರೀಟಧಾರಣ ಮಹೋತ್ಸವ ಶನಿವಾರ ರಾತ್ರಿ ಲಕ್ಷಾಂತರ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನೆರವೇರಿತು.ಪರಾಭವನಾಮ ಸಂವತ್ಸವರದ ಮೀನ- ಚೈತ್ರಮಾಸದ ಪುಷ್ಯ ನಕ್ಷತ್ರದ ಶುಭದಿನ ಕೂಡಿದ ಬ್ರಹ್ಮೋತ್ಸವದ ನಾಲ್ಕನೇ ತಿರುನಾಳ್ ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಮುಖ ದಿನದಂದು ಸಾಕ್ಷಾತ್ ಭಗವಂತನದ್ದೆಂದೇ ಪ್ರತೀತಿಯಿರುವ ವೈರಮುಡಿ ಕಿರೀಟವನ್ನು ಶ್ರೀದೇವಿ- ಭೂದೇವಿಯರೊಂದಿಗೆ ಗರುಡಾರೂಢನಾದ ಚೆಲುವನಾರಾಯಣಸ್ವಾಮಿಗೆ ರಾತ್ರಿ 8 ಗಂಟೆಗೆ ತೊಡಿಸಲಾಯಿತು.
ಇದಕ್ಕೂ ಮುನ್ನ ಗರುಡದೇವನ ಉತ್ಸವ ನಡೆದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಸಮಕ್ಷಮದಲ್ಲಿ ಮಹಾಮಂಗಳಾರತಿ ನೆರವೇರಿಸಿ ಭಕ್ತರ ಗೋವಿಂದನಾಮ ಸ್ಮರಣೆ/ ಘೋಷಣೆಯೊಂದಿಗೆ ವೈರಮುಡಿ ಉತ್ಸವಕ್ಕೆ ಚಾಲನೆ ದೊರೆಯಿತು.ವೈರಮುಡಿ ಧರಿಸಿ ಭವ್ಯ ತೋಮಾಲೆಗಳು ದಿವ್ಯಾಭರಣಗಳೊಂದಿಗೆ ಅಲಂಕೃತನಾದ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ ರಾಜಗೋಪುರದ ಬಳಿ ಬರುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಸುಶ್ರಾವ್ಯ ಮಂಗಳವಾದ್ಯದೊಂದಿಗೆ ಸಾಗಿದ ಸ್ವಾಮಿಯ ಉತ್ಸವವನ್ನು ಮೈಸೂರು ಮಹಾರಾಜರು ವೈರಮುಡಿ ಉತ್ಸವ ವೀಕ್ಷಿಸುತ್ತಿದ್ದ ಪುಷ್ಪಮಂಟಪದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂತರ ವೈರಮುಡಿ ಉತ್ಸವವು ಮೇಲುಕೋಟೆ ರಾಜಬೀದಿಯಲ್ಲಿ ಸಹಸ್ರಾರು ಮಂದಿ ಭಕ್ತರ ಗೋವಿಂದನಾಮ, ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ಸಾಗಿತು. ತಡರಾತ್ರಿ 3.30ರವರೆಗೆ ನಡೆದ ವೈರಮುಡಿ ಉತ್ಸವ ವೇಳೆ ವಾನಮಾಮಲೆ ಬೀದಿ, ರಥದ ಬೀದಿ, ರಾಜಬೀದಿಗಳಲ್ಲಿ ತೆರಳುವ ವೇಳೆ ಕಿಕ್ಕಿರಿದು ತುಂಬಿದ್ದ ಲಕ್ಷಾಂತರ ಭಕ್ತರು ಸ್ವಾಮಿ ದರ್ಶನ ಮಾಡಿ ಪುನೀತಭಾವ ಅನುಭವಿಸಿದರು.
ಇದಕ್ಕೂ ಮುನ್ನ ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆ ನಂತರ ಮಹಾಮಂಗಳಾರತಿ, ಪ್ರಾರ್ಥನೆ ಸಲ್ಲಿಸಲಾಯಿತು.
ದೇವಾಲಯದ ಎಡಭಾಗದಲ್ಲಿ ನಿರ್ಮಿಸಿದ್ದ ಮಂಟಪದಲ್ಲಿ ಸ್ವಾಮಿಗೆ ಮತ್ತೊಮ್ಮೆ ಮಂಗಳಾರತಿ ಮಾಡಲಾಯಿತು. ನಂತರ ಮೇಲುಕೋಟೆ ಚತುರ್ವೀದಿಗಳಲ್ಲಿ ವೈರಮುಡಿ ಉತ್ಸವ ಸಂಭ್ರಮದಿಂದ ನೆರವೇರಿತು.------------
ತಿರುವಾಭರಣ ಪೆಟ್ಟಿಗೆಗೆ ವಿಶೇಷ ಪೂಜೆಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಪಾರ್ವತಿ ಮಂಟಪದ ಬಳಿಯ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ಭವ್ಯ ಮೆರವಣಿಗೆಯಲ್ಲಿ ಸಂಜೆ 5ರ ವೇಳೆಗೆ ಶ್ರೀ ಚೆಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತರಲಾಯಿತು.
ಮೇಲುಕೋಟೆ ಯತಿರಾಜದಾಸರ್ ಗುರುಪೀಠದಲ್ಲಿ ಕೊನೆ ಸಾಂಪ್ರದಾಯಿಕ ಪೂಜೆ ನೆರವೇರಿದ ನಂತರ ವೈರಮುಡಿ- ರಾಜಮುಡಿ ತಿರುವಾಭರಣ ಪೆಟ್ಟಿಗೆಗಳಿದ್ದ ಬಂಗಾರದ ಪಲ್ಲಕ್ಕಿ ದೇವಾಲಯ ಪ್ರವೇಶಿಸಿತು.ಇದಕ್ಕೂ ಮೊದಲು ಪೇಟೆ ಆಂಜನೇಯಸ್ವಾಮಿ ದೇವಾಲಯದ ಬಳಿ ಮೇಲುಕೋಟೆ ಒಕ್ಕಲಿಗ ಮುಖಂಡರು, ಆದಿಚುಂಚನಗಿರಿ ಶಾಖಾಮಠದ ಮುಂದೆ ಚುಂಚನಗಿರಿ ಶ್ರೀಗಳು ಪೂಜೆ ಸಲ್ಲಿಸಿದರು. ಪ್ರಥಮ ಪೂಜೆ ಮಂಡ್ಯದ ಲಕ್ಷ್ಮೀಜನಾರ್ಧನ ದೇಗುಲದಲ್ಲಿ ನಡೆದರೆ ಕೊನೆ ಪೂಜೆ ಯತಿರಾಜದಾಸರ್ ಗುರುಪೀಠದಿಂದ ಸಾಂಪ್ರದಾಯಿಕ ಪದ್ಧತಿಯಂತೆ ನೆರವೇರಿತು.
ರಾಜಮುಡಿ ಕಿರೀಟದ ಪಾರ್ಕಾವಣೆಸಂಜೆ 5 ಗಂಟೆ ವೇಳೆಗೆ ಮೇಲುಕೋಟೆಗೆ ಬಂದ ವೈರಮುಡಿ- ರಾಜಮುಡಿ ತಿರುವಾಭರಣ ಪೆಟ್ಟಿಗೆಗಳನ್ನು ಚಿನ್ನದ ಪಲ್ಲಕ್ಕಿಯಲ್ಲಿ ಭವ್ಯ ಮೆರವಣಿಗೆಯಲ್ಲಿ ತರಲಾಯಿತು. ರಾತ್ರಿ 7 ಗಂಟೆ ವೇಳೆಗೆ ಚೆಲುವನಾರಾಯಣಸ್ವಾಮಿ ಸನ್ನಿಧಿಯ ಮುಂಭಾಗ ನವರಂಗದ ಮಧ್ಯ ಭಾಗದಲ್ಲಿ ರಾಜಮುಡಿ ತಿರುವಾಭರಣಪೆಟ್ಟಿಗೆಯನ್ನು ತೆರೆದು ರಾಜಮುಡಿ ಕಿರೀಟ, ಗಂಡಭೇರುಂಡಪದಕ, ಪದ್ಮಪಾದ ಶಂಖ,ಚಕ್ರ ಗದಾಂಗಿ ಸೇರಿದಂತೆ 16 ವಿಧದ ವಜ್ರಾಭರಣಗಳನ್ನು ಸಚಿವ ಚಲುವರಾಯಸ್ವಾಮಿ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ರಮೇಶ ಬಂಡಿಸಿದ್ದೇಗೌಡ ಸೇರಿದಂತೆ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಅಧಿಕಾರಿಗಳ ಸಮಕ್ಷಮ ಪರಿಶೀಲಿಸಿ ಸ್ಥಾನೀಕರು, ಅರ್ಚಕರು ಪರಿಚಾರಕರಿಗೆ ಹಸ್ತಾಂತರ ಮಾಡಲಾಯಿತು.
ವೈರಮುಡಿ ತಿರುವಾಭರಣ ಪೆಟ್ಟಿಗೆಯನ್ನು ನೇರವಾಗಿ ದೇವರ ಅಲಂಕಾರಕ್ಕೆ ನೀಡಲಾಯಿತು. ರಾಜಮುಡಿ ಕಿರೀಟ ಮತ್ತು ತಿರುವಾಭರಣಗಳು ಏ.2ರವರೆಗೆ ಬ್ರಹ್ಮೋತ್ಸವದಲ್ಲಿ ಚೆಲುವನಾರಾಯಣಸ್ವಾಮಿಯನ್ನು ಅಲಂಕರಿಸಲಿವೆ.ಗಮನ ಸೆಳೆದ ದೀಪಾಲಂಕಾರ:
ವೈರಮುಡಿ ಉತ್ಸವದ ಅಂಗವಾಗಿ ಜಕ್ಕನಹಳ್ಳಿಯಿಂದ ಮೇಲುಕೋಟೆಯವರೆಗೆ ಮತ್ತು ರಾಜಬೀದಿಗಳು, ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯ, ಕಲ್ಯಾಣಿ, ಮಂಟಪಗಳಿಗೆ, ಸರ್ಕಾರಿ ಕಚೇರಿ ಕಟ್ಟಡಗಳಿಗೆ ಹಾಗೂ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಬೆಟ್ಟ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು. ದೇವಾಲಯದ ಆವರಣಕ್ಕೆ ವಿದ್ವಾನ್ ಭಾವಂ ರಾಮಪ್ರಿಯ ನೇತೃತ್ವಲ್ಲಿ ಆಕರ್ಷಕ ಪುಷ್ಪಾಲಂಕಾರ ಭಕ್ತರ ಗಮನ ಸೆಳೆಯಿತು.ಯತಿರಾಜದಾಸರ್ ಗುರುಪೀಠದ ಎಸ್.ಎನ್ ಐ ಸಾಂಸ್ಕೃತಿಕ ವೇದಿಕೆಯಡಿ ಉತ್ಸವಕ್ಕೆ ನಾದೋಪಾಸನ ಸೇವೆಯಲ್ಲಿ ವಿದ್ವಾನ್ ಶ್ರೀಧರ್ ವಿದ್ವಾನ್ ಆನಂದ ತಂಡ ಸುಶ್ರಾವ್ಯ ನಾದಸ್ವರ ವಾದನ ಕೈಂಕರ್ಯ ನಡೆಸಿತು.
ಲಕ್ಷಾಂತರ ಭಕ್ತರು ಭಾಗಿ, ನಿರಂತರ ಪ್ರಸಾದ ವಿತರಣೆ:ದೇವಾಲಯದ ಸಮಿತಿ ವತಿಯಿಂದ ದಾಸೋಹ ಭವನದಲ್ಲಿ ಭಕ್ತರಿಗೆ ಶನಿವಾರ ಬೆಳಗ್ಗೆ 8 ರಿಂದ ಮಾ.29ರ ಬೆಳಗ್ಗೆ 8 ಗಂಟೆವರೆಗೆ ನಿರಂತರವಾಗಿ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ವೈರಮುಡಿ ಬ್ರಹ್ಮೋತ್ಸವ ವೀಕ್ಷಣೆಗೆ ಈ ಬಾರಿ ಸುಮಾರು 2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು. ಪಾರ್ಕಿಂಗ್ ಸ್ಥಳದಿಂದ ದೇವಸ್ಥಾನದವರೆಗೆ ವಯಸ್ಸಾದವರು ಸಂಚರಿಸಲು 5 ಮಿನಿ ಬಸ್ಸುಗಳ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು, ಭಕ್ತರ ಓಡಾಟಕ್ಕೆ ತೊಂದರೆಯಾಗದಂತೆ ವಾಹನ ದಟ್ಟಣೆ ನಿಯಂತ್ರಿಸಲು ಅಗತ್ಯ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು.
ಬಿಗಿ ಪೊಲೀಸ್ ಬಂದೋಬಸ್ತ್:ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೋಭರಾಣಿ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿಗಳು, 5 ಮಂದಿ ಡಿವೈಎಸ್ಪಿಗಳು, 34 ಇನ್ಸ್‌ಪೆಕ್ಟರ್‌ಗಳು, 79 ಪಿಎಸ್‌ಐಗಳು, 128 ಎಎಸ್‌ಐ, ಮುಖ್ಯಪೇದೆ, ಪೇದೆಗಳು, ಮಹಿಳಾ ಸಿಬ್ಬಂದಿ ಸೇರಿ 1210ಕ್ಕೂ ಹೆಚ್ಚು ಮಂದಿ, 2 ರಾಜ್ಯ ಸಶಸ್ತ್ರ ಮೀಸಲು ಪಡೆ ಹಾಗೂ 5 ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.