ಸಾರಾಂಶ
ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಸದಸ್ಯರು ಶುಕ್ರವಾರ ಮಣಿಪಾಲದ ರಜತಾದ್ರಿಯ ಜಿಲ್ಲಾಡಳಿತ ಸಂಕೀರ್ಣದ ಬಳಿ ಜನಾಗ್ರಹ ಸಭೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಸದಸ್ಯರಿಂದ ಮಣಿಪಾಲದಲ್ಲಿ ಜನಾಗ್ರಹ ಸಭೆಮಣಿಪಾಲ: ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರು ಹಾಳುಗೆಡವಲು ವ್ಯವಸ್ಥಿತ ಸಂಚು ನಡೆಯುತ್ತಿದೆ. ಇದರ ವಿರುದ್ಧ ಸರ್ಕಾರ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಸದಸ್ಯರು ಶುಕ್ರವಾರ ಇಲ್ಲಿನ ರಜತಾದ್ರಿಯ ಜಿಲ್ಲಾಡಳಿತ ಸಂಕೀರ್ಣದ ಬಳಿ ಜನಾಗ್ರಹ ಸಭೆ ನಡೆಸಿ, ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ದೇಶದಾದ್ಯಂತ ಹಿಂದು ಧರ್ಮದ ವಿರುದ್ಧ ಮತಾಂಧ ಶಕ್ತಿಗಳು ವ್ಯವಸ್ಥಿತವಾಗಿ ಸಂಚು ರೂಪಿಸುತ್ತಿವೆ. ಸರ್ಕಾರ ಇದನ್ನು ತಡೆಯಬೇಕು, ಹಿಂದುಗಳು ಪ್ರತಿಭಟನೆಗೆ ಇಳಿದರೆ ಯಾರಿಂದಲೂ ತಡೆಯಲು ಸಾಧ್ಯವಿಲ್ಲ, ಹಿಂದೂ ಧರ್ಮಕ್ಕೆ ಧಕ್ಕೆಯಾದರೇ ಯಾವ ಹೋರಾಟಕ್ಕೂ ಹಿಂದುಗಳು ಸಿದ್ಧರಿದ್ದಾರೆ, ಆದ್ದರಿಂದ ಹಿಂದುಗಳ ತಾಳ್ಮೆ ಪರೀಕ್ಷಿಸಬೇಡಿ ಎಂದು ತೀವ್ರ ಎಚ್ಚರಿಕೆ ನೀಡಿದರು.ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಧರ್ಮಸ್ಥಳದಲ್ಲಿಎಸ್‌ಐಟಿ ತನಿಖೆ ನಡೆಯುತ್ತಿದೆ. ಅದಕ್ಕೆ ಮೊದಲೇ ತೀರ್ಪು ಕೊಡುವಂತೆ ಕ್ಷೇತ್ರದ ವಿರುದ್ದ ಅಪಪ್ರಚಾರ ಸರಿಯಲ್ಲ. ಕ್ಷೇತ್ರದಿಂದ ಆಗಿರುವ ಸಮಾಜಮುಖಿ ಕಾರ್ಯಗಳನ್ನು, ಜನಜಾಗೃತಿ, ದೇವಾಲಯಗಳ ಅಭಿವೃದ್ಧಿ ಯೋಜನೆಗಳನ್ನು ಕೂಡ ಗಮನಿಸಬೇಕು. ಜಾತಿಬೇಧ ಇಲ್ಲದೆ ಎಲ್ಲಾ ಭಕ್ತರು ಕ್ಷೇತ್ರದೊಂದಿಗೆ ಇದ್ದಾರೆ ಎಂದರು.
ಭಕ್ತಾಭಿಮಾನಿ ವೇದಿಕೆಯ ವಸಂತ ಗಿಳಿಯಾರ್ ಮಾತನಾಡಿ, ಧರ್ಮಸ್ಥಳದ ವಿರುದ್ದ ನಡೆಯುತ್ತಿರುವ ಸಂಚಿಗೆ ವಿದೇಶದಿಂದ ಧನಸಹಾಯ ಬರುತ್ತಿದೆ. ಇದನ್ನು ಕೂಡ ತನಿಖೆಗೊಳಪಡಿಸಬೇಕು. ಧರ್ಮಸ್ಥಳದಲ್ಲಿ ಎಸ್‌ಐಟಿ ತನಿಖೆಯ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಷೇತ್ರಗಳ ಬಗ್ಗೆ ತೇಜೋವಧೆ ನಡೆಸಲಾಗುತ್ತಿದೆ. ಇದನ್ನು ತಡೆಯಲು ಗೃಹಸಚಿವರು ತಕ್ಷಣ ಎಸ್‌ಐಟಿಯ ಇದುವರಿಗಿನ ತನಿಖೆಯ ಮಾಹಿತಿಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.ಕುಂದಾಪುರ ಶಾಸಕ ಕಿರಣ್ ಕುಮಾರ ಕೊಡ್ಗಿ, ಮಾಜಿ ಶಾಸಕ ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಜನಜಾಗೃತಿ ಸಮಿತಿಯ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಭಕ್ತಾಭಿಮಾನಿ ವೇದಿಕೆಯ ಉದಯ ಶೆಟ್ಟಿ ಇನ್ನಾ, ಪ್ರಮುಖರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ, ಶಾಂತಾರಾಮ ಶೆಟ್ಟಿ ಬಾರ್ಕೂರು, ರವೀಂದ್ರ ಶೆಟ್ಟಿ ಬಜಗೋಳಿ, ಸುಬ್ರಹ್ಮಣ್ಯ ಶೆಟ್ಟಿ, ಸುಲತಾ ಹೆಗ್ಡೆ ಸಾಲಿಗ್ರಾಮ ಮುಂತಾದವರಿದ್ದರು.ಪ್ರತಿಭಟನೆಯ ನಂತರ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.