ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ಬ್ರಹ್ಮರಥೋತ್ಸವ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಸಹಸ್ರಾರು ಭಕ್ತರ ಸಮಕ್ಷಮದಲ್ಲಿ ಜೈ ಆಂಜನೇಯ, ಜೈ ಭಜರಂಗಿ ಗೋವಿಂದನ ನಾಮಸ್ಮರಣೆಯೊಂದಿಗೆ ಗುರುವಾರ ಬೆಳಿಗ್ಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ದವನ ಹುಣ್ಣಿಮೆ, ಜೈತ್ರ ಶುದ್ದ ಪೂರ್ಣಿಮೆಯ ಬ್ರಾಹ್ಮಿ ಮಹೂರ್ತ ಪ್ರಾತಃ ಕಾಲ 7.15ರ ಮೇಷ ಲಗ್ನದಲ್ಲಿ ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿಯ ಉತ್ಸವ ಮೂರ್ತಿಯ ರಥಾರೋಹಣ ಶ್ರೀ ಗಣಪತಿ ಪೂಜೆ, ಅಷ್ಟದಿಕ್ಪಾಲಕರ ಮಹಾ ಬಲಿ, ಮಹಾ ಮಂಗಳಾರತಿ ಜತೆಗೆ ಹಲವು ಋತ್ವಿಜರ ವೇದ ಘೋಷದೊಂದಿಗೆ ಸಂಪನ್ನಗೊಂಡು ಮಂಗಳ ವಾದ್ಯದೊಂದಿಗೆ ರಥೋತ್ಸವದ ಭವ್ಯ ಮೆರವಣಿಗೆ ಆರಂಭಗೊಂಡಿತು.

ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ ಸಹಸ್ರ ಸಹಸ್ರ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಶ್ರೀಹರಿಯ ವಾಹನವಾಗಿ ಪುರಾಣಗಳಲ್ಲಿ ಅತ್ಯಂತ ವಿಶಿಷ್ಟವಾಗಿ ಗುರುತಿಸಿಕೊಂಡ ಗರುಡ ಮೂರು ಪ್ರದಕ್ಷಿಣೆ ಮೂಲಕ ನೆರೆದಿದ್ದ ಭಕ್ತಾಧಿಗಳಿಗೆ ಅಚ್ಚರಿಯನ್ನು ಉಂಟು ಮಾಡಿತು. ಕಳೆದ ಹಲವು ವರ್ಷಗಳಿಂದ ಗರುಡ ಪ್ರದಕ್ಷಿಣೆ ಮೂಲಕ ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದು, ಈ ಬಾರಿ ಸಹ ಪುನರಾವರ್ತನೆಯಾಗಿದ್ದು, ಇಂತಹ ಸುಸಂದರ್ಭವನ್ನು ಖುದ್ದು ವೀಕ್ಷಿಸಿದ ಭಕ್ತಾಧಿಗಳಲ್ಲಿ ಧನ್ಯತಾ ಬಾವ ಎದ್ದು ಕಾಣುತ್ತಿತ್ತು.

ರಥೋತ್ಸವದಲ್ಲಿ ಪಾಲ್ಗೊಳ್ಳಲು ನಾಡಿನ ವಿವಿಧ ಮೂಲೆ ಮೂಲೆಗಳಿಂದ ಭಕ್ತಾಧಿಗಳು ಬೆಳಗಿನ ಜಾವದಿಂದಲೇ ದೇವಾಲಯಕ್ಕೆ ಆಗಮಿಸಿದ್ದು, ಸ್ವಾಮಿಯ ದರ್ಶನಕ್ಕೆ ಸರತಿ ಸಾಲಿನಲ್ಲಿ ಸಹಸ್ರಾರು ಭಕ್ತರು ಆಗಮಿಸಿ ದರ್ಶನ ಪಡೆದರು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪುತ್ರ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಹಾಗೂ ಕುಟುಂಬಸ್ಥರ ಜತೆ ಬೆಳಗಿನ ಜಾವ ದೇವಸ್ಥಾನಕ್ಕೆ ಆಗಮಿಸಿ ರಥೋತ್ಸವದ ಅಂಗವಾಗಿ ನಡೆದ ಎಲ್ಲ ಧಾರ್ಮಿಕ ವಿಧಿ ವಿಧಾನ ಪೂಜಾ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ತೇಜಸ್ವಿನಿ ರಾಘವೇಂದ್ರ, ಸುಭಾಷ್, ಭಗತ್, ಪ್ರೇಮಾ ವಿಜಯೇಂದ್ರ, ಅರುಣಾದೇವಿ ಎಂಎಡಿಬಿ ಮಾಜಿ ಅಧ್ಯಕ್ಷ ಗುರುಮೂರ್ತಿ ಮತ್ತಿತರರು ಹಾಜರಿದ್ದರು. ನಂತರದಲ್ಲಿ ರಥೋತ್ಸವದಲ್ಲಿ ಭಕ್ತರ ಜತೆ ಹೆಜ್ಜೆ ಹಾಕಿದರು. ವಿವಿದೆಡೆಯಿಂದ ಆಗಮಿಸಿದ್ದ ಭಕ್ತಾಧಿಗಳು ಬೆಳಗಿನ ಸೂರ್ಯನ ಮಂದಹಾಸದ ಬೆಳಕಿನಲ್ಲಿ ಹುಚ್ಚುರಾಯಸ್ವಾಮಿಗೆ ಹಣ್ಣು ಕಾಯಿ ಧವನವನ್ನು ಸಮರ್ಪಿಸಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು.


ರಥೋತ್ಸವದ ಅಂಗವಾಗಿ ರಥಬೀದಿಯ ಎರಡೂ ಬದಿಯಲ್ಲಿ ವಿವಿಧ ಸಂಘ ಸಂಸ್ಥೆಗಳು, ಯುವಕರ ತಂಡ ಭಕ್ತಾದಿಗಳಿಗೆ ಬಿಸಿಲಿನ ತಾಪ ತಣಿಸಲು ಪಾನಕ, ಕೋಸಂಬರಿ, ಮಜ್ಜಿಗೆಯ ಜತೆಗೆ ಉಪಹಾರವಾಗಿ ಚಿತ್ರಾನ್ನ, ಸಿಹಿ ಪದಾರ್ಥ ವಿತರಿಸಿ ಶ್ರೀ ಸ್ವಾಮಿಯ ರಥೋತ್ಸವಕ್ಕೆ ಯಥಾನುಶಕ್ತಿ ಸೇವೆ ಸಲ್ಲಿಸಿದ ಸಂತೃಪ್ತಿ ಹೊಂದಿದರು.

ಬೆಳಿಗ್ಗೆ 8.45ರ ವೇಳೆಯಲ್ಲಿ ರಥ ಮಾರಿಕಾಂಬ ಗದ್ದುಗೆ ಬಳಿ ಎಳೆದು ತಂದು ನಿಲ್ಲಿಸಲಾಯಿತು. ರಥೋತ್ಸವದ ನಂತರದಲ್ಲಿ ತಂಡೋಪತಂಡವಾಗಿ ಆಗಮಿಸಿದ ಭಕ್ತರು ರಥದ ಬಳಿ ಕಾಯಿ ಒಡೆದು ಹೂವು, ಹಣ್ಣು ಅರ್ಪಿಸಿದರು. ದೇವಾಲಯದಲ್ಲಿ ಸರ್ವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವದಲ್ಲಿ ಶಾಂತಿ ಕಾಪಾಡಲು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.