ಮಕ್ಕಳು ದೇವರ ಸಮಾನ. ಶ್ರೀಕೃಷ್ಣನ ವೇಷತೊಟ್ಟ ಮಕ್ಕಳು ಬಾಲ್ಯದ ತುಂಟ ಕೃಷ್ಣನನ್ನು ನೆನಪಿಸುತ್ತಿದ್ದಾರೆ. ಶ್ರೀಕೃಷ್ಣ- ರಾಧೆಯರ ವೇಷದಲ್ಲಿ ಮಕ್ಕಳು ಮುದ್ದಾಗಿ ಕಾಣಿಸುತ್ತಿದ್ದಾರೆ. ಪುಟಾಣಿಗಳು ಏನೇ ಮಾಡಿದರೂ ಸುಂದರವಾಗಿರುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶುಪಾಲನಾ ಕೇಂದ್ರದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಪುಟಾಣಿ ಮಕ್ಕಳು ಶ್ರೀಕೃಷ್ಣ ಮತ್ತು ರಾಧೆಯರ ವೇಷ ಧರಿಸಿ ಮಿಂಚಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಅವರು ಶ್ರೀಕೃಷ್ಣನ ವೇಷ ಧರಿಸಿದ ಮಕ್ಕಳನ್ನು ಎತ್ತಿಕೊಂಡು ಸಂತಸಪಟ್ಟರು. ಮಕ್ಕಳು ದೇವರ ಸಮಾನ. ಶ್ರೀಕೃಷ್ಣನ ವೇಷತೊಟ್ಟ ಮಕ್ಕಳು ಬಾಲ್ಯದ ತುಂಟ ಕೃಷ್ಣನನ್ನು ನೆನಪಿಸುತ್ತಿದ್ದಾರೆ. ಶ್ರೀಕೃಷ್ಣ- ರಾಧೆಯರ ವೇಷದಲ್ಲಿ ಮಕ್ಕಳು ಮುದ್ದಾಗಿ ಕಾಣಿಸುತ್ತಿದ್ದಾರೆ. ಪುಟಾಣಿಗಳು ಏನೇ ಮಾಡಿದರೂ ಸುಂದರವಾಗಿರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು. ಶ್ರೀಕೃಷ್ಣ ಜಯಂತಿ ಅಂಗವಾಗಿ ಜಿಪಂ ಸಿಇಒ ಕೆ.ಆರ್ ನಂದಿನಿ ಅವರು ಮಕ್ಕಳಿಗೆ ಸಿಹಿ ವಿತರಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಮುಖ್ಯ ಯೋಜನಾಧಿಕಾರಿ ಧನುಷ್, ಜಿಪಂ ಉಪ ಕಾರ್ಯದರ್ಶಿ (ಅಭಿವೃದ್ಧಿ) ಪಿ.ಲಕ್ಷ್ಮೀ, ಸಿಇಒ ಆಪ್ತ ಸಹಾಯಕ ಯೋಗಾನಂದ, ಈಜ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ನ ದೇವರಾಜು, ಶಿಕ್ಷಕಿ ಶಶಿಕಲಾ, ಸಹಾಯಕಿ ಲಲಿತಾ ಸೇರಿದಂತೆ ಇನ್ನಿತರರಿದ್ದರು.

ವಿದ್ಯಾರ್ಥಿಗಳು ಶಿಸ್ತು, ಸಮಯಪ್ರಜ್ಞೆ ಬೆಳೆಸಿಕೊಳ್ಳಬೇಕು: ವಿಷಕಂಠೇಗೌಡ

ಹಲಗೂರು:ವಿದ್ಯಾರ್ಥಿಗಳು ಶಿಸ್ತು ಹಾಗೂ ಸಮಯಪ್ರಜ್ಞೆಯನ್ನು ಬೆಳೆಸಿಕೊಂಡರೆ ಸಮಾಜದಲ್ಲಿ ಸತ್ಪ್ರಜೆಯಾಗಿ ಬೆಳೆಯಬಹುದು ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವಿಷಕಂಠೇಗೌಡ ಕಿವಿಮಾತು ಹೇಳಿದರು.

ಬುಯ್ಯನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸರ್ವಪಲ್ಲಿ ರಾಧಾಕೃಷ್ಣರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಸೆ.5 ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನ ಆಚರಿಸಲಾಗುತ್ತಿದೆ ಎಂದರು.ಮಕ್ಕಳು ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು. ವಿದ್ಯೆ ಕಲಿಸಿಕೊಟ್ಟ ಗುರುಗಳಿಗೆ ಹಾಗೂ ನಿಮ್ಮ ತಂದೆ ತಾಯಿಗಳಿಗೆ ಗೌರವ ಕೊಡಬೇಕು. ವಿದ್ಯೆ ಕಲಿತರೆ ಬದುಕು ಸಾರ್ಥಕವಾಗುತ್ತದೆ. ವಿದ್ಯೆ ಇಲ್ಲದಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಅತಿಥಿ ಶಿಕ್ಷಕರಾದ ರಾಘವೇಂದ್ರ, ಎಸ್ಡಿಎಂಸಿ ಉಪಾಧ್ಯಕ್ಷರಾದ ರಂಜಿತ, ಪ್ರಕಾಶ್, ಆಶಾ ಕಾರ್ಯಕರ್ತೆಯಾದ ಸುಷ್ಮಾ, ಅಂಗನವಾಡಿ ಕಾರ್ಯಕರ್ತೆಯಾದ ಸುನಿತಾ ಹಾಜರಿದ್ದರು.