ಶ್ರೀ ಕೃಷ್ಣ ಜನ್ಮಾಷ್ಟಮಿ: ಶ್ರೀ ಕೃಷ್ಣ ರಾಧೆ ಛದ್ಮವೇಷ ಸಮಾಗಮ

| Published : Aug 29 2024, 12:53 AM IST

ಸಾರಾಂಶ

ಕೇಶವ ಸ್ಮೃತಿ ಸಂವರ್ಧನ ಸಮಿತಿ ಮತ್ತು ಬಾಲ ಗೋಕುಲ ಮಡಿಕೇರಿ ವತಿಯಿಂದ ಮಡಿಕೇರಿಯ ಮಹದೇವಪೇಟೆಯಲ್ಲಿರುವ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಶ್ರೀ ಕೃಷ್ಣ, ರುಕ್ಮಿಣಿ, ರಾಧೆ, ದೇವಕಿ, ಯಶೋಧೆ ಹಾಗೂ ವಸುದೇವರ’ ಛದ್ಮವೇಷ ಸಮಾಗಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೇಶವ ಸ್ಮೃತಿ ಸಂವರ್ಧನ ಸಮಿತಿ ಮತ್ತು ಬಾಲ ಗೋಕುಲ ಮಡಿಕೇರಿ ವತಿಯಿಂದ ಮಡಿಕೇರಿಯ ಮಹದೇವಪೇಟೆಯಲ್ಲಿರುವ ಚೌಡೇಶ್ವರಿ ದೇವಾಲಯದ ಸಭಾಂಗಣದಲ್ಲಿ ಇತ್ತೀಚೆಗೆ ದು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ‘ಶ್ರೀ ಕೃಷ್ಣ, ರುಕ್ಮಿಣಿ, ರಾಧೆ, ದೇವಕಿ, ಯಶೋಧೆ ಹಾಗೂ ವಸುದೇವರ’ ಛದ್ಮವೇಷ ಸಮಾಗಮ ನಡೆಯಿತು.

ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಸಹ ಸಂಪರ್ಕ ಪ್ರಮುಖ ಕುಟ್ಟಂಡ ಪ್ರಿನ್ಸ್‌ ಗಣಪತಿ, ನೈತಿಕ ಮೌಲ್ಯ ಕುಸಿಯುತ್ತಿರುವ ಈ ಕಾಲಘಟ್ಟದಲ್ಲಿ ಸಾಮಾಜಿಕ ಅಧಃಪತನ ಉಂಟಾಗುತ್ತಿದ್ದು, ಮಾನವೀಯ ವೌಲ್ಯ ಬೆಳೆಸುವ ಸಾಂಸ್ಕೃತಿಕ ಶಿಕ್ಷಣ, ಇದನ್ನು ಬೋಧಿಸುವ ವ್ಯವಸ್ಥೆಯೇ ಬಾಲಗೋಕುಲಗಳಾಗಿವೆ ಎಂದರು.

ಹೆಜ್ಜೆ ಹೆಜ್ಜೆಗೂ ದೈವಿಕ ಚೈತನ್ಯದಿಂದ ಜೀವನ ನಡೆಸುವವರು. ಹಿರಿಯರು ಕೊಟ್ಟಿರುವ ಉತ್ತಮ ಸಂಪ್ರದಾಯ, ಜೀವನ ಪದ್ಧತಿಗಳು ಸ್ವಂತಕ್ಕೆ ಅಲ್ಲ. ಬದಲು ಲೋಕದ ಸಮಸ್ತ ಚರಾಚರಕ್ಕೆ ಸಮರ್ಪಿತ ಎಂದು ಅರಿತು, ಸಶಕ್ತ ಸಮಾಜದ ಮೂಲಾಧಾರವು ಪ್ರೀತಿ ಮತ್ತು ಸೇವೆಯಾಗಿದೆ ಎಂದರು.

ಇಂದಿನ ಮಕ್ಕಳು ಮುಂದಿನ ಸಮಾಜಕ್ಕೆ ಸತ್ಕಾರ್ಯಕ್ಕಾಗಿ ಸಿಗಬೇಕಾದರೆ ಬಾಲಗೋಕುಲ ಶಿಕ್ಷಣ ಅನಿವಾರ್ಯ. ನಮ್ಮ ಮಕ್ಕಳನ್ನು ವಿಶ್ವದ ಶ್ರೇಷ್ಠ ಕೊಡುಗೆಯಾಗಿ ರೂಪಿಸಲು ಬಾಲಗೋಕುಲ ಶಿಕ್ಷಣದಿಂದ ಪ್ರೇರಣೆ ಲಭಿಸಲಿ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸಪ್ಪ ಶಿಶು ವಿಹಾರದ ಅಧ್ಯಕ್ಷೆ ಸುಜಾತ ಭಟ್‌ ಮಾತನಾಡಿ, ಶ್ರೀ ಕೃಷ್ಣ ರಾಧೆ ಛದ್ಮವೇಷ ಸಮಾಗಮದಂತಹ ಕಾರ್ಯಕ್ರಮವು ನಮ್ಮ ಭಾರತೀಯ ಸಂಸ್ಕೃತಿ ಜಾಗೃತಾವಸ್ಥೆಯಲ್ಲಿ ಇಡಲು ಒಂದು ಉತ್ತಮ ಕಾರ್ಯವಾಗಿದೆ. ಚಾರಿತ್ರ್ಯಕ್ಕೆ ಮಹತ್ವ ಕೊಡುವ ದೇಶಭಕ್ತರನ್ನು ರೂಪಿಸುವ, ಆಧ್ಯಾತ್ಮಿಕ, ಸಾಂಸ್ಕೃತಿಕ ಆದರ್ಶ ಮೈಗೂಡಿಸುವ ಶಿಕ್ಷಣವಿಂದು ಭಾರತಕ್ಕೆ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಬಾಲಗೋಕುಲದ ಪ್ರಯತ್ನ ಶ್ಲಾಘನೀಯ ಎಂದರು.

ಮಕ್ಕಳಿಗೆ ಪ್ರಸಂಶನ ಪತ್ರ, ಭಾರತ ಮಾತೆಯ ಭಾವಚಿತ್ರ ಹಾಗೂ ಉಡುಗೊರೆ ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಾಮೂಹಿಕ ಭಕ್ತಿ ಗೀತೆ ಹಾಗೂ ಭಜನೆ ಗೀತಗಾಯನ ಕೂಡ ಏರ್ಪಡಿಸಲಾಗಿತ್ತು.