ಸಾರಾಂಶ
- ಚನ್ನಗಿರಿ ತಾಲೂಕು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಬಯಲು ಜಂಗಿಕುಸ್ತಿ: ಶಿವಾಜಿ ರಾವ್ ಮಾಹಿತಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಶಿವಾಜಿ ನಗರದಲ್ಲಿರುವ ನಗರ ದೇವತೆ ಶ್ರೀ ಕುಕ್ಕುವಾಡ ಅಂಬಾ ಭವಾನಿ ಜಾತ್ರೆ ಮತ್ತು ಮಹಾಕಾರ್ತಿಕೋತ್ಸವ ಡಿ.23ರಿಂದ 28ರವರೆಗೆ ನಡೆಯಲಿದೆ ಎಂದು ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಎಂ.ಬಿ.ಶಿವಾಜಿ ರಾವ್ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮ ನಿಮಿತ್ತ ತಾಲೂಕು ಕ್ರೀಡಾಂಗಣದಲ್ಲಿ ಡಿ.25 ರಿಂದ 27ರವರೆಗೆ ರಾಜ್ಯಮಟ್ಟದ ಭಾರಿ ಬಯಲು ಜಂಗಿಕುಸ್ತಿ ಏರ್ಪಡಿಸಲಾಗಿದೆ. ಕುಸ್ತಿ ಪಂದ್ಯದಲ್ಲಿ ನಾಡಿನ ಬಿರುದಾಂಕಿತ ಕುಸ್ತಿಪಟುಗಳು, ಮಹಿಳಾ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಕುಸ್ತಿ ಪಂದ್ಯದ ಅಂತಿಮ ಅಖಾಡ ಕುಸ್ತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಕುಸ್ತಿಪಟುವಿಗೆ ದಿವಂಗತ ರುದ್ರೋಜಿರಾವ್ ಚೌವಾಣ್ ಜ್ಞಾಪಕಾರ್ಥ ₹1 ಲಕ್ಷ ನಗದು ಹಣ, ದ್ವಿತೀಯ ಬಹುಮಾನವಾಗಿ ದಿವಂಗತರಾದ ವಾಸಣ್ಣ ಘಾರ್ಗೆ, ಸಿ.ಬಿ.ಪ್ರಕಾಶ್ ಜಾಧವ್, ಎಂ.ಕೊಟೋಜಿ ರಾವ್ ಜ್ಞಾಪಕಾರ್ಥ ₹60 ಸಾವಿರ ನಗದು ನೀಡಲಾಗುವುದು ಎಂದು ತಿಳಿಸಿದರು.
ಡಿ25ರಂದು ಸಂಜೆ ಕುಸ್ತಿ ಅಖಾಡದ ಪೂಜೆ ಮತ್ತು ಉದ್ಘಾಟನೆಯನ್ನು ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ನೆರವೇರಿಸಲಿದ್ದಾರೆ. ರಾಜ್ಯ ಕುಸ್ತಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಓಂಕಾರ್, ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಬಿ.ವೀರಣ್ಣ ಉಪಸ್ಥಿತರಿರುವರು ಎಂದು ತಿಳಿಸಿದರು.ಕುಸ್ತಿ ಪಂದ್ಯದ ವಿಶೇಷ ತೀರ್ಪುಗಾರರಾಗಿ ಕುಸ್ತಿ ತರಬೇತುದಾರರಾದ ಡಾ. ಕೆ.ವಿನೋದ್ ಕುಮಾರ್, ಶ್ರೀನಿವಾಸ್ ಗೌಡ, ಮಂಜುನಾಥ್, ರಾಷ್ಟ್ರೀಯ ಕುಸ್ತಿಪಟು ಸಿ.ಎಚ್. ಶ್ರೀನಿವಾಸ್, ಹಿರಿಯ ಪೈಲ್ವಾನರಾದ ಸಿ.ಎನ್.ನಾಗರಾಜ್, ಟಿ.ಮೂಡ್ಲಪ್ಪ, ಕವಳ್ಳರ್ ಸಿದ್ದಪ್ಪ, ಕರಡೇರ್ ರಾಮಣ್ಣ, ಅಮೀರ್ ಅಹಮದ್ ಸಾಬ್, ಚಂದ್ರೋಜಿರಾವ್ ತೀರ್ಪುಗಾರರಾಗಲಿದ್ದಾರೆ.
ಜಾತ್ರಾ ಮಹೋತ್ಸವದ ಎಲ್ಲ ಧಾರ್ಮಿಕ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಂಗಳೂರಿನ ಶ್ರೀ ಗೋಸಾಯಿ ಮಹಾಸಂಸ್ಥಾನ ಮಠದ ಭವಾನಿ ದತ್ತಪೀಠ ಗವಿಪುರಂನ ಜಗದ್ಗುರು ವೇದಾಂತಚಾರ್ಯ ಶ್ರೀ ಮಂಜುನಾಥ ಭಾರತಿ ಮಹಾಸ್ವಾಮಿಗಳು ಮತ್ತು ಚನ್ನಗಿರಿ ಹಾಲಸ್ವಾಮಿ ವಿರಕ್ತ ಮಠದ ಶ್ರೀ.ಬಸವ ಜಯಚಂದ್ರ ಸ್ವಾಮಿಗಳು, ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಲಿದ್ದಾರೆ.ಡಿ.23ರಂದು ಬೆಳಗ್ಗೆಯಿಂದ ದೇವತಾ ಕಾರ್ಯಗಳು ನಡೆಯಲಿವೆ. ಸಂಜೆ 7 ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಡಿ.24ರಂದು ಬೆಳಗ್ಗೆ 6.30 ಗಂಟೆಗೆ ಸುಪ್ರಭಾತ ಅಮ್ಮನವರಿಗೆ ಅಭಿಷೇಕ, ಸಹಸ್ರ ನಾಮರ್ಚನೆ ನಡೆದು ಸಂಜೆ 4.30 ಗಂಟೆಗೆ ಕದಳಿ ಪೂಜೆ ನಡೆದು ಗಂಗಾ ಪೂಜೆ ನಂತರ ರಾತ್ರಿ 1 ಗಂಟೆಯಿಂದ ಸಹಸ್ರ ದೀಪಗಳೊಂದಿಗೆ ಮಹಾಕಾರ್ತಿಕೋತ್ಸವ ನಡೆಯಲಿದೆ.
ಡಿ.25ರಂದು ಬೆಳಗ್ಗೆ 10 ಗಂಟೆಯಿಂದ ಪಟ್ಟಣದ ರಾಜಬೀದಿಗಳಲ್ಲಿ ವಿವಿಧ ಮಂಗಳವಾಧ್ಯದೊಂದಿಗೆ ಶ್ರೀ ಅಮ್ಮನವರ ರಥೋತ್ಸವವು ನಡೆಯಲಿದೆ. ಡಿ.26ರಂದು ಬೆಳಗ್ಗೆಯಿಂದ ದೇವತಾ ಕಾರ್ಯಗಳು ನಡೆಯಲಿವೆ. ಸಂಜೆ 6.30ಕ್ಕೆ ಧಾರ್ಮಿಕ ಸಮಾರಂಭ ನಡೆಯುವುದು. ಡಿ.27ರಂದು ಬೆಳಗ್ಗೆ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ಸಂಜೆ 6.30ಕ್ಕೆ ಕುಸ್ತಿ ಅಖಾಡದಲ್ಲಿ ಅಭಿನಂಧನಾ ಸಮಾರಂಭ ನಡೆಯಲಿದೆ.ಡಿಸೆಂಬರ್ 28ರಂದು ಬೆಳಗ್ಗೆ 11 ಗಂಟೆಯಿಂದ ಪಟ್ಟಣದ ರಾಜಬೀದಿಗಳಲ್ಲಿ ವಿವಿಧ ಪ್ರಕಾರಗಳ ಜನಪದ ಕಲಾತಂಡದೊಂದಿಗೆ ಶ್ರೀ ಕುಕ್ಕುವಾಡೇಶ್ವರಿ ರಾಜಬೀದಿ ಉತ್ಸವ ನಡೆಯುವುದು ಜಾತ್ರೋತ್ಸವ ಮುಕ್ತಾಯ ಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮರಾಠ ಸಮಾಜದ ಪ್ರಮುಖರಾದ ಎಂ.ಎಂ. ಮಂಜುನಾಥ್ ಜಾಧವ್, ಬಿ.ಎಂ. ಕುಬೇಂದ್ರೋಜಿ ರಾವ್, ಜಾತ್ರಾ ಸಮಿತಿಯ ಅಧ್ಯಕ್ಷ ಶ್ರೀಕಾಂತ್, ನಾಗರಾಜ್, ದೀಪು ಗಾರ್ಘೆ, ಅಣ್ಣೋಜಿ ರಾವ್, ಮಂಜುನಾಥ್, ಶಿವಾಜಿ ರಾವ್ ಉಪಸ್ಥಿತರಿದ್ದರು.- - - -17ಕೆಸಿಎನ್‌ಜಿ3.ಜೆಪಿಜಿ:
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕ್ಷತ್ರಿಯ ಮರಾಠ ಸಮಾಜ ಅಧ್ಯಕ್ಷ ಎಂ.ಬಿ.ಶಿವಾಜಿರಾವ್ ಮಾತನಾಡಿದರು.