ವಿವಿಧ ಸಂಘ, ಸಂಸ್ಥೆಗಳಿಂದ ಭಕ್ತರಿಗೆ ಉಚಿತ ಹಾಗೂ ಪುಷ್ಕಳ ಭೋಜನ ವ್ಯವಸ್ಥೆ
ಸಂಡೂರು: ತಾಲೂಕಿನ ಸ್ವಾಮಿಮಲೈ ಅರಣ್ಯ ಪ್ರದೇಶದ ಗುಡ್ಡಬೆಟ್ಟಗಳ ತಪ್ಪಲಲ್ಲಿರುವ ಹಾಗೂ ಪುರಾಣ ಪ್ರಸಿದ್ಧ ಶ್ರೀಕುಮಾರಸ್ವಾಮಿ ಜಾತ್ರಾ ಮಹೋತ್ಸವವು ಮಂಗಳವಾರ ಸಂಭ್ರಮದಿಂದ ಜರುಗಿತು.
ಅಧಿಕ ಮಾಸದ ಕಾರ್ತಿಕ ಹುಣ್ಣಿಮೆಯ ಕೃತ್ತಿಕಾ ನಕ್ಷತ್ರವು ಶಿವಯೋಗದೊಂದಿಗೆ ಕೂಡಿದಾಗ ಮಾತ್ರ ಈ ಜಾತ್ರೆ ಜರುಗುತ್ತದೆ.ಇಂತಹ ಪುಣ್ಯತಮವಾದ ಯೋಗವು ೫ ವರ್ಷದಲ್ಲಿ ಎರಡು ಬಾರಿ ಬರುತ್ತದೆ. ಮಂಗಳವಾರ ಈ ಯೋಗ ಕೂಡಿ ಬಂದಿರುವ ಹಿನ್ನೆಲೆ ಶ್ರೀಕುಮಾರಸ್ವಾಮಿಯ ಮಹಾಜಾತ್ರೆ ಜರುಗಿದೆ.ಬೆಳಗ್ಗೆ ೫ ಗಂಟೆಗೆ ಶ್ರೀಕುಮಾರಸ್ವಾಮಿಗೆ ಮಹಾಭಿಷೇಕ ನೆರವೇರಿಸಲಾಯಿತು. ಬೆಳಗ್ಗೆ ೯ ಗಂಟೆಯಿಂದ ಶ್ರೀಕುಮಾರಸ್ವಾಮಿಗೆ ಪೂರ್ಣಾಲಂಕಾರ ಸೇವೆ ಹಾಗೂ ಯೋಗ ದರ್ಶನ ಜರುಗಿತು. ಸಂಜೆ ೬ ಗಂಟೆಗೆ ಘೋರ್ಪಡೆ ರಾಜವಂಶಸ್ಥರು ಧ್ವಜಾರೋಹಣ ಪೂಜೆ ನೆರವೇರಿಸಿದರು.
ರಾತ್ರಿ ೮.೩೦ಕ್ಕೆ ಶ್ರೀಸ್ವಾಮಿಗೆ ಪಾಲಿಕಿ ಸೇವೆ ಮತ್ತು ಪಿಕಲೋತ್ಸವ, ೯.೧೫ಕ್ಕೆ ತೊಟ್ಟಿಲು ಸೇವೆ ನೆರವೇರಿಸಲಾಯಿತು. ಧ್ವಜಾರೋಹಣದ ನಂತರ ಸಿಡಿಸಿದ ಪಟಾಕಿಗಳು ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದವಲ್ಲದೆ, ಜಾತ್ರಾ ಮಹೋತ್ಸವಕ್ಕೆ ಕಳೆ ಕಟ್ಟಿದವು. ಜಾತ್ರೆಯ ಹಿನ್ನೆಲೆ ಶ್ರೀಕುಮಾರಸ್ವಾಮಿ ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬುಧವಾರ ಬೆಳಗ್ಗೆ ೯ಗಂಟೆಯಿಂದ ಪ್ರತಿಪದಾದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.ದೇವಸ್ಥಾನದಲ್ಲಿ ಮೊಳಗಿದ ಜೈಜೈಕಾರ:
ಘೋರ್ಪಡೆ ರಾಜವಂಶಸ್ಥರು, ಸಂಸದ ಈ.ತುಕಾರಾಮ್, ಶಾಸಕಿ ಅನ್ನಪೂರ್ಣ ಈ ತುಕಾರಾಮ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಭಕ್ತರು,ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮುಂತಾದೆಡೆಗಳಿಂದ ಆಗಮಿಸಿದ್ದ ಭಕ್ತರು ಶ್ರೀಕುಮಾರಸ್ವಾಮಿ, ಶ್ರೀಪಾರ್ವತಿ ದೇವಿ, ಶ್ರೀಶಂಕರ, ಶ್ರೀನಾಗನಾಥೇಶ್ವರ ಹಾಗೂ ಮಾರ್ಗ ಮಧ್ಯದಲ್ಲಿ ಬರುವ ಶ್ರೀಹರಿಶಂಕರರ ದರ್ಶನ ಪಡೆದು ಪುನೀತರಾದರು.ಶ್ರೀಕುಮಾರಸ್ವಾಮಿ ದೇವಸ್ಥಾನದಲ್ಲಿ ಭಕ್ತರಿಂದ ಜಯಘೋಷ ಮೊಳಗಿತು. ಸಂಡೂರಿನ ನೂರಾರು ಭಕ್ತರು ಪಾದಯಾತ್ರೆಯ ಮೂಲಕ ೧೧ ಕಿಮೀ ದೂರದ ಬೆಟ್ಟಕ್ಕೆ ತೆರಳಿ, ಶ್ರೀಕುಮಾರಸ್ವಾಮಿಯ ದರ್ಶನ ಪಡೆದರು.
ಪುಷ್ಕಳ ಭೋಜನ:ದೇವಸ್ಥಾನ ಆಡಳಿತ ಮಂಡಳಿ, ವೆಸ್ಕೊ, ಬಿಕೆಜಿ ಸಂಸ್ಥೆಗಳವರು ಹಾಗೂ ಕೆಲವು ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಾವಿರಾರು ಭಕ್ತರಿಗೆ ಉಪಹಾರ ಹಾಗೂ ಪುಷ್ಕಳ ಭೋಜನದ ವ್ಯವಸ್ಥೆ ಕಲ್ಪಿಸಿದ್ದರು.
ಜನರ ಗಮನ ಸೆಳೆದ ಬಂಡಿಗಣಿಯದಾನೇಶ್ವರಅಭಿವೃದ್ಧಿ ಸೇವಾ ಸಂಘ ಸವದಿಯ ಪ್ರಸಾದ ವ್ಯವಸ್ಥೆ:ಬಾಗಲಕೋಟೆ ಜಿಲ್ಲೆಯ ಬಂಡಿಗಣಿಯ ಚಕ್ರವರ್ತಿದಾನೇಶ್ವರ ಅಭಿವೃದ್ಧಿ ಸೇವಾ ಸಂಘ ಸವದಿಯ ಸುಮಾರು ೪೦೦ ಭಕ್ತರು ದೇವಸ್ಥಾನದ ಬಳಿಯ ವಿಶಾಲವಾದ ಜಾಗದಲ್ಲಿ ಜಾತ್ರೆಗೆ ಬಂದ ಭಕ್ತರಿಗೆ ಭಾನುವಾರದಿಂದ ಬುಧವಾರದವರೆಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಪುಷ್ಕಳವಾದ ಭೋಜನ ವ್ಯವಸ್ಥೆ ಕೈಗೊಂಡಿರುವುದು ಜನರ ಗಮನ ಸೆಳೆಯಿತು. ಶ್ರೀಮಠದ ಭಕ್ತರ ಸೇವಾ ಮನೋಭಾವಕ್ಕೆ ಜಾತ್ರೆಗೆ ಬಂದಿದ್ದ ಭಕ್ತರು ಮೆಚ್ಚುಗೆ ಹಾಗೂ ಅಭಿಮಾನ ವ್ಯಕ್ತಪಡಿಸಿದರು.
೩೦ ಬಸ್ಗಳ ವ್ಯವಸ್ಥೆ:ದೇವಸ್ಥಾನಕ್ಕೆ ಹೋಗಿ ಬರಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ಸಂಡೂರು ಬಸ್ ಘಟಕದಿಂದ ಸುಮಾರು೩೦ ಬಸ್ ಬಿಡಲಾಗಿತ್ತು. ಒಂದು ಬಸ್ನಲ್ಲಿ ಸೀಟ್ಗಳಿರುವಷ್ಟೇ ಜನರನ್ನು ಹತ್ತಿಸುತ್ತಿದ್ದದರಿಂದ ನೂಕು ನುಗ್ಗಲು ಇರಲಿಲ್ಲ. ಜನತೆ ಸುಗಮವಾಗಿ ಜಾತ್ರೆಗೆ ಹೋಗಿ ಬರುವಂತಾಯಿತು.
ಆರೋಗ್ಯ ಸೇವೆ ಹಾಗೂ ರಕ್ತದಾನ ಶಿಬಿರ:ಸಂಡೂರಿನ ಬಸ್ ನಿಲ್ದಾಣ ಹಾಗೂ ಶ್ರೀಕುಮಾರಸ್ವಾಮಿ ದೇವಸ್ಥಾನದ ಬಳಿಯಲ್ಲಿ ಆರೋಗ್ಯಇಲಾಖೆಯಿಂದ ಸಾರ್ವಜನಿಕರಿಗೆ ಆರೋಗ್ಯ ಸೇವೆ ಒದಗಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ ಹಲವರು ರಕ್ತದಾನ ಮಾಡಿದರು.
ಸೂಕ್ತ ಭದ್ರತಾ ವ್ಯವಸ್ಥೆ:ಭಕ್ತರು ಸಾಲಾಗಿ ಸಾಗಿ ದೇವರದರ್ಶನ ಪಡೆಯಲು ಅನುಕೂಲವಾಗುವಂತೆ ಪೊಲೀಸ್ ಹಾಗೂ ಸ್ಮಯೋರ್ ಕಂಪನಿ ಸಿಬ್ಬಂದಿಗಳಿಂದ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿತ್ತು.