ಸಾರಾಂಶ
3 ದಿನಗಳಿಂದ ಜರುಗಿದ ಈ ಜಾತ್ರಾ ಮಹೋತ್ಸವದಲ್ಲಿ ಒಂದೊಂದು ದಿನವೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ಕೈಂಕರ್ಯ ಜರುಗಿದ್ದು, ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಜಾತ್ರಾ ಮಹೋತ್ಸವದ ಪ್ರಯುಕ್ತ ಪಂಚಾಮೃತ ಅಭಿಷೇಕ, ಗಂಗಾಸ್ನಾನ, ಬಲಿಪ್ರಧಾನೋತ್ಸವ, ಸಂಪ್ರೋಕ್ಷಣೆ, ರಕ್ಷಾ ಬಂಧನ, ಪುಷ್ಪ ಮಂಟಪೋತ್ಸವ, ಸರ್ಪೋತ್ಸವ, ನವಿಲೋತ್ಸವ, ಗಜೇಂದ್ರ ಮೋಕ್ಷ, ಗರುಡೋತ್ಸವ, ಲಕ್ಷ್ಮೀಕಲ್ಯಾಣೋತ್ಸವ, ಅಂಬಾರಿ ಉತ್ಸವ, ಕೃಷ್ಣ ಗಂಧೋತ್ಸವ ಪೂಜಾ ಕಾರ್ಯ ನೆರವೇರಿಸಲಾಯಿತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನ ಗಂಜಿಗೆರೆಪುರದ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿಯವರ ಬ್ರಹ್ಮರಥೋತ್ಸವವನ್ನು ಸಾವಿರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಮಧ್ಯಾಹ್ನ ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಾಯಿತು. 3 ದಿನಗಳಿಂದ ಜರುಗಿದ ಈ ಜಾತ್ರಾ ಮಹೋತ್ಸವದಲ್ಲಿ ಒಂದೊಂದು ದಿನವೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು, ಪೂಜಾ ಕೈಂಕರ್ಯ ಜರುಗಿದ್ದು, ಅಪಾರ ಸಂಖ್ಯೆಯ ಭಕ್ತರು ಸಾಕ್ಷಿಯಾಗಿದ್ದು ವಿಶೇಷವಾಗಿತ್ತು. ಜಾತ್ರಾ ಮಹೋತ್ಸವದ ಪ್ರಯುಕ್ತ ಪಂಚಾಮೃತ ಅಭಿಷೇಕ, ಗಂಗಾಸ್ನಾನ, ಬಲಿಪ್ರಧಾನೋತ್ಸವ, ಸಂಪ್ರೋಕ್ಷಣೆ, ರಕ್ಷಾ ಬಂಧನ, ಪುಷ್ಪ ಮಂಟಪೋತ್ಸವ, ಸರ್ಪೋತ್ಸವ, ನವಿಲೋತ್ಸವ, ಗಜೇಂದ್ರ ಮೋಕ್ಷ, ಗರುಡೋತ್ಸವ, ಲಕ್ಷ್ಮೀಕಲ್ಯಾಣೋತ್ಸವ, ಅಂಬಾರಿ ಉತ್ಸವ, ಕೃಷ್ಣ ಗಂಧೋತ್ಸವ ಪೂಜಾ ಕಾರ್ಯ ನೆರವೇರಿಸಲಾಯಿತು. ರಥೋತ್ಸವದ ಅಂಗವಾಗಿ ಗ್ರಾಮದ ಬೀದಿಗಳನ್ನು ತಳಿರು-ತೋರಣಗಳು ಹಾಗೂ ಬಾಲೆಗಿಡಗಳಿಂದ ಶೃಂಗರಿಸಲಾಗಿತ್ತು. ಲಕ್ಷ್ಮೀರಂಗನಾಥ ಸ್ವಾಮಿಯವರವರ ಉತ್ಸವ ಮೂರ್ತಿಯನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ಬಹ್ಮರಥದ ಗಾಲಿಗೆ ತೆಂಗಿನಕಾಯಿ ಒಡೆದು ಬ್ರಹ್ಮರಥೋತ್ಸವಕ್ಕೆ ಭಕ್ತಾದಿಗಳು ಚಾಲನೆ ನೀಡಿದರು. ಅಪಾರ ಸಂಖ್ಯೆಯ ಸೇರಿದ್ದ ಭಕ್ತರ ಸಮೂಹ ಗೋವಿಂದನ ನಾಮಸ್ಮರಣೆ, ಶ್ರೀರಾಮ, ಹನುಮನ ನಾಮಸ್ಮರಣೆಯೊಂದಿಗೆ ಬ್ರಹ್ಮರಥವನ್ನು ಎಳೆದು ಸಂಭ್ರಮಿಸಿದರು. ರಥ ಮುಂದೆಮುಂದೆ ಸಾಗುತ್ತಿದಂತೆ ನೆರದಿದ್ದ ಸಹಸ್ರಾರು ಭಕ್ತರು ಸಮೂಹ ಬಾಳೇಹಣ್ಣು ಹಾಗೂ ದವನ ಪುಷ್ಪಗಳನ್ನು ರಥದ ಮೇಲೆ ಎಸೆದು ತಮ್ಮ ಭಕ್ತಿಭಾವನೆಗಳನ್ನು ಸಮರ್ಪಿಸಿತು. ರಥೋತ್ಸವ ನಂತರ ಸೂರ್ಯ ಮಂಡಲೋತ್ಸವ, ಕಳಸಪೂಜೆ, ತೇರು ಮಂಟಪೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.ಏ. ೨೪ರ ಗುರುವಾರ ರಥಾವರೋಹಣ ಪೂಜೆ, ಅಡ್ಡಪಲ್ಲಕ್ಕಿ ಉತ್ಸವ, ಕುಂಕುಮೋತ್ಸವ, ಶಾಂತೋತ್ಸವ, ಪ್ರಹ್ಲಾದ ಪುರಾಣ, ಗರುಡೋತ್ಸವ, ಉಯ್ಯಾಲೋತ್ಸವ, ಶಯನೋತ್ಸವ ಹಾಗೂ ಮಧ್ಯಾಹ್ನ ೧೨ ಗಂಟೆಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ.
ಏ. ೨೫ರ ಶುಕ್ರವಾರ ಅಶ್ವರೋಹಣೋತ್ಸವ, ಚೂರ್ಣೋತ್ಸವ, ಓಕಳಿ ತೀರ್ಥಸ್ನಾನ, ಹೂವಿನ ಅಲಂಕಾರ, ಮಹಾಮಂಗಳಾರತಿ, ರಾತ್ರಿ ೧೦ಕ್ಕೆ ಹನುಮಂತ್ಯುತ್ಸವ, ರಾತ್ರಿ ಗ್ರಾಮದೇವತೆ ಕೊಲ್ಲಾಪುರದ ಮಹಾಲಕ್ಷ್ಮೀ ಅಮ್ಮನವರ ಮದುವಣೆಗೆ ಶಾಸ್ತ್ರ, ಭಾನ, ಬೇವಿನುಡಿಗೆ ಸೇವೆ, ಮಹಾಮಂಗಳಾರತಿ ಹಾಗೂ ಏ. ೨೬ರ ಶನಿವಾರ ಮಧ್ಯಾಹ್ನ ೧ ಕ್ಕೆ ಕೊಲ್ಲಾಪುರದ ಮಹಾಲಕ್ಷ್ಮೀ ಅಮ್ಮನವರ ಜಾತ್ರೆ ಮತ್ತು ಅಗ್ನಿಕುಂಡ ಸೇವೆ ಮತ್ತು ಸಿಡಿ ಸೇವೆ, ಸಂಜೆ ೬ ಗಂಟೆಗೆ ಜಲಕ್ರೀಡೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಲ್ಲದೇ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಲಕ್ಷ್ಮೀರಂಗನಾಥ ಸ್ವಾಮಿ ಕೃಪಾಪೋಷಿತ ನಾಟಕ ಮಿತ್ರ ಮಂಡಳಿಯಿಂದ ರಾತ್ರಿ ಗಂಟೆಗೆ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿದ್ದು, ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಮನವಿ ಮಾಡಿದ್ದಾರೆ.