ಕನ್ನಡಪ್ರಭ ವಾರ್ತೆ ಮಂಡ್ಯ

ಮದ್ದೂರು ತಾಲೂಕು ಸಬ್ಬನಹಳ್ಳಿ ಗ್ರಾಮದ ಶ್ರೀ ಮಂಚಮ್ಮ, ಶ್ರೀಸೀತಾಳಲಿಂಗೇಶ್ವರ ಸ್ವಾಮಿ ರಥೋತ್ಸವ ಫೆ.೧೮ರಿಂದ ೨೧ರವರೆಗೆ ನಡೆಯಲಿವೆ ಎಂದು ದೇವಾಲಯ ಟ್ರಸ್ಟ್ ಕಾರ್ಯದರ್ಶಿ ಎಸ್.ಕೆ.ಪುಟ್ಟರಾಜು ತಿಳಿಸಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳವಾರ ಸಂಜೆ ೫ ಗಂಟೆಗೆ ಬಂಡಿ ಉತ್ಸವ, ಹೋಮ ಮತ್ತು ಶಿವರಾತ್ರಿ ಹಬ್ಬದ ಆರತಿ ಜರುಗಿದ್ದು, ಫೆ.೧೮ರಂದು ಬುಧವಾರ ಬೆಳಗಿನ ಜಾವ ೫.೩೦ಕ್ಕೆ ಶ್ರೀ ಕಾಳಮ್ಮ ದೇವರಿಗೆ ಕೊಂಡ ನಡೆಯುತ್ತದೆ. ಸಂಜೆ ೫ ಗಂಟೆಗೆ ಮಂಚಮ್ಮ, ಕಾಳಮ್ಮ ದೇವರ ಬಾಯಿಬೀಗ ಉತ್ಸವ, ರಾತ್ರಿ ಕಾಳಮ್ಮ ದೇವರಿಗೆ ಮಡೆ, ಬೆಳಗಿನ ಜಾವದವರೆಗೆ ದೇವರ ಪೂಜಾ ಮೆರವಣಿಗೆ ನಡೆಯುತ್ತದೆ ಎಂದು ವಿವರಿಸಿದರು.

ಫೆ.೧೯ರಂದು ಬೆಳಗ್ಗೆ ೬ ಗಂಟೆಗೆ ಕಾಳಮ್ಮ ತಾಯಿಗೆ ಮಡೆ, ಪೂಜೆ ಮತ್ತು ೧೦ ಗಂಟೆಗೆ ಅಕ್ಕಿ, ಹಸಿ ಹಿಟ್ಟನ್ನು ಪಡೆದು ರಾತ್ರಿ ೧೧ ಗಂಟೆಗೆ ಶ್ರೀ ಸೀತಾಳಲಿಂಗೇಶ್ವರ ಸ್ವಾಮಿಯವರಿಗೆ ಹೋಮ ನಡೆಸಿ ಪರ ಮಾಡಲು ಒಲೆ ಹಚ್ಚಲಾಗುವುದು. ಫೆ. ೨೦ರಂದು ಬೆಳಗ್ಗೆ ೮.೩೦ಕ್ಕೆ ಬಾಯಿಬೀಗ ದೇವರ ಪೂಜೆಗಳ ಸಮೇತ ಸ್ವಾಮಿ ರಥೋತ್ಸವ ನಡೆಯಲಿದೆ. ಮಧ್ಯಾಹ್ನ ೧ ಗಂಟೆಗೆ ಅನ್ನಸಂತರ್ಪಣೆ, ಸಂಜೆ ೬ ಗಂಟೆಗೆ ಮಹಾ ಮಂಗಳಾರತಿ ನಡೆಯಲಿದೆ. ಅಂದು ರಾತ್ರಿ ೯ ಗಂಟೆಗೆ ಶನಿಪ್ರಭಾವ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ. ಫೆ.೨೧ರಂದು ಬೆಳಗ್ಗೆ ೫ ಗಂಟೆಗೆ ಪಟ್ಟಲದಮ್ಮನವರಿಗೆ ಮಡೇ ಆರತಿ ಹಾಗೂ ಪೂಜೆ ನಡೆಯಲಿದೆ. ಅಂದು ರಾತ್ರಿ ೯ ಗಂಟೆಗೆ ಸಂಸಾರ ಬಂಧನ ಸಾಮಾಜಿಕ ನಾಯಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀಸೀತಾಳಲಿಂಗೇಶ್ವರಸ್ವಾಮಿಯು ಉದ್ಭವ ಮೂರ್ತಿಯಾಗಿದ್ದು, ಪಂಚಲಿಂಗಗಳ ಉದ್ಭವವಾಗಿದೆ. ಒಮ್ಮೆ ಮುಸ್ಲಿಂ ಕುಟುಂಬವೊಂದು ಗ್ರಾಮಕ್ಕೆ ಬಂದು ಈ ಜಾಗದಲ್ಲಿ ಅಡುಗೆ ಮಾಡಲು ತಯಾರಿ ನಡೆಸಿ ಕಲ್ಲುಗಳನ್ನು ಅಳವಡಿಸಿ ನೀರು ಕಾಯಲು ಇಟ್ಟಿದ್ದರು. ಗಂಟೆಗಳ ಕಾಲವಾದರೂ ನೀರು ಕಾಯಲೇ ಇಲ್ಲ. ಈ ಬಗ್ಗೆ ಗ್ರಾಮಸ್ಥರೊಂದಿಗೆ ವಿಚಾರ ಮಾಡಲಾಗಿ ಇಲ್ಲಿ ಪಂಚ ಲಿಂಗಗಳು ಉದ್ಭವವಾಗಿರುವುದು ತಿಳಿಯಿತು. ನಂತರ ಅದಕ್ಕೆ ದೇವಸ್ಥಾನ ನಿರ್ಮಿ ಪುರಾತನ ಕಾಲದಿಂದಲೂ ಪೂಜೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.


ಕೋವಿಡ್ ಸಮಯದಲ್ಲೂ ಸಹ ನಮ್ಮ ಗ್ರಾಮದಲ್ಲಿ ರಥೋತ್ಸವ ಮತ್ತು ದೇವರ ಪೂಜಾ ಕಾರ್ಯ ಹಾಗೂ ಅನ್ನಸಂತರ್ಪಣೆ ಕಾರ್ಯವನ್ನು ನೆರವೇರಿಸಲಾಗಿತ್ತು ಎಂದರು.

ದೇವಾಲಯ ಟ್ರಸ್ಟ್ ಅಧ್ಯಕ್ಷ ನಾಡಗೌಡ್ನ ಮಂಚೇಗೌಡ, ಗೌರವಾಧ್ಯಕ್ಷ ಪುಟ್ಟೇಗೌಡ, ಖಜಾಂಚಿ ಎಸ್.ಎಂ. ಮಂಚೇಗೌಡ, ಎಂ. ಬಲ್ಲೇಗೌಡ ಇತರರು ಗೋಷ್ಠಿಯಲ್ಲಿದ್ದರು.