ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಮಠ ಮಾನ್ಯಗಳು ಕೇವಲ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳಿಗಷ್ಟೇ ಸೀಮಿತವಲ್ಲ ಎಂಬುದನ್ನು ಸಾಧಿಸಿ ತೋರಿಸಿರುವ ಆದಿಚುಂಚನಗಿರಿ ಮಠವು 500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅಸಂಖ್ಯಾತ ಮನೆಗಳಲ್ಲಿ ಜ್ಞಾನದ ಬೆಳಕನ್ನು ಬಿತ್ತಿರುವುದು ಶ್ಲಾಘನೀಯ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಬಣ್ಣಿಸಿದರು.ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನಮಠದಲ್ಲಿ ಬುಧವಾರ 46ನೇ ರಾಜ್ಯ ಮಟ್ಟದ ಜಾನಪದ ಕಲಾಮೇಳ ಹಾಗೂ ಚುಂಚಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಜನರ ಬಾಯಿಂದ ಬಾಯಿಗೆ ಹರಡುವ ಜಾನಪದವನ್ನು ಹಲವು ಮಾಧ್ಯಮಗಳ ಮೂಲಕ ವಿಶ್ವದಾದ್ಯಂತ ಪಸರಿಸುವ ಕಾರ್ಯ ಸಾಗುತ್ತಿದೆ ಎಂದರು.
ಕಲೆಗೆ ಜಾತಿ ಧರ್ಮದ ಭೇದ ಭಾವವಿಲ್ಲ. 1500 ವರ್ಷಗಳ ಇತಿಹಾಸವಿರುವ ಶ್ರೀಮಠವು ಧರ್ಮದ ಸಾರದೊಂದಿಗೆ ಕಲಾ ಪರಂಪರೆ ಉಳಿಸಿ ಬೆಳೆಸುತ್ತಾ ಶೈಕ್ಷಣಿಕವಾಗಿ ಜ್ಞಾನ ದಾಸೋಹ ನೀಡುತ್ತಾ ಲಕ್ಷಾಂತರ ಜನರ ಜೀವನಕ್ಕೆ ಬೆಳಕಾಗಿದೆ ಎಂದರು.ಜನಪದ ಕಲಾವಿದರು ಪಾಲ್ಗೊಂಡಿರುವ ಈ ಮೇಳದಿಂದ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಹಿಂದೆ ಟಿವಿ ಮಾಧ್ಯಮ ಇರಲಿಲ್ಲ. ಅಂತಹ ಸಂದರ್ಭದಲ್ಲಿ ನಮ್ಮ ಪೂರ್ವಿಕರು ಜನಪದ ಕಲೆ, ಸಂಸ್ಕೃತಿಯನ್ನು ಹಾಡು, ನೃತ್ಯಗಳ ಮೂಲಕ ಇನ್ನೊಬ್ಬರಿಗೆ ತಲುಪಿಸುತ್ತಿದ್ದರು. ಆ ಕಲೆ ಇಂದಿನ ಆಧುನಿಕ ಸೋಷಿಯಲ್ ಮೀಡಿಯಾಗಳ ಹಾವಳಿ ನಡುವೆಯೂ ಉಳಿದಿದೆ ಎಂದರೆ ಅದಕ್ಕೆ ಜನಪದ ಕಲಾವಿದರೇ ಕಾರಣ ಎಂದರು.
ಭಾರತದಲ್ಲಿ ಬೆಳವಣಿಗೆ ಅತಿ ವೇಗವಾಗಿ ಸಾಗುತ್ತಿದೆ. ಶ್ರೀಮಠವು ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತಿದೆ. ನಮ್ಮ ಕಲೆ, ಸಂಸ್ಕೃತಿ ಉಳಿಯಲು, ಆಧ್ಯಾತ್ಮಿಕ ಧಾರ್ಮಿಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳು ಸನಾತನ ಜಾನಪದ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಹಾಗೂ ಅದರ ನಿರಂತರತೆಗೆ ಸದಾ ಶ್ರಮಿಸುತ್ತಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಶ್ರೀಮಠವು ಆಧ್ಯಾತ್ಮವಲ್ಲದೆ ಕಲೆ ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಏಳಿಗೆಯನ್ನು ಸಾಧಿಸುತ್ತ ಮುಂಚೂಣಿಯಲ್ಲಿದೆ. ಪ್ರತಿ ವರ್ಷ 5 ಮಂದಿ ಸಾಧಕರನ್ನು ಗುರುತಿಸಿ ಚುಂಚಶ್ರೀ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.
ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ, ಜನಪದ ಸಂಸ್ಕೃತಿ ಮೂಲ ಬೇರುಗಳಿದ್ದಂತೆ. ಬೇರುಗಳು ಅಳಿದರೆ ಚಿಗುರಿಗಾಗಲಿ, ಎಲೆಗಳಿಗಾಗಲಿ ಉಳಿಗಾಲವಿಲ್ಲ. ಅಂತಹ ಜನಪದ ಸಂಸ್ಕೃತಿಯನ್ನು ಉಳಿಸಬೇಕೆಂದು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿರವರು ಕಳೆದ ನಲವತ್ತಾರು ವರ್ಷಗಳ ಹಿಂದೆಯೇ ಶ್ರೀಕ್ಷೇತ್ರದಲ್ಲಿ ಜನಪದ ಕಲಾವಿದರ ಮಹಾ ಮೇಳವನ್ನು ಪ್ರಾರಂಭಿಸಿದರು. ಅದು ಇಂದಿಗೂ ಪರಂಪರೆಯಾಗಿ ಮುಂದುವರೆಯುತ್ತಿದೆ ಎಂದರು.ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ತಂದೆ ಗಂಗಾಧರಯ್ಯನವರು ಶ್ರೀಮಠದೊಂದಿಗೆ ಹೊಂದಿದ್ದ ಅಪೂರ್ವ ಬಾಂಧವ್ಯ ಹಾಗೂ ತುಮಕೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಎಂಬ ಕರೆಗೆ ಸಿದ್ಧಾರ್ಥ ಸಂಸ್ಥೆಯು ಶ್ರೀಮಠದ್ದೇ. ನೀವೇ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಆಧುನಿಕ ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿ ಎಂದು ಗುರುಗಳು ಹಾರೈಸಿದ್ದನ್ನೂ ಶ್ರೀಗಳು ಸ್ಮರಿಸಿಕೊಂಡರು.
ಸಮಾರಂಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಿ ತಮ್ಮ ಸ್ವಗ್ರಾಮದ ಸರ್ಕಾರಿ ಶಾಲೆಗೆ 20 ಕೋಟಿ ರು. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ಹಾಗೂ ಸೌಲಭ್ಯವನ್ನು ಒದಗಿಸಿಕೊಟ್ಟ ಡಾ.ಎಚ್.ಎಂ.ವೆಂಕಟಪ್ಪ, ಸಮಾಜ ಸೇವಾ ಕ್ಷೇತ್ರದಿಂದ ಎನ್.ಜಿ.ನಾರಾಯಣ, ಕ್ರೀಡಾ ಕ್ಷೇತ್ರದ ಸಾಧಕ ಡಾ.ಸಿ.ಹೊನ್ನಪ್ಪಗೌಡ, ಕೃಷಿ ಮತ್ತು ಪರಿಸರ ಕ್ಷೇತ್ರದಿಂದ ಡಾ.ಎಲ್.ಹನುಮಯ್ಯ ಮತ್ತು ಜಾನಪದ ಕ್ಷೇತ್ರದ ಸಾಧಕ ಜಿ.ಡಿ.ತಿಮ್ಮಯ್ಯ ಅವರಿಗೆ 50 ಸಾವಿರ ರು. ನಗದು ಸೇರಿದಂತೆ ನೆನಪಿನ ಕಾಣಿಕೆ ಪ್ರಶಸ್ತಿ ಫಲಕ ಒಳಗೊಂಡ ಈ ವರ್ಷದ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಿ ನಿರ್ಮಲಾನಂದನಾಥ ಶ್ರೀಗಳು ಗೌರವಿಸಿದರು.ವೇದಿಕೆಯಲ್ಲಿ ಗೊರವನ ಕುಣಿತ ಕಲಾವಿದ ಮಲ್ಲಯ್ಯ ಮತ್ತು ಪೂಜಾ ಕುಣಿತ ಕಲಾವಿದ ಸಿದ್ದೇಗೌಡ ಈ ಇಬ್ಬರು ಕಲಾವಿದರಿಗೆ ಕರ್ನಾಟಕ ಜಾನಪದ ಪರಿಷತ್ ವತಿಯಿಂದ ಕೊಡ ಮಾಡುವ ತಲಾ 10 ಸಾವಿರ ಮೊತ್ತದ ನಾಡೋಜ ಎಚ್.ಎಲ್.ನಾಗೇಗೌಡ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.