ಸೋಮವಾರಪೇಟೆ: ತಾಲೂಕಿನ ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿರುವ ಪಟ್ಟಣದ ಶ್ರೀ ಮುತ್ತಪ್ಪಸ್ವಾಮಿ ದೇವಾಲಯದ ಜಾತ್ರೋತ್ಸವ ಕಳೆದ ಮೂರು ದಿನಗಳಿಂದ ಶ್ರದ್ಧಾ ಭಕ್ತಿಯಿಂದ ನಡೆದು, ಮಂಗಳವಾರ ಸಂಜೆ ಸಂಪನ್ನಗೊಂಡಿತು.
ಭಾನುವಾರ ಗಣಪತಿಹೋಮದೊಂದಿಗೆ ಆರಂಭಗೊಂಡಿತು. ಶ್ರೀ ಮುತ್ತಪ್ಪಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಜೆ ಕೇರಳದ ಮನಹಿಲ್ಲಂ ತಂತ್ರಿಗಳಾದ ಕೃಷ್ಣ ಕುಮಾರ್ ನಾಗದೇವರಿಗೆ ವಿಶೇಷ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.ಕಕ್ಕೆಹೊಳೆ ಸಮೀಪವಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಮುತ್ತಪ್ಪಸ್ವಾಮಿ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ರಕ್ತಚಾಮುಂಡಿ, ಕಂಡಕರ್ಣ, ಕರಿಂಗುಟ್ಟಿಶಾಸ್ತಾವು, ಶ್ರೀ ಪೊಟ್ಟನ್ ದೈವ ಹಾಗೂ ಗುಳಿಗನ್ ದೈವದ ವೆಳ್ಳಾಟಂ ಹಾಗೂ ವಿವಿಧ ಕೋಲಗಳು ಸೋಮವಾರ ಮದ್ಯರಾತ್ರಿಯವರೆಗೆ ನಡೆದವು.ಮಂಗಳವಾರ ಬೆಳಗ್ಗಿನ ಜಾವ ದೈವಗಳ ವೇಷ-ಭೂಷಣ, ನರ್ತನಗಳು ಹಾಗೂ ಮುತ್ತಪ್ಪ ಮತ್ತು ತಿರುವಪ್ಪ ದೇವರುಗಳ ಕೋಲ ನಡೆದವು. ಈ ದೇವಸ್ಥಾನದ ಸಮೀಪ ಪೂಜಿಸಲ್ಪಡುತ್ತಿರುವ ಶ್ರೀ ಭುವನೇಶ್ವರಿದೇವಿ, ಶ್ರೀ ಅಯ್ಯಪ್ಪಸ್ವಾಮಿ, ಶ್ರೀ ನಾಗದೇವತೆಗಳು, ಶ್ರೀ ಗಣಪತಿ ಮೂರ್ತಿಗಳಿಗೆ ಅರ್ಚಕರಿಂದ ವಿಶೇಷ ಪೂಜೆಗಳು ನಡೆದವು.ಸೋಮವಾರ ಸಂಜೆ ಕೇರಳದ ಖ್ಯಾತ ಸಿಂಗಾರಿ ಮೇಳದೊಂದಿಗೆ ಕಳಶದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ದೇವಾಲಯದ ಆವರಣದಲ್ಲೂ ಸಿಂಗಾರಿ ಮೇಳದ ಪ್ರದರ್ಶನ ನೋಡುಗರ ಮನ ಸೆಳೆಯಿತು.
ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಕೃಷ್ಣ ಕುಮಾರ್ ಪೌರೋಹಿತ್ಯದಲ್ಲಿ ಗಣಪತಿ ಹೋಮದೊಂದಿಗೆ ಜಾತ್ರಾ ಮಹೋತ್ಸವ ಪ್ರಾರಂಭಗೊಂಡು, ಮಂಗಳವಾರ ಮಧ್ಯಾಹ್ನ ಗುಳಿಗ ದೇವರ ಕೋಲ ನಡೆದು, ನಂತರ ವಿಷ್ಣುಮೂರ್ತಿ ದೈವದ ಕೋಲದೊಂದಿಗೆ ಜಾತ್ರೆ ಸಂಪನ್ನಗೊಂಡಿತು.ದೇವಾಲಯ ಸಮಿತಿ ಅಧ್ಯಕ್ಷ ಎನ್.ಡಿ. ವಿನೋದ್ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಸನ್ನ ನಾಯರ್ ನೇತೃತ್ವದಲ್ಲಿ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಂಡು ಪೂಜಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದರು. ಎರಡು ದಿನಗಳ ಕಾಲ ಭಕ್ತಾಧಿಗಳಿಗೆ ಅನ್ನದಾನ ನಡೆಯಿತು.