ಸಾರಾಂಶ
ಹಂಗಾರಕಟ್ಟೆಯಲ್ಲಿರುವ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ (55) ಶುಕ್ರವಾರ ಹರಿಪಾದ ಸೇರಿದರು. ಅವರು ಕೆಲವು ತಿಂಗಳಿಂದ ತೀವ್ರ ಅನಾರೋಗ್ಯ ಪೀಡಿತರಾಗಿದ್ದರು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹಂಗಾರಕಟ್ಟೆಯಲ್ಲಿರುವ ಬಾಳೆಕುದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ (55) ಶುಕ್ರವಾರ ಹರಿಪಾದ ಸೇರಿದರು. ಅವರು ಕೆಲವು ತಿಂಗಳಿಂದ ತೀವ್ರ ಅನಾರೋಗ್ಯ ಪೀಡಿತರಾಗಿದ್ದರು.ವಾರಕ್ಕೆರಡು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಶ್ರೀಗಳು, ಶುಕ್ರವಾಗ ಬೆಳಗ್ಗೆ ಡಯಾಲಿಸಿಸ್ ಗೆಂದು ಹೋಗುವಾಗ ಬ್ರಹ್ಮಾವರದ ಬಳಿ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾಗಿತ್ತು. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯದಲ್ಲೇ ಕೊನೆಯುಸಿರೆಳೆದರು.
ಶ್ರೀಮಠದ ಪೂರ್ವ ಸ್ವಾಮೀಜಿಗಳಾದ ಶ್ರೀ ಶಂಕರಾಶ್ರಮ ಸ್ವಾಮಿಜಿಗಳು ಬ್ರಹ್ಮಕ್ಯರಾದ ನಂತರ ಶ್ರೀ ನೃಸಿಂಹಾಶ್ರಮ ಶ್ರೀಗಳು 2006ರಲ್ಲಿ ಬಾಳೆಕುದ್ರು ಮಠದ ಪೀಠಾಧಿಪತಿಗಳಾದರು. ಅವರಿಗೆ ಶೃಂಗೇರಿ ಹಿರಿಯ ಶ್ರೀಗಳ ನೇತೃತ್ವದಲ್ಲಿ ಹೆಬ್ಬರು ಮಠದ ನಾರಾಯಣಾಶ್ರಮ ಸ್ವಾಮಿಗಳು ಸನ್ಯಾಸ ದೀಕ್ಷೆ ನೀಡಿದ್ದರು. ಇತ್ತೀಚೆಗೆ ತಮ್ಮ ಅನಾರೋಗ್ಯದ ಕಾರಣಕ್ಕೆ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಗಳನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ನಿಯೋಜಿಸಿದ್ದಾರೆ.ಹಂಗಾರಕಟ್ಟೆಯಲ್ಲಿ ನದಿಗಳ ಸಂಗಮ ಪ್ರದೇಶದ ಹಸಿರು ತೋಟ, ಗದ್ದೆಗಳ ಮಧ್ಯೆ ಋಷಿ ಸಂಸ್ಕೃತಿಗೆ ಹೆಸರುವಾಸಿಯಾಗಿರುವ ಬಾಳೆಕುದ್ರು ಮಠ, ಇದರ ಪೀಠಾಧಿಕಾರಿಯಾಗಿ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು, ಮಾತ್ರವಲ್ಲದೆ ತಮ್ಮ ಮಠದಲ್ಲಿ 5 ಎಕರೆ ಜಮೀನಿನಲ್ಲಿ ಬೇಸಾಯವನ್ನು ಮಾಡಿಸುತ್ತಾ ಋಷಿ ಸಂಸ್ಕೃತಿಗೂ ಕೃಷಿ ಸಂಸ್ಕೃತಿಗೂ ರಾಯಭಾರಿಯಂತೆ ಕರ್ತವ್ಯ ನಿರ್ವಹಿಸಿದ್ದರು.