ಎಲ್ಲೆಡೆ ಸಂಭ್ರಮದ ಶ್ರೀರಾಮನವಮಿ ಹಬ್ಬ

| Published : Apr 07 2025, 12:30 AM IST

ಸಾರಾಂಶ

ಶ್ರೀರಾಮಚಂದ್ರ ಮಠವೆಂದೇ ಪ್ರಸಿದ್ಧವಾದ ಚಿತ್ರಗಿಯ ರಾಮದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಹಬ್ಬವನ್ನಾಚರಿಸಿದರು.

ಕುಮಟಾ: ತಾಲೂಕಿನಾದ್ಯಂತ ಮರ್ಯಾದಾಪುರುಷ ಶ್ರೀರಾಮನವಮಿ ಹಬ್ಬವನ್ನು ಸಂಭ್ರಮೋಲ್ಲಾಸದಿಂದ ಆಚರಿಸಲಾಗಿದ್ದು, ಶ್ರೀರಾಮಚಂದ್ರ ಮಠವೆಂದೇ ಪ್ರಸಿದ್ಧವಾದ ಚಿತ್ರಗಿಯ ರಾಮದೇವಸ್ಥಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಹಬ್ಬವನ್ನಾಚರಿಸಿದರು.

ಮಂದಿರವಾದ ಚಿತ್ರಗಿಯ ಶ್ರೀರಾಮಚಂದ್ರ ಮಠದ ಗುಡಿಗೆ ಬೆಳಿಗ್ಗೆಯಿಂದಲೇ ಭಕ್ತರು ಆಗಮಿಸಿ ನಿರಂತರ ರಾಮತಾರಕ ಮಂತ್ರ ಹಾಗೂ ಭಜನೆಯಲ್ಲಿ ಪಾಲ್ಗೊಂಡರು. ಇನ್ನೊಂದೆಡೆ ವೈದಿಕರಿಂದ ವೇದಘೋಷ, ಹವನಾದಿ ಕೈಂಕರ್ಯಗಳು ಭಕ್ತರ ಉತ್ಸಾಹಕ್ಕೆ ಶಕ್ತಿ ತುಂಬಿ ಮೆರುಗು ಹೆಚ್ಚಿಸಿತು.

ದಿನವಿಡೀ ಭಕ್ತರು ಆಗಮಿಸಿ ಸೇವೆ ಸಲ್ಲಿಸಿದ್ದು, ರಾಮನವಮಿಯ ಕೋಸಂಬರಿ, ಪಾನಕ ಸಹಿತ ಪ್ರಸಾದ ಸ್ವೀಕರಿಸಿ, ಸಂತರ್ಪಣೆಯ ಸವಿಯುಂಡರು. ಚಿತ್ರಗಿ ರಾಮಮಂದಿರಕ್ಕೆ ಶಾಸಕ ದಿನಕರ ಶೆಟ್ಟಿ ಸಹಿತ ಹಲವು ಗಣ್ಯರು ಭೇಟಿ ನೀಡಿ ದರ್ಶನ ಪಡೆದರು.

ತಾಲೂಕಿನಾದ್ಯಂತ ರಾಮ ಮತ್ತು ಹನುಮನ ಸನ್ನಿಧಾನಗಳಲ್ಲಿ ಭಜನೆ, ವಿಶೇಷ ಪೂಜೆ, ಹವನಾದಿ ಪುನಸ್ಕಾರಗಳಲ್ಲಿ ಭಕ್ತರು ಪಾಲ್ಗೊಂಡು ಪುನೀತರಾದರು. ಸೀಮೆಒಡೆಯ ಚಂದಾವರದ ಹನುಮಂತ ದೇವರು, ದಿವಗಿ ಮಠ, ಕರ್ಕಿಮಕ್ಕಿ ಆಂಜನೇಯ ಹಾಗೂ ಬಾಡ, ಕುಂಭೇಶ್ವರ, ರಥಬೀದಿ, ಕಲ್ಲಗುಡ್ಡ, ಕಡೆಭಾಗ ಇನ್ನಿತರ ಹಲವು ಕಡೆಗಳಲ್ಲಿರುವ ಹನುಮನ ಮೂರ್ತಿಗೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವದೊಂದಿಗೆ ಹಬ್ಬವನ್ನಾಚರಿಸಲಾಯಿತು. ರಾಮನವಮಿ ಪ್ರಯುಕ್ತ ಎಲ್ಲೆಡೆ ತಳಿರು ತೋರಣ ಕಟ್ಟಿ ಕೇಸರಿಮಯವಾಗಿ ಕಂಗೊಳಿಸಿದೆ. ಸಂಜೆ ಹಲವೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದೆ.