ಶ್ರೀರಾಮ ಮಂದಿರ ಉದ್ಘಾಟನೆ ದಿನವೇ ಹುಬ್ಬಳ್ಳಿಯಲ್ಲಿ ಶ್ರೀರಾಮ ದರ್ಶನ!

| Published : Dec 21 2023, 01:15 AM IST

ಶ್ರೀರಾಮ ಮಂದಿರ ಉದ್ಘಾಟನೆ ದಿನವೇ ಹುಬ್ಬಳ್ಳಿಯಲ್ಲಿ ಶ್ರೀರಾಮ ದರ್ಶನ!
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಈ ಸಮಾರಂಭಕ್ಕೆ ಬೇಕಾದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಈಗ ಹುಬ್ಬಳ್ಳಿಯಲ್ಲಿ ಅದೇ ದಿನದಂದು ಸಂಜೆ 6 ಗಂಟೆಗೆ "ಶ್ರೀರಾಮಚಂದ್ರ " ದೊಡ್ಡಾಟ ಪ್ರದರ್ಶನಕ್ಕೆ ಸಿದ್ಧತೆ ನಡೆಯುತ್ತಿದೆ.

- ಹುಬ್ಬಳ್ಳಿಯಲ್ಲಿ ಜ. 22ರಂದು ಜನಪದ ಕಲಾಬಳಗದಿಂದ ದೊಡ್ಡಾಟ

- ತಿಂಗಳಿನಿಂದ ದೊಡ್ಡಾಟ ತರಬೇತಿ ಪಡೆಯುತ್ತಿರುವ ಕಲಾವಿದರುಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಅಯೋಧ್ಯೆಯಲ್ಲಿ ಜ. 22ರಂದು ಶ್ರೀರಾಮಮಂದಿರ ಉದ್ಘಾಟನೆಯಾಗಲಿದ್ದು, ಶ್ರೀರಾಮನ ದರ್ಶನಕ್ಕೆ ದೇಶದ ಜನರು ಎದುರು ನೋಡುತ್ತಿದ್ದಾರೆ. ಆದರೆ, ಅದೇ ದಿನ ಹುಬ್ಬಳ್ಳಿ ಜನತೆಗೆ ಜನಪದ ಕಲಾ ಬಳಗ ಟ್ರಸ್ಟ್‌ ಶ್ರೀರಾಮನ ದರ್ಶನಕ್ಕೆ ಮುಂದಾಗಿದೆ.

ದೊಡ್ಡಾಟ ಪ್ರದರ್ಶನದ ಮೂಲಕ ಶ್ರೀರಾಮನ ದರ್ಶನ ಮಾಡಲಿಸಲಿದೆ ಜಾನಪದ ಕಲಾ ಬಳಗ ಟ್ರಸ್ಟ್‌. ಕಳೆದ ಒಂದು ತಿಂಗಳಿಂದ ತರಬೇತಿ ನಡೆಯುತ್ತಿದ್ದು, ಬಳಗದ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಶ್ರೀರಾಮ ಜನ್ಮಭೂಮಿಗಾಗಿ ಹಲವು ಹೋರಾಟಗಳ ನಂತರ ಈಗ ಅಯೋಧ್ಯೆಯಲ್ಲಿ ಬೃಹತ್‌ ಪ್ರಮಾಣದ ಸುಂದರವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದೆ. ಜ. 22ರಂದು ಶ್ರೀರಾಮನ ಪ್ರಾಣಪ್ರತಿಷ್ಠಾಪನಾ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಈ ಸಮಾರಂಭಕ್ಕೆ ಬೇಕಾದ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಈಗ ಹುಬ್ಬಳ್ಳಿಯಲ್ಲಿ ಅದೇ ದಿನದಂದು ಸಂಜೆ 6 ಗಂಟೆಗೆ "ಶ್ರೀರಾಮಚಂದ್ರ " ದೊಡ್ಡಾಟ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಹುಬ್ಬಳ್ಳಿಯಲ್ಲಿರುವ ಜನಪದ ಕಲಾ ಬಳಗ ಟ್ರಸ್ಟ್‌ ಹಲವು ವರ್ಷಗಳಿಂದ ದೊಡ್ಡಾಟ ಉಳಿವಿಗಾಗಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯಲ್ಲಿರುವ ಬಹುತೇಕರು ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದರೊಂದಿಗೆ ಈ ದೊಡ್ಡಾಟ ಕಲಿಕೆ, ಪ್ರದರ್ಶನಕ್ಕೆ ಮುಂದಾಗಿದ್ದಾರೆ.

7 ದೊಡ್ಡಾಟ ಪ್ರದರ್ಶನ:

ಇದೇ ಕಲಾ ಸಂಸ್ಥೆ ಈಗಾಗಲೇ ಏಳು ಬಾರಿ "ಕರ್ಣಪರ್ವ " ದೊಡ್ಡಾಟ ಪ್ರದರ್ಶಿಸಿದೆ. ಈಗ ಹುಬ್ಬಳ್ಳಿಯಲ್ಲಿ 8ನೇ ಪ್ರದರ್ಶನವಾಗಿ "ಶ್ರೀರಾಮಚಂದ್ರ " ದೊಡ್ಡಾಟ ಪ್ರದರ್ಶನಕ್ಕೆ ಮುಂದಾಗಿದೆ. ಇದರೊಂದಿಗೆ ಕಳೆದ 5-6 ತಿಂಗಳಿಂದ ಮಕ್ಕಳಿಗೆ, ಉತ್ಸಾಹಿಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.

ನಶಿಸಿ ಹೋಗುತ್ತಿರುವ ದೊಡ್ಡಾಟ ಕಲೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಇಂದಿನ ಯುವಪೀಳಿಗೆಗೆ ಅದರ ಪ್ರಾಮುಖ್ಯತೆ, ಮಹತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಈ ಜನಪದ ಕಲಾ ಬಳಗ ನಿರಂತರವಾಗಿ ಶ್ರಮಿಸುತ್ತಿದೆ. ಸಾಮಾನ್ಯ ನಾಟಕಗಳಂತೆ ಇದರಲ್ಲಿ ಭಾಷೆ ಇರುವುದಿಲ್ಲ. ಪೌರಾಣಿಕ, ದೊಡ್ಡಾಟದ ಹಿನ್ನೆಲೆಗೆ ತಕ್ಕಂತೆ ಭಾಷೆ ಬಳಸಬೇಕಾಗುತ್ತದೆ. ಹಾಗೆಯೇ ಜನರಿಗೆ ಅರ್ಥವಾಗುವಂತೆ ದೊಡ್ಡಾಟದ ಪರಿಭಾಷೆಯಲ್ಲಿ ತಿಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಅಲ್ಲದೇ ನೇಪಥ್ಯಕ್ಕೆ ಸರಿದ ಹಿರಿಯ ದೊಡ್ಡಾಟದ ಕಲಾವಿದರನ್ನು ಗುರುತಿಸಿ ಅವರಿಂದಲೇ ಮಕ್ಕಳಿಗೆ, ಆಸಕ್ತರಿಗೆ ತರಬೇತಿ ನೀಡಲಾಗುತ್ತಿದೆ.

ಕೆ.ಎಸ್‌. ಶರ್ಮಾ ಹಾಲ್‌ನಲ್ಲಿ ತರಬೇತಿ:

ಒಂದು ತಿಂಗಳಿಂದ ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಕೆ.ಎಸ್‌. ಶರ್ಮಾ ಸಭಾಂಗಣದಲ್ಲಿ ಈ ದೊಡ್ಡಾಟದ ತರಬೇತಿ ಆರಂಭವಾಗಿದ್ದು, 30ಕ್ಕೂ ಅಧಿಕ ಪಾತ್ರಧಾರಿಗಳು ನಿತ್ಯವೂ ತಾಲೀಮಿನಲ್ಲಿ ನಿರತರಾಗಿದ್ದಾರೆ. ಅಲ್ಲದೇ ಈ ಕಲೆಯನ್ನು ಮಕ್ಕಳಿಗೂ ಪರಿಚಯಿಸುವ ದೃಷ್ಟಿಯಿಂದ 17 ಮಕ್ಕಳಿಗೆ "ಚಕ್ರವ್ಯೂಹ " ಎಂಬ ದೊಡ್ಡಾಟದ ಉಚಿತ ತರಬೇತಿ ನೀಡಲಾಗುತ್ತಿದೆ. ಯಕ್ಷಗಾನ ಹೇಗೆ ಮುನ್ನೆಲೆಗೆ ಬಂದಿತೋ ಅದೇ ರೀತಿಯಲ್ಲಿ ದೊಡ್ಡಾಟದ ಕಲೆಯನ್ನು ಮುನ್ನೆಲೆಗೆ ತರುವುದು ಈ ಕಲಾ ಬಳಗದ ಪ್ರಮುಖ ಧ್ಯೇಯವಾಗಿದೆ.

ಜ. 2ರಂದು ಪ್ರಯೋಗಾರ್ಥ ಪ್ರದರ್ಶನ:

ಕಲಾ ತಂಡದಿಂದ ಜ. 2ರಂದು ಅರವಿಂದ ನಗರದಲ್ಲಿ ಪ್ರಯೋಗಾರ್ಥವಾಗಿ ದೊಡ್ಡಾಟ ಪ್ರದರ್ಶನ ಮಾಡಲಾಗುತ್ತಿದೆ. ನಂತರ ಜ. 22ರಂದು ಇದೇ "ಶ್ರೀರಾಮಚಂದ್ರ " ದೊಡ್ಡಾಟ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಕಲಾ ಬಳಗದ ಸರ್ವ ಸದಸ್ಯರ ಸಭೆ ಕರೆದು ನಿರ್ಧರಿಸಲಾಗಿದ್ದು, ಜ. 22ರಂದು ಸಂಜೆ 6 ಗಂಟೆಗೆ ದೇಶಪಾಂಡೆ ನಗರದಲ್ಲಿರುವ ಸವಾಯಿ ಗಂಧರ್ವ ಸಭಾಂಗಣ ಇಲ್ಲವೇ ನೆಹರು ಕ್ರೀಡಾಂಗಣದಲ್ಲಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಂಡದ ಸದಸ್ಯ ರಮೇಶ ಕರಿಬಸಮ್ಮನವರ ಕನ್ನಡಪ್ರಭಕ್ಕೆ ತಿಳಿಸಿದರು.

ನೇಪಥ್ಯಕ್ಕೆ ಸರಿದ ದೊಡ್ಡಾಟ ಕಲೆಯನ್ನು ಎಲ್ಲರಿಗೂ ಪರಿಚಯಿಸುವುದರೊಂದಿಗೆ ಮುನ್ನಲೆಗೆ ತರುವ ಉದ್ದೇಶ ಹೊಂದಲಾಗಿದೆ. ದೊಡ್ಡಾಟದ ಮೂಲಕ ಶ್ರೀರಾಮನ ಜೀವನ ಚರಿತ್ರೆಯನ್ನು ಜನತೆಗೆ ತಿಳಿಸುವ ಚಿಕ್ಕ ಪ್ರಯತ್ನಕ್ಕೆ ಕಲಾ ಬಳಗ ಮುಂದಾಗಿದೆ ಎನ್ನುತ್ತಾರೆ ಜನಪದ ಕಲಾ ಬಳಗದ ಸಹಕಾರ್ಯದರ್ಶಿ ಶಿವರುದ್ರಪ್ಪ ಬಡಿಗೇರ.

ಇಂದು ದೊಡ್ಡಾಟ ಪ್ರದರ್ಶನ ಮರಿಚಿಕೆಯಾಗಿದೆ. ಕಳೆದ 15-20 ವರ್ಷಗಳ ಹಿಂದೆ ದೊಡ್ಡಾಟ ಪ್ರದರ್ಶನ ಆಯೋಜಿಸಿದರೆ ಸಾಕು ದೂರದ ಹತ್ತಾರು ಹಳ್ಳಿಗಳಿಂದ ಜನರು ಬರುತ್ತಿದ್ದರು. ಈಗ ಈ ಸ್ಥಿತಿ ಇಲ್ಲ. ಇಂತಹ ದಿನಗಳಲ್ಲೂ ದೊಡ್ಡಾಟ ಕಲೆಯ ಉಳಿವಿಗೆ ಶ್ರಮಿಸುತ್ತಿರುವ ಕಲಾ ಬಳಗದ ಕಾರ್ಯ ಶ್ಲಾಘನೀಯ ಎನ್ನುತ್ತಾರೆ ಕೇಶ್ವಾಪುರ ನಗರದ ಹಿರಿಯರಾದ ಉಳವಪ್ಪ ಕಾಶಿ.