ಅಪೂರ್ಣ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ: ಉಗ್ರಪ್ಪ ಆರೋಪ

| Published : Jan 14 2024, 01:30 AM IST / Updated: Jan 14 2024, 03:27 PM IST

ಅಪೂರ್ಣ ಮಂದಿರದಲ್ಲಿ ಶ್ರೀರಾಮನ ಪ್ರಾಣಪ್ರತಿಷ್ಠಾಪನೆ: ಉಗ್ರಪ್ಪ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಶ್ರೀರಾಮನನ್ನು ಅವಮಾನಿಸಿದೆ, ಅಯೋಧ್ಯೆಯಲ್ಲಿ ಅಪೂರ್ಣ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದೆ. ರಾಮ ಮಂದಿರ ಹೆಸರಿನಲ್ಲಿ ಕೇಂದ್ರ ಸರ್ಕಾರ ರಾಜಕಾರಣ ಮಾಡಬಾರದು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಆಕ್ಷೇಪಿಸಿದ್ದಾರೆ.

ಹೊಸಪೇಟೆ: ಪೂರ್ಣಗೊಳ್ಳದ ರಾಮಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದು, ಕೇಂದ್ರ ಸರ್ಕಾರ ಶ್ರೀರಾಮಚಂದ್ರನನ್ನು ಅವಮಾನಿಸಿದೆ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆರೋಪಿಸಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರು, ರಾಮಮಂದಿರ ಹೆಸರಿನಲ್ಲಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ರಾಜಕಾರಣ ಮಾಡಬಾರದು. ಚುನಾವಣೆ ಆಯೋಗ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

ಇಡೀ ರಾಷ್ಟ್ರದಲ್ಲಿ ನೈಜ ರಾಜಕಾರಣ ಸ್ತಬ್ಧ ಆಗಿದೆ. ಕುತಂತ್ರ ರಾಜಕಾರಣ ನಡೆಯುತ್ತಿದೆ. ನೈಜ ಧರ್ಮಗುರುಗಳು, ಮಠಾಧೀಶರು ಮತ್ತು ಶಂಕರಾಚಾರ್ಯರ ಪೀಠದ ಪೀಠಾಧಿಪತಿಗಳ ಮಾತುಗಳಿಗೆ ಮನ್ನಣೆ ಇಲ್ಲದಂತಾಗಿದೆ. ಲೋಕಸಭೆ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗ ಧರ್ಮ, ದೇವರು ಹೆಸರಿನಲ್ಲಿ ರಾಜಕಾರಣ ಮಾಡಬಾರದು. ಚುನಾವಣೆ ಆಯೋಗ ಸಂವಿಧಾನ ನೀಡಿರುವ ಕಾನೂನುಗಳ ಅನ್ವಯ ಕ್ರಮವಹಿಸಬೇಕು ಎಂದರು.

ಪುಲ್ವಾಮಾ ದಾಳಿ: ಪ್ರಧಾನಿ ನರೇಂದ್ರ ಮೋದಿ ಮತ್ತು ತಂಡ 2019ರಲ್ಲಿ ಪುಲ್ವಾಮಾ ದಾಳಿ ವೈಭವೀಕರಿಸಿ ರಾಜಕೀಯ ಲಾಭ ಪಡೆದರು. ಈಗ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾಗುತ್ತದೆ ಎಂದು ರಾಜಕೀಯ ಹುನ್ನಾರ ನಡೆಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದರು.

ಅಂಜನಾದ್ರಿ ಆಂಜನೇಯ ದೇವಾಲಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಪ್ರಾಧಿಕಾರ ಮಾಡಿ ಅಭಿವೃದ್ಧಿಗೊಳಿಸಲಾಗುವುದು. ಆಂಜನೇಯ ದ್ರಾವಿಡಿಯನ್, ಶೂದ್ರ ಎಂದು ಬಿಜೆಪಿಯವರು ಹೈಜಾಕ್‌ ಮಾಡಿರಲಿಕ್ಕಿಲ್ಲ. ಬಿಜೆಪಿಯವರಿಗೆ ಕೊಟ್ಟ ಭವರಸೆ ಈಡೇರಿಸುವ ತಾಕತ್ತು ಇರಬೇಕು ಎಂದು ವ್ಯಂಗ್ಯವಾಡಿದರು.

ದೇಶದ ನಿಜ ದೇಗುಲ ಸಂಸತ್ ಭವನ ರಕ್ಷಣೆ ಮಾಡಲು ಕೇಂದ್ರ ಸರ್ಕಾರಕ್ಕೆ ಆಗಿಲ್ಲ. ಹೊಗೆ ಬಾಂಬ್‌ಅನ್ನು ಸಂಸತ್‌ನಲ್ಲಿ ಹಾಕಲಾಗಿದೆ. ಚೀನಾ ಗಡಿಯಲ್ಲಿ ರಕ್ಷಣೆ ಮಾಡಲು ಆಗಿಲ್ಲ. ರಾಜಕೀಯ ಕಾರಣಕ್ಕಾಗಿ ರಾಜ್ಯವನ್ನು ಮೋದಿ ಕಡೆಗಣಿಸಿದ್ದಾರೆ. 

ಸ್ಥಳೀಯ ಸಂಸ್ಥೆಗಳಿಗೆ ₹೧೪,೬೩೦ ಕೋಟಿ, 15ನೇ ಹಣಕಾಸು ಆಯೋಗದಡಿ ₹17,661 ಕೋಟಿ, ಬರಗಾಲ ಪರಿಹಾರ ₹18,177 ಕೋಟಿಯನ್ನು ಕೇಂದ್ರ ಸರ್ಕಾರ ಕೊಟ್ಟಿಲ್ಲ. ಮೋದಿ ಅವರು ಮೊದಲು ನಾಟಕ ಬಿಟ್ಟು, ದೇಶದ ಪ್ರಧಾನಿಯಾಗಿ ಕೆಲಸ ಮಾಡಲಿ. 

ಹತ್ತು ವರ್ಷದಲ್ಲಿ ₹110 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಏನ್ ಸಾಧನೆ ಮಾಡಿದ್ದಾರೆ? ಸಂವಿಧಾನ ಹಾಗೂ ಆರ್ಥಿಕತೆ ಅನುಗುಣ ಯೋಜನೆ ರೂಪಿಸಲಿ ಎಂದರು.ಸುಪ್ರೀಂ ಕೋರ್ಟ್‌ನ ವಕೀಲರು ಇವಿಎಂ ಕುರಿತು ಹೋರಾಟ ಮಾಡುತ್ತಿದ್ದಾರೆ. 

ಜನರಿಗೆ ಸಂಶಯ ಇದೆ. ಹಾಗಾಗಿ ಬ್ಯಾಲೆಟ್‌ ಪೇಪರ್‌ನಲ್ಲಿ ಚುನಾವಣೆ ನಡೆಸಲಿ. ಬ್ಯಾಲೆಟ್‌ನಲ್ಲಿ ಚುನಾವಣೆ ನಡೆಸಿ ಬಿಜೆಪಿ ಗೆದ್ದರೆ ನಾನು ರಾಜಕಾರಣ ಬಿಡುವೆ ಎಂದು ಸವಾಲು ಹಾಕಿದರು.ಮುಖಂಡರಾದ ಕೆ.ಬಿ. ಶ್ರೀನಿವಾಸ ರೆಡ್ಡಿ, ನಿಂಬಗಲ್‌ ರಾಮಕೃಷ್ಣ, ಡಿ. ವೆಂಕಟರಮಣ, ಪತ್ರೇಶ್‌ ಹಿರೇಮಠ, ತಮನೇಳಪ್ಪ, ವಿನಾಯಕ ಶೆಟ್ಟರ್, ಸಂಗಪ್ಪ, ಬಾಬು ಇದ್ದರು.