ಹುಬ್ಬಳ್ಳಿ:
ಇಲ್ಲಿಯ ಹಳೇಕೋರ್ಟ್ ವೃತ್ತದ ಬಳಿಯ ಶ್ರೀಸಾಯಿ ಮಂದಿರದಲ್ಲಿ ಶ್ರೀರಾಮ ಜನ್ಮೋತ್ಸವ ಅಂಗವಾಗಿ ಭಕ್ತರ ಹರ್ಷೋದ್ಘಾರದ ನಡುವೆ ಗುರುವಾರ ಸಂಜೆ ಅದ್ಧೂರಿಯಾಗಿ ರಥೋತ್ಸವ ಜರುಗಿತು.ಶ್ರೀಸಾಯಿ ಮಂದಿರದಿಂದ ಆರಂಭಗೊಂಡ ರಥೋತ್ಸವದಲ್ಲಿ ವಿವಿಧ ಕಲಾ ತಂಡಗಳು ಭಾಗಿಯಾಗುವ ಮೂಲಕ ಮತ್ತಷ್ಟು ಮೆರಗು ತಂದವು. ಭಕ್ತರು ಶ್ರೀರಾಮ, ಶ್ರೀಸಾಯಿ ಬಾಬಾ ಪರ ಘೋಷಣೆ ಕೂಗಿದರು. ಇದಕ್ಕೂ ಪೂರ್ವದಲ್ಲಿ ಮಂದಿರದಲ್ಲಿ ಸಾಂಘವಾಗಿ ಧಾರ್ಮಿಕ ಕಾರ್ಯಕ್ರಮ ನಡೆದವು. ಬೆಳಗ್ಗೆ ಸಾಯಿಬಾಬಾ ಅವರಿಗೆ ಕಾಕಡಾರತಿ, ಮಂಗಲಸ್ನಾನ, ಅಲಂಕಾರ, ಪೂಜೆ, ಆರತಿ ಮಾಡಲಾಯಿತು. ನಂತರ ಸಚ್ಚರಿತ್ರೆ ಪಾರಾಯಣ ಮಂಗಲವಾಯಿತು. ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಕುಂಕುಮಾರ್ಚನೆ, ವಿಧಿ-ವಿಧಾನ ನೆರವೇರಿದವು. ಬಳಿಕ ಶ್ರೀರಾಮ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಈ ವೇಳೆ ಮಹಿಳೆಯರು, ಮಕ್ಕಳು ಸೇರಿದಂತೆ ಸದ್ಭಕ್ತರು ತೊಟ್ಟಿಲು ತೂಗುವ ಮೂಲಕ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.
ನಂತರ ಮಂದಿರದಲ್ಲಿ ಶ್ರೀಶಿರಡಿ ಸಾಯಿ ಸದ್ಭಕ್ತ ಮಂಡಳಿಯಿಂದ ಹಮ್ಮಿಕೊಂಡಿದ್ದ ಶ್ರೀರಾಮ ಜನ್ಮೋತ್ಸವ ಕಾರ್ಯಕ್ರಮವನ್ನು ಕಾಂಗ್ರೆಸ್ ಯುವ ಮುಖಂಡ ವಿಶಾಲ ಅಬ್ಬಯ್ಯ ಉದ್ಘಾಟಿಸಿದರು. ಎಂಡಬ್ಲ್ಯೂಬಿ ಗ್ರೂಪ್ ನಿರ್ದೇಶಕ ರಾಕೇಶ ಭಾಪಣಾ, ಶ್ರೀಸಾಯಿ ಪರಿವಾರ ವೃದ್ಧಾಶ್ರಮದ ಸಲಹೆಗಾರ ಸುರೇಶ ಅಗರವಾಲ್ ಮಾತನಾಡಿದರು. ಶ್ರೀರಾಮ ನವಮಿ ಉತ್ಸವ ಸಮಿತಿ ಅಧ್ಯಕ್ಷ ಬ್ರಜ್ ಮೋಹನ ಭುತಾಡಾ, ಉದ್ಯಮಿ ಆನಂದ ಕಮತಗಿ, ಪಾರ್ವತಿ ಕಮತಗಿ, ಶಿವಯೋಗಿ ಗದಗಿಮಠ, ರೇಖಾ ಲದ್ವಾ, ಮೋಹನ ಗಿರಡ್ಡಿ, ನೀಪಾ ಮೆಹ್ತಾ, ಮಹೇಂದ್ರ ವಿಕಂಷಿಸ್, ಸಂದೀಪ ಬಿಡಸಾರಿಯಾ, ಗಿರೀಶ ಮಾನೆ, ಪ್ರಕಾಶ ಚಳಗೇರಿ, ಪ್ರಿಯಾಂಕಾ ಕಠಾರೆ, ನರಸಿಂಗಸಾ ರತನ, ಗೋವಿಂದ ಕೋಟಕರ, ಪವಿತ್ರಾ ಕಡಪಟ್ಟಿ ಸೇರಿದಂತೆ ಹಲವರಿದ್ದರು.ದೈವಜ್ಞ ಭವನ:
ನಗರದ ದೈವಜ್ಞ ಭವನದಲ್ಲಿ ದೈವಜ್ಞ ಬ್ರಾಹ್ಮಣ ವಿದ್ಯಾವರ್ಧಕ ಸಂಘ, ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳ, ಯುವಕ ಸಂಘದ ವತಿಯಿಂದ ಶ್ರೀರಾಮ ನವಮಿ ಉತ್ಸವ ನಡೆಯಿತು. ಈ ವೇಳೆ ಕಲಾ ಸುಜಯ ತಂಡದವರು ರಾಮಾಯಾಣ ಆಧಾರಿತ ಚಿಂತನ ರಾಮಾಯಣ ಪ್ರಸ್ತುಪಡಿಸಿದರು. ಮಹಿಳಾ ಮಂಡಳದಿಂದ ಭಕ್ತಿಗೀತೆಗಳ ಹಾಡುಗಾರಿಕೆ ನಡೆಯಿತು. ಮಕ್ಕಳು ರಾಮನ ವೇಷಭೂಷಣದಲ್ಲಿ ಕಂಗೊಳಿಸಿ ಗಮನ ಸೆಳೆದರು.
ಇಂದು ರಾಮನವಮಿ
ಮಾ. 27ರಂದು ಶ್ರೀರಾಮ ನವಮಿ ಅಂಗವಾಗಿ ನಗರದ ಶ್ರೀರಾಮನ ದೇವಸ್ಥಾನಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ನಗರದೆಲ್ಲೆಡೆ ಶ್ರೀ ರಾಮ ನವಮಿ ಉತ್ಸವದ ಅನೇಕ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೇಶ್ವಾಪುರ ಅಂಬಿಕಾ ನಗರದಲ್ಲಿರುವ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ರಾಮನವಮಿ ನಿಮಿತ್ತ ಶುಕ್ರವಾರ ಸಂಜೆ 5.30ಕ್ಕೆ ಪಂ. ಶ್ರೀಯಾದವಾಚಾರ್ಯ ದಿವಾಕರ ಅವರಿಂದ ಪ್ರವಚನ ನಡೆಯಲಿದೆ.