ಸಾರಾಂಶ
ಕನ್ನಡಪ್ರಭ ವಾರ್ತೆ ಮೇಲುಕೋಟೆ
ವಿಶ್ವಾವಸು ಸಂವತ್ಸವರದ ಶ್ರೀರಾಮನವಮಿ ಮಹೋತ್ಸವ ವೈಭವದಿಂದ ನೆರವೇರಿತು.ವೈರಮುಡಿ ಬ್ರಹ್ಮೋತ್ಸವದ ನಾಲ್ಕನೇ ದಿನದ ಅಂಗವಾಗಿ ಮದ್ಯಾಹ್ನ ನಾಗವಲ್ಲೀ ಉತ್ಸವ ನಡೆಯಿತು. ಕಲ್ಯಾಣನಾಯಕಿ ಅಮ್ಮನವರೊಂದಿಗೆ ಪುಷ್ಪಾಲಂಕೃತ ಬಂಗಾರದ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಚೆಲುವನಾರಾಯಣಸ್ವಾಮಿ ಉತ್ಸವ ಮೊದಲು ರಾಮಚಂದ್ರನ ಸಾನ್ನಿಧ್ಯವಿರುವ ಸೀತಾರಣ್ಯಕ್ಕೆ ನೆರವೇರಿತು. ನಂತರ ಕಲ್ಯಾಣಿಗೆ ಬಿಜಯ ಮಾಡಿದ ನಂತರ ನಾಗವಲ್ಲೀ ನರಂದಾಳಿಕಾರೋಹಣ ನಡೆದು 8 ಗಂಟೆಯ ವೇಳೆಗೆ ದೇವಾಲಯ ತಲುಪಿತು. ರಾತ್ರಿ ಚಂದ್ರಮಂಡಲವಾಹನೋತ್ಸವ ಅದ್ಧೂರಿಯಾಗಿ ನೆರವೇರಿತು.
ನಾಣ್ಯ, ಹೂ ಎಸೆಯುವುದು ನಿಷೇಧ:ಏ.7 ರಂದು ರಾತ್ರಿ 8 ಗಂಟೆಗೆ ನಡೆಯುವ ಚೆಲುವನಾರಾಯಣಸ್ವಾಮಿಯವರ ವಿಶ್ವವಿಖ್ಯಾತ ವೈರಮುಡಿ ಉತ್ಸವದಲ್ಲಿ ನಾಣ್ಯ ಎಸೆಯುವುದನ್ನು ನಿಷೇಧಿಸಲಾಗಿದೆ.
ವೈರಮುಡಿಯಂದು ಅತ್ಯಮೂಲ್ಯ ಆಭರಣಗಳಿಂದ ಚೆಲುವನಾರಾಯಣನನ್ನು ಅಲಂಕರಿಸಲಾಗುತ್ತದೆ. ಕೆಲವು ಭಕ್ತರು ಉತ್ಸವದ ಮೇಲೆ ನಾಣ್ಯ ಎಸೆಯುವ ಕಾರಣ ಪುರಾತನ ಆಭರಣಗಳಿಗೆ ಧಕ್ಕೆಯಾಗುತ್ತಿದೆ. ಆದ್ದರಿಂದ ಭಕ್ತರು ಉತ್ಸವದ ಮೇಲೆ ನಾಣ್ಯ, ಹೂವುಗಳನ್ನು ಎಸೆಯಬಾರದು. ಹೂ ಎಸೆಯುವುದರಿಂದ ಸ್ವಾಮಿ ಅಲಂಕಾರ ಮರೆಯಾಗಿ ಭಕ್ತರಿಗೆ ಸ್ವಾಮಿ ಸಂಪೂರ್ಣ ದರ್ಶನ ಲಭ್ಯವಾಗುವುದಿಲ್ಲ. ಈ ಬಗ್ಗೆ ಮೈಕ್‌ನಲ್ಲಿ ಹಾಗೂ ಉತ್ಸವದ ವೇಳೆ ಪೊಲೀಸರೂ ಸಹ ಮೈಕ್ ಮೂಲಕ ಮಾಹಿತಿ ನೀಡಬೇಕು ಎಂದಿದ್ದಾರೆ.ವೈರಮುಡಿ ಸ್ವಾಗತಕ್ಕೆ ಕಮಾನು ನಿರ್ಮಾಣ
ಮಂಡ್ಯ:ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವಕ್ಕೆ ಬರುವ ಸಾರ್ವಜನಿಕರಿಗೆ ಸ್ವಾಗತ ಕೋರಲು ತಾಲೂಕಿನ ಹೊಳಲು ಗ್ರಾಮದ ಪ್ರವೇಶ ದ್ವಾರದಲ್ಲಿ ಕಮಾನು ನಿರ್ಮಿಸಲಾಗಿದೆ. ಸೋಮವಾರ (ಏ.೭)ರಂದು ಬ್ರಹ್ಮೋತ್ಸವ ನಡೆಯಲಿದ್ದು, ಜಿಲ್ಲಾ ಖಜಾನೆಯಿಂದ ವೈರಮುಡಿ, ರಾಜಮುಡಿ ಮತ್ತು ಇತರೆ ಆಭರಣಗಳನ್ನು ಹೊತ್ತೊಯ್ಯುವ ವಾಹನವೂ ಇದೇ ಮಾರ್ಗವಾಗಿ ಸಾಗುವುದರಿಂದ ಅದ್ಧೂರಿಯಾಗಿ ಸ್ವಾಗತಿಸಲು ಗ್ರಾಮಸ್ಥರು ಸಜ್ಜಾಗಿದ್ದಾರೆ.