ಹಾವೇರಿ: ಸ್ಥಳೀಯ ಮಂಜುನಾಥ ನಗರದ ಎಲ್‌ಐಸಿ ಕಾಲನಿಯಲ್ಲಿ ನಿರ್ಮಿಸಿರುವ ಶ್ರೀ ರಾಮಾಂಜನೇಯ ಹಾಗೂ ವಿನಾಯಕ ದೇವರ ಶಿಲಾಮೂರ್ತಿ ಪ್ರಾಣಪ್ರತಿಷ್ಠಾಪನೆ ಹಾಗೂ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ನಿಮಿತ್ತ ಮಾ. 13ರಿಂದ ಮಾ. 15ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಶ್ರೀ ರಾಮಾಂಜನೇಯ ಸೇವಾ ಸಮಿತಿ ಅಧ್ಯಕ್ಷ ಹರೀಶ ಇಂಗಳಗೊಂದಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯಾ ರಾಮಮಂದಿರಕ್ಕೆ ಕಳುಹಿಸಿದ್ದ ಕೋಲಾರದ ಶಿಲ್ಪಕಲ್ಲುಗಳಿಂದ ಈ ವಿಗ್ರಹಗಳನ್ನು ತಯಾರಿಸಿರುವುದು ವಿಶೇಷವಾಗಿದೆ. ಮಾ. 13ರಂದು ಮಧ್ಯಾಹ್ನ 3ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ನೂತನ ವಿಗ್ರಹಗಳ ಮೆರವಣಿಗೆ ನಡೆಯಲಿದೆ. ನಗರದ ಶ್ರೀ ಹುಕ್ಕೇರಿಮಠದಿಂದ ಆರಂಭವಾಗುವ ಮೆರವಣಿಗೆಯು ಎಂ.ಜಿ. ರಸ್ತೆ ಮೂಲಕ ಸಾಗಿ ಜೆ.ಪಿ. ವೃತ್ತ, ಮುನ್ಸಿಪಲ್ ಹೈಸ್ಕೂಲ್ ರಸ್ತೆ, ಬಸವೇಶ್ವರನಗರ, ಮಂಜುನಾಥನಗರ ಮಾರ್ಗವಾಗಿ ಸಂಚರಿಸಿ ಎಲ್‌ಐಸಿ ಕಾಲನಿ ತಲುಪಲಿದೆ. ಮೆರವಣಿಗೆಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾದೇವಿ, ಗಣೇಶ, ಆಂಜನೇಯ ಮೂರ್ತಿಗಳು ಇರಲಿವೆ. ಬಸವೇಶ್ವರನಗರದ ಒಂದನೇ ಕ್ರಾಸ್‌ನಿಂದ ದೇವಸ್ಥಾನದ ವರೆಗೆ 101 ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆಯೂ ನಡೆಯಲಿದೆ. ಆನಂತರ ಜಲಾವಾಸ ನೆರವೇರಿಸಲಾಗುವುದು ಎಂದು ಹೇಳಿದರು.ಮಾ. 14ರಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾದೇವಿ, ಗಣೇಶ, ಆಂಜನೇಯ ಮೂರ್ತಿಗಳಿಗೆ ಧಾನ್ಯಾವಾಸ ಕಾರ್ಯಕ್ರಮ, ಸಂಜೆ ನೂತನ ದೇವಸ್ಥಾನದ ಆಲಯ ಪ್ರವೇಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ. ಮಾ. 15ರಂದು ಬೆಳಗ್ಗೆ 10.15ಕ್ಕೆ ಶುಭ ಮುಹೂರ್ತದಲ್ಲಿ ಸೀತಾ ರಾಮಚಂದ್ರರ ಸಹಿತ ಲಕ್ಷ್ಮಣ, ಹನುಮಂತ ದೇವರ ಮತ್ತು ವಿಘ್ನನಿವಾರಕ ಗಣೇಶನ ಪ್ರಾಣ ಪ್ರತಿಷ್ಠಾಪನೆ, ಹೋಮ-ಹವನ, ಅಭಿಷೇಕ, ಮಂತ್ರಘೋಷಣೆಗಳೊಂದಿಗೆ ದೇವರ ಮೂರ್ತಿ ಪ್ರತಿಷ್ಠಾಪನೆ ಜರುಗಲಿದೆ. ವಿಶೇಷ ಪೂಜೆ, ಮಹಾ ಮಂಗಳಾರತಿ ಜರುಗಲಿದೆ ಎಂದರು.
ಈ ವೇಳೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಹರಸೂರು ಬಣ್ಣದಮಠದ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಗೌರಿಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಳ್ಳಲಿದ್ದು, ಸಕಲ ಸದ್ಭಕ್ತರಿಗೆ ಆಶೀರ್ವಚನ ನೀಡಲಿದ್ದಾರೆ. ಜತೆಗೆ ವಾಸ್ತುತಜ್ಞ ರುದ್ರಣ್ಣ ಕಮ್ಮಾರ, ಆಗಮ ಪಂಡಿತ ಗಿರೀಶ ಶರ್ಮಾ ಉಪಸ್ಥಿತರಿರಲಿದ್ದಾರೆ. ಆದ್ದರಿಂದ ಹಾವೇರಿ ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಸಮಿತಿ ಗೌರವಾಧ್ಯಕ್ಷ ಉಮೇಶ ಬಳ್ಳಾರಿ, ಪ್ರಮೋದ ನವಲೆ, ನಿಂಗಪ್ಪ ಬಾರ್ಕೇರ, ಸಂತೋಷ ಮಡಿವಾಳರ, ಸಂದೀಪ ಮಶಾಲಜಿ ಇದ್ದರು.